ಮೂರು ವರ್ಷಗಳ ಹಿಂದೆ ಶಿವಸೇನೆಯಿಂದ ಮುನಿಸಿಕೊಂಡು ಹೊರಬಂದು ಎಂಎನ್ಎಸ್ ಪಕ್ಷ ಸ್ಥಾಪಿಸಿದಾಗ, ಬಾಳಾ ಠಾಕ್ರೆಯನ್ನು ಹೇಗೆ ಚಿತ್ರಿಸುವಿರಿ ಎಂದು ಪತ್ರಕರ್ತರು ಸ್ವತಃ ವ್ಯಂಗ್ಯ ಚಿತ್ರಕಾರ ರಾಜ್ ಠಾಕ್ರೆಯನ್ನು ಪ್ರಶ್ನಿಸಿದ್ದರು. ಅದಕ್ಕವರು ಶರಶಯ್ಯೆ ಮೇಲಿರುವ ಭೀಷ್ಮನಂತೆ ಎಂದಿದ್ದರು.
ಇದೀಗ ಚುನಾವಣೆಯಲ್ಲಿ 13ಸ್ಥಾನ ಗೆದ್ದು ಶಿವಸೇನೆಗೆ ಅಧಿಕಾರದ ಗದ್ದುಗೆ ತಪ್ಪಿಸಿರುವ ರಾಜ್ ಠಾಕ್ರೆ 3ವರ್ಷಗಳ ಹಿಂದೆ ಆಡಿದ್ದ ಮಾತನ್ನೇ ಪುನರುಚ್ಚರಿಸಿದ್ದಾರೆ.
ಈಗಲೂ ಬಾಳಾ ಠಾಕ್ರೆಯನ್ನು ಶರಶಯ್ಯೆಯಲ್ಲಿರುವ ಭೀಷ್ಮನಂತೆ ಚಿತ್ರಿಸುವೆ ಎಂದಿದ್ದಾರೆ. ಇದೇ ವೇಳೆ ಗೆಲುವಿಗೆ ಠಾಕ್ರೆ ನನ್ನನ್ನು ಅಭಿನಂದಿಸಲು ಬಯಸಿದರೂ ನಾನದನ್ನು ಸ್ವೀಕರಿಸಲಾರೆ ಎಂದಿದ್ದಾರೆ.
ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಅಧಿಕಾರದ ಗದ್ದುಗೆ ಏರುವ ಕನಸು ನುಚ್ಚುನೂರಾಗಿತ್ತು. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಏರಲು ಎಂಎನ್ಎಸ್ ಕಾರಣ ಎಂದು ಠಾಕ್ರೆ ಗುಡುಗಿದ್ದರು. ಅಲ್ಲದೇ ತಮಗೆ ಮರಾಠಿಗರೇ ಬೆನ್ನಿಗೆ ಚೂರಿ ಹಾಕಿದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.