ಅಹಮದಾಬಾದ್, ಗುರುವಾರ, 10 ಸೆಪ್ಟೆಂಬರ್ 2009( 09:53 IST )
ಇಶ್ರತ್ ಜಹಾನ್ ಮತ್ತು ಇತರ ಮೂವರನ್ನು ನಕಲಿ ಎನ್‌ಕೌಂಟರ್‌ನಲ್ಲಿ ಪೊಲೀಸರು ಕೊಂದು ಹಾಕಿದ್ದಾರೆ ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್.ಪಿ. ತಮಂಗ್ ನೀಡಿದ ವರದಿಗೆ ಗುಜರಾತ್ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಗುಜರಾತ್ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯವು ಈ ಆದೇಶ ನೀಡಿದೆ. ತಮಂಗ್ ವರದಿಯಲ್ಲಿರುವ ಅಂಶಗಳು ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಮೂರ್ತಿ ಕಲ್ಪೇಶ್ ಜವೇರಿ ತಿಳಿಸಿದ್ದಾರೆ.
ಅಲ್ಲದೆ ಮ್ಯಾಜಿಸ್ಟ್ರೇಟ್ ತಮಂಗ್ ಕಾರ್ಯಾಚರಣೆಯನ್ನು ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹೈಕೋರ್ಟ್‌ನ ಸೂಕ್ತ ವಿಭಾಗಕ್ಕೆ ಇದೇ ಸಂದರ್ಭದಲ್ಲಿ ನ್ಯಾಯಾಧೀಶರು ನಿರ್ದೇಶನ ನೀಡಿದರು.
ಪ್ರಕರಣದ ತನಿಖೆ ನಡೆಸಲು ನ್ಯಾಯಾಲಯವು ಮೂವರು ಐಪಿಎಸ್ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿರುವುದರಿಂದ ಮೆಟ್ರೋಪಾಲಿಟನ್ ಮುಖ್ಯ ಮ್ಯಾಜಿಸ್ಟ್ರೇಟ್‌ರವರು ತನಿಖೆಗೆ ಆದೇಶಿಸಿದಾಗ ಮ್ಯಾಜಿಸ್ಟ್ರೇಟ್ ತಮಂಗ್ ಹೈಕೋರ್ಟ್ ಗಮನಕ್ಕೆ ತರಬೇಕಿತ್ತು ಎಂದು ಮ್ಯಾಜಿಸ್ಟ್ರೇಟ್ ತನಿಖೆಗೆಗೆ ನ್ಯಾಯಮೂರ್ತಿ ಜವೇರಿ ಆಕ್ಷೇಪ ವ್ಯಕ್ತಪಡಿಸಿದರು.
ಅದೇ ಹೊತ್ತಿಗೆ ಹೈಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಮೂವರು ಸದಸ್ಯರ ಸಮಿತಿಯ ವರದಿ ಬರುವ ಮೊದಲು ಇಶ್ರತ್ ತಾಯಿ ಶಮೀಮಾ ಕೌಸರ್ ಪ್ರಸಕ್ತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸ್ವತಂತ್ರರು ಎಂದು ನ್ಯಾಯಾಲಯ ಹೇಳಿದೆ.
ಈ ವರದಿಯನ್ನು ಒಂದು ಸಾಕ್ಷ್ಯವಾಗಿ ಸಮಿತಿಯು ಪರಿಗಣಿಸಲಿದೆ ಎಂದೂ ಜವೇರಿ ತಿಳಿಸಿದರು.
ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 30ರಂದು ನಡೆಸಲಾಗುತ್ತದೆ.
ಕಾಲೇಜು ವಿದ್ಯಾರ್ಥಿನಿ ಇಶ್ರತ್‌ಳನ್ನು ಉಗ್ರಗಾಮಿ ಎಂದು ಬಿಂಬಿಸಿ ನಕಲಿ ಎನ್‌ಕೌಂಟರ್ ಮಾಡಿ ಹತ್ಯೆಗೈಯಲಾಗಿದೆ. ಅವಳಿಗೆ ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆ ಲಷ್ಕರ್-ಇ-ತೋಯ್ಬಾದೊಂದಿಗೆ ಯಾವುದೇ ರೀತಿಯ ಸಂಪರ್ಕವಿರಲಿಲ್ಲ ಎಂದು ತಮಂಗ್ ತಮ್ಮ ವರದಿಯಲ್ಲಿ ತಿಳಿಸಿದ್ದರು.
ಗುಜರಾತ್ ಪೊಲೀಸರು 2004ರ ಜೂನ್ 15ರಂದು ನಡೆಸಿದ್ದ ಎನ್‌ಕೌಂಟರ್‌ನಲ್ಲಿ ಇಶ್ರತ್ ಜಹಾನ್ ಹಾಗೂ ಇತರ ಮೂವರಾದ ಜಾವೇದ್ ಗುಲಾಮ್ ಆಲಿಯಾಸ್ ಪ್ರಾಣೇಶ್ ಕುಮಾರ್ ಪಿಳ್ಳೈ, ಅಮ್ಜದ್ ಅಲಿ ಆಲಿಯಾಸ್ ರಾಜ್‌ಕುಮಾರ್ ಅಕ್ಬರ್ ಆಲಿ ರಾಣಾ ಮತ್ತು ಜೀಶಾನ್ ಜೋಹರ್ ಅಬ್ದುಲ್ ಗಾನಿಯವರನ್ನು ಕೊಂದು ಹಾಕಿದ್ದರು. ಹತ್ಯೆಯಾದವರಲ್ಲಿ ಯಾರೊಬ್ಬರೂ ಭಯೋತ್ಪದಕರಲ್ಲ ಎಂದು ತಮಂಗ್ ವರದಿ ಸಲ್ಲಿಸಿದ್ದಾರೆ.