ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್ ರೈಲು ಪ್ರಯಾಣದಿಂದ ಲಾಭವೆಷ್ಟು, ನಷ್ಟವೆಷ್ಟು? (Forensic | probe | Rahul | Train attack)
 
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಶತಾಬ್ದಿ ರೈಲಿಗೆ ಕಲ್ಲು ತೂರಿರುವುದು ಮಕ್ಕಳಲ್ಲ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ನಾಲ್ಕು ಮಂದಿ ರೈಲಿಗೆ ಕಲ್ಲೆಸೆದಿರುವುದಾಗಿ ರೈಲ್ವೇ ಗಾರ್ಡ್ ಒಬ್ಬರು ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆಗಾಗಿ ಫಾರೆನ್ಸಿಕ್ ತಜ್ಞರು ಬುಧವಾರ ಹರ್ಯಾಣಕ್ಕೆ ಆಗಮಿಸಿದ್ದಾರೆ. ರಾಹುಲ್ ಗಾಂಧಿ ಅವರು ಲುಧಿಯಾನದಿಂದ ದೆಹಲಿಗೆ ಮರಳುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ರೈಲಿಗೆ ಕಿಡಿಗೇಡಿಗಳು ಮಂಗಳವಾರ ಕಲ್ಲುತೂರಿದ್ದರು.

ಪಾಣಿಪತ್‌ಗಿಂತ 20 ಕಿಲೋಮೀಟರ್ ದೂರದಲ್ಲಿರುವ ಗರೌಂದ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ. "ವಿವಿಧ ಸುಳಿವುಗಳ ಆಧಾರದಲ್ಲಿ ನಾವು ತನಿಖೆ ನಡೆಸುತ್ತಿದ್ದೇವೆ. ಇದರ ಹಿಂದೆ ಯಾರಿದ್ದಾರೆ ಎಂದು ತಿಳಿಯಲು ಅಕ್ಕಪಕ್ಕದ ಗ್ರಾಮಸ್ಥರನ್ನು ಪ್ರಶ್ನಿಸಲಾಗುವುದು" ಎಂಬುದಾಗಿ ರೋಹ್ಟಕ್ ವಲಯದ ಐಜಿಪಿ ವಿ. ಕಾಮರಾಜ್ ಅವರು ತನಿಖೆಗೆ ಮುಂಚಿತವಾಗಿ ಹೇಳಿದ್ದರು. ರೈಲು ನಿಧಾನವಾಗಿ ತೆರಳುತ್ತಿರುವ ವೇಳೆಗೆ ನಾಲ್ವರು ಯವಕರು ರೈಲಿಗೆ ಕಲ್ಲು ತೂರಿರುವುದನ್ನು ತಾನು ನೋಡಿರುವುದಾಗಿ ಗಾರ್ಡ್ ಹೇಳಿದ್ದಾರೆಂದು ಕಾಮರಾಜ್ ತಿಳಿಸಿದ್ದಾರೆ.

ಕಲ್ಲು ತೂರಾಟದಿಂದ ಯಾರಿಗೂ ಗಾಯವಾಗದಿದ್ದರೂ, ಸಿ-2, ಸಿ-4, ಮತ್ತು ಸಿ-7 ಬೋಗಿಗಳಿಗೆ ಹಾನಿಯಾಗಿದೆ. ಕಿಟಿಕಿಗೆ ಅಳವಡಿಸಲಾದ ಅವಳಿಗಾಜನ್ನು ತೂರಿ ಕಲ್ಲೊಂದು ಸಿ-4 ಬೋಗಿಯೊಳಗೆ ಬಿದ್ದಿದೆ. ಇದೇ ವೇಳೆ ಇತರ ಬೋಗಿಯ ಗಾಜೂ ಸಹ ಪುಡಿಯಾಗಿದೆ. ರಾಹುಲ್ ಕುಳಿತಿದ್ದ ಸಿ-3 ಬೋಗಿಗೆ ಹಾನಿಯಾಗಿಲ್ಲ.

