ಇಸ್ಲಾಮ್‌ಗೂ ಉಗ್ರವಾದಕ್ಕೂ ಸಂಬಂಧ ಅಪ್ಪಟ ಪೂರ್ವಗ್ರಹ: ಅನ್ಸಾರಿ
ನವದೆಹಲಿ, ಬುಧವಾರ, 28 ಅಕ್ಟೋಬರ್ 2009( 11:59 IST )
ಯಾವುದೇ ಧರ್ಮವು ಭಯೋತ್ಪಾದನೆಯನ್ನು ಕ್ಷಮಿಸುವುದಿಲ್ಲ ಮತ್ತು ಇದರ ಮೂಲವನ್ನು ಇಸ್ಲಾಮ್‌ನೊಂದಿಗೆ ಸಂಪರ್ಕಿಸಲು ಯಾರು ಪ್ರಯತ್ನಿಸುತ್ತಾರೋ ಅಂತಹವರು ಅಪ್ಪಟ ಪೂರ್ವಗ್ರಹ ಪೀಡಿತರು ಎಂಬದಾಗಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹೇಳಿದ್ದಾರೆ. ಭಯೋತ್ಪಾದನೆಯು ಇತ್ತೀಚೆಗೆ ಹುಟ್ಟಿಕೊಂಡದ್ದಲ್ಲ, ಆದರೆ ಜಾಗತಿಕರಣ ಹಾಗೂ ತಂತ್ರಜ್ಞಾನದ ಉನ್ನತಿಯು ಅದು ಎಲ್ಲಡೆ ಹಬ್ಬಲು ಮತ್ತು ವಿಧ್ವಂಸಕ ಪರಿಣಾಮ ಬೀರುವಂತೆ ಮಾಡಿದೆ ಎಂಬುದಾಗಿ ಅವರು ಹೇಳಿದ್ದಾರೆ.
ಜಾಮಾ ಮಸೀದಿ ಸಂಯುಕ್ತ ವೇದಿಕೆಯು ಹಮ್ಮಿಕೊಂಡಿರುವ ದ್ವಿತೀಯ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸುತ್ತಾ ಅವರು ಮಾತನಾಡುತ್ತಿದ್ದರು. ಸಮಾರಂಭದಲ್ಲಿ ಪಾಕಿಸ್ತಾನ, ಇಂಡೋನೇಶ್ಯ, ಮಲೇಶ್ಯ, ಟರ್ಕಿ, ಸೂಡಾನ್ ಹಾಗೂ ಮೊರಕ್ಕೊ ಮುಂತಾದ ದೇಶಗಳ ಮುಸ್ಲಿಂ ನಾಯಕರು ಪಾಲ್ಗೊಂಡಿದ್ದರು.
ಭಯೋತ್ಪಾನೆಯನ್ನು ಹಾಗೂ ಇಸ್ಲಾಂ ಅಥವಾ ಇನ್ಯಾವುದೇ ಧರ್ಮದೊಂದಿಗೆ ಗಂಟು ಹಾಕುವವರಿಗೆ ಇತಿಹಾಸದ ಅರಿವಿಲ್ಲ ಅಥವಾ ಅಂತಹವರು ಪೂರ್ವಗ್ರಹವನ್ನು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಉಗ್ರವಾದ, ಮೂಲಭೂತವಾದ ಹಾಗೂ ಭಯೋತ್ಪಾದನೆಯನ್ನು ಬೆಂಬಲಿಸುವರದ್ದು ಅಲ್ಪಸಂಖ್ಯೆ ಎಂಬುದನ್ನು ನೆನಪಿರಿಸಿಕೊಳ್ಳುವುದು ಅತ್ಯವಶ್ಯ ಎಂದು ಅವರು ಈ ಸಂದರ್ಭದಲ್ಲಿ ನಡಿದರು. ಇಂತಹವರು ತಮ್ಮ ಕೃತ್ಯಗಳಿಗಾಗಿ ಯಾವುದೇ ಧಾರ್ಮಿಕ ಅಥವಾ ರಾಜಕೀಯ ಪ್ರಣಾಳಿಕೆ ಅಥವಾ ಸಿದ್ಧಾಂತಗಳನ್ನು ಹೊಂದಿರುವುದಿಲ್ಲ ಎಂದು ಅವರು ಮಾರ್ಮಿಕವಾಗಿ ನುಡಿದರು.