"ನಮ್ಮೆಲ್ಲ 'ಪೂಜನೀಯ ದನ'ಗಳೊಂದಿಗೆ ಏಕತೆ ಪ್ರದರ್ಶಿಸಲು ನಾನು ಕೂಡ ದನಗಳ ದರ್ಜೆಯಲ್ಲಿ ಪ್ರಯಾಣಿಸುವೆ" ಎಂಬುದಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶಶಿ ತರೂರ್ ನೀಡಿರುವ ಪ್ರತಿಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಇಂತಹ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದಿದೆ. ಅಲ್ಲದೆ ಈ ಕುರಿತು ಶಿಸ್ತು ಕ್ರಮವನ್ನು ಕೈಗೊಳ್ಳಬೇಕೇ ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ ಎಂದು ಹೇಳಿದೆ.
"ಸಚಿವರ ಈ ಹೇಳಿಕೆಯನ್ನು ಪಕ್ಷವು ಒಪ್ಪುವುದಿಲ್ಲ. ಇದು ಸ್ವೀಕಾರಾರ್ಹವಲ್ಲ. ಈ ಹೇಳಿಕೆಯು ರಾಜಕೀಯ ಅಥವಾ ಇನ್ನ್ಯಾವುದೇ ಭಾವನೆಗಳನ್ನು ಗೌರವಿಸುವುದಿಲ್ಲ" ಎಂಬುದಾಗಿ ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಹೇಳಿದ್ದಾರೆ.
ಟ್ವಿಟರ್‌ನ ತರೂರ್ ಅವರ ಪುಟದಲ್ಲಿ ಓದುಗರೊಬ್ಬರು "ಹೇಳಿ ಸಚಿವರೆ, ನೀವು ಮುಂದಿನ ಬಾರಿ ಕೇರಳಕ್ಕೆ ಪ್ರಯಾಣಿಸುವ ವೇಳೆ ದನದ ದರ್ಜೆಯಲ್ಲಿ ಪ್ರಯಾಣಿಸುವಿರಾ" ಎಂಬುದಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು "ಖಂಡಿತವಾಗಿಯೂ, ನಮ್ಮೆಲ್ಲ 'ಪೂಜನೀಯ ದನ'ಗಳೊಂದಿಗೆ ಏಕತೆ ಪ್ರದರ್ಶಿಸಲು ನಾನು ಕೂಡ ದನಗಳ ದರ್ಜೆಯಲ್ಲಿ ಪ್ರಯಾಣಿಸುವೆ" ಎಂದು ಉತ್ತರಿಸಿದ್ದು ಇದೀಗ ವಿವಾದದ ಕಿಡಿ ಹೊತ್ತಿಸಿದೆ.
ವಿಶ್ವಸಂಸ್ಥೆಯ ಮಾಜಿ ರಾಜತಾಂತ್ರಿಕರಾಗಿರುವ ತರೂರ್ ವಿರುದ್ಧ ಕ್ರಮಕೈಗೊಳ್ಳುವಿರೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ವಕ್ತಾರರು ಇದು ಹೈ ಕಮಾಂಡಿಗೆ ಬಿಟ್ಟ ವಿಚಾರ ಎಂದು ಹೇಳಿದರು.
ರಾಷ್ಟ್ರದಲ್ಲಿ ತೋರಿರುವ ಬರಪರಿಸ್ಥಿತಿ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಯುಪಿಎ ಸರ್ಕಾರ ಮಿತವ್ಯಯದ ಚಳುವಳಿಯನ್ನು ಆರಂಭಿಸಿದ್ದು, ಇದರನ್ವಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಇತರ ಕಾಂಗ್ರೆಸ್ ಸಚಿವರು, ಸಂಸದರು ತಮ್ಮ ವಿಮಾನ ಪ್ರಯಾಣದ ವೇಳೆ ಐಷಾರಾಮಿ ದರ್ಜೆ ತೊರೆದು ಸಾಮಾನ್ಯದರ್ಜೆಯಲ್ಲಿ ಪ್ರಯಾಣಿಸಲು ಆರಂಭಿಸಿದ್ದಾರೆ.
ತರೂರ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಅವರು ಪಂಚತಾರ ಹೋಟೇಲಿನಲ್ಲಿ ದಿನ ಒಂದರ ಲಕ್ಷ ರೂಪಾಯಿಗೂ ಅಧಿಕ ವ್ಯಯಿಸಿ ತಂಗುತ್ತಿರುವುದು ತೀವ್ರ ಟೀಕೆಗೆ ಒಳಪಟ್ಟಿತ್ತು. ಅವರು ತಮ್ಮ ವೆಚ್ಚವನ್ನು ತಾವೇ ಭರಿಸುತ್ತಿರುವುದಾಗಿ ಹೇಳಿದರೂ, ತಕ್ಷಣವೇ ಪಂಚತಾರ ಹೋಟೇಲುಗಳನ್ನು ತ್ಯಜಿಸುವಂತೆ ಪಕ್ಷ ಸೂಚಿಸಿತ್ತು. ತಮಗೆ ಒದಗಿಸಿರುವ ಸರ್ಕಾರಿ ಬಂಗಲೆಗಳ ನವೀಕರಣ ನಡೆಯುತ್ತಿರುವ ಕಾರಣ ತಾವು ಹೋಟೇಲನ್ನು ಅವಲಂಭಿಸಿರುವುದಾಗಿ ಈ ಇಬ್ಬರೂ ಸಚಿವರು ಸಬೂಬು ಹೇಳಿದ್ದರು.
ತರೂರ್ ಅವರು ಮಾನ್ ಸಿಂಗ್ ರಸ್ತೆಯ ತಾಜ್ ಮಹಲ್ ಹೋಟೇಲಿನಲ್ಲಿ ತಂಗುತ್ತಿದ್ದರು. ಇದೀಗ ತಮ್ಮ ವಾಸ್ತವ್ಯವನ್ನು ಭಾರತೀಯ ನೌಕಾಪಡೆಯ ಅತಿಥಿಗೃಹಕ್ಕೆ ಸ್ಥಳಾಂತರಿಸಿದ್ದಾರೆ.