ರೈಲಿನಲ್ಲಿ ವಿಶೇಷ ರಕ್ಷಣಾ ಪಡೆ(ಎಸ್‌ಜಿಪಿ)ಯ ರಕ್ಷಣೆಯಲ್ಲಿರುವ ವಿಐಪಿ ಪ್ರಯಾಣಿಸುತ್ತಿದ್ದ ಹಿನ್ನೆಲೆಯಲ್ಲಿ ಹರ್ಯಾಣ ಪೊಲೀಸರು ಹಾಗೂ ರೈಲ್ವೇ ರಕ್ಷಣಾ ಪಡೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಎಸ್‌ಜಿಪಿಯು ಪಾಣಿಪತ್ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಅವಕಾಶ ನೀಡಿರಲಿಲ್ಲ.

ಅದಾಗ್ಯೂ, ರಾಹುಲ್ ಗಾಂಧಿಯ ಈ ಮಿತವ್ಯಯ ಪ್ರಯಾಣದಿಂದ ಪ್ರಯಾಸ ಅನುಭವಿಸಿರುವ ಪ್ರಯಾಣಿಕರು ಮಾತ್ರ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. "ಕಿಟಿಕಿ ಬದಿಯಲ್ಲಿ ಕುಳಿತಿದ್ದ ಮಗುವೊಂದಕ್ಕೆ ಅಪಾಯ ಆಗುವ ಸಂಭವವಿತ್ತು. ಇದು ರಾಹುಲ್ ಪ್ರಯಾಣಿಸುತ್ತಿದ್ದಾರೆ ಎಂಬ ಕಾರಣಕ್ಕೆ ಸಂಭವಿಸಿದೆ ಎಂದಾದರೆ ಇಂತಹ ವಿಐಪಿಗಳು ಸಾರ್ವಜನಿಕರೊಂದಿಗೆ ರೈಲಿನಲ್ಲಿ ಪ್ರಯಾಣಿಸದೇ ಇರುವುದು ಒಳಿತು. ದುಷ್ಕರ್ಮಿಗಳು ಎಸೆದ ಕಲ್ಲು ಗುಂಡಿನಂತೆ ರೈಲಿನ ಗಾಜಿಗೆ ಬಜಿದಿದ್ದು, ಪುಡಿಪುಡಿಯಾದ ಗಾಜಿನೊಂದಿಗೆ ಕೆಳಗೆ ಬಿತ್ತು" ಎಂಬುದಾಗಿ ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ಇಷ್ಟಕ್ಕೂ ರಾಹುಲ್ ಗಾಂಧಿಯವರ ಈ ರೈಲು ಪ್ರಯಾಣದಿಂದ ಉಳಿಕೆಯಾದ ಹಣವೆಷ್ಟು ಅಂದರೆ 445 ರೂಪಾಯಿ! ಇವರ ಈ ಪ್ರಯಾಣದಿಂದ ಆಗಿರುವ ನಷ್ಟ ಸಾವಿರಾರು ರೂಪಾಯಿ. ನಷ್ಟ ಬಿಡಿ. ಇದರಿಂದ ಸಾರ್ವಜನಿಕರಿಗೆ ಆಗುವ ಅನಾನೂಕೂಲವೆಷ್ಟು. ಭದ್ರತಾ ಸಿಬ್ಬಂದಿಗಳಂತೂ ಸಾರ್ವಜನಿಕರನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಾರೆ. ಈ ಮಧ್ಯೆ ಮುತ್ತುವ ಮಾಧ್ಯಮದವರು. ಈ ಎಲ್ಲದರ ನಡುವೆ ನಮ್ಮ ಪಾಡನ್ನು ಕೇಳುವವರ್ಯಾರು ಎಂಬುದಾಗಿ ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ಇದು ನಿಜವಾಗಿಯೂ ಮಿತವ್ಯಯದ ಹಾದಿಯೋ ಅಥವಾ ಸಮ್ಮನೆ ಜನರನ್ನು ಮರುಳುಮಾಡುವ ಗಿಮ್ಮಿಕ್ಕೊ ಎಂಬುದು ಅವರ ಪ್ರಶ್ನೆ.

ಕಾಮೆಂಟ್ ಮಾಡುವ ಮೊದಲು ಇಲ್ಲಿ ಓದಿ.
ಸಂಬಂಧಿತ ಮಾಹಿತಿ ಹುಡುಕಿ