ವಾಶಿಂಗ್ಟನ್, ಶುಕ್ರವಾರ, 20 ನವೆಂಬರ್ 2009( 13:22 IST )
ಶಂಕಿತ ಲಷ್ಕರೆ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿಯ ಒಬ್ಬ ಪ್ರಮುಖ ಪಾಕಿಸ್ತಾನಿ ರಾಜತಾಂತ್ರಿಕ ನೊಬ್ಬನ ಪುತ್ರ ಎಂಬ ಅಂಶ ಬೆಳಕಿಗೆ ಬಂದಿದೆ. ಈತನ ತಾಯಿ ಫಿಲೆಡೆಲ್ಪಿಯಾದಾಕೆಯಾಗಿದ್ದು, ಆತನ ಮೊದಲ ಹೆಸಲು ದಾವೂದ್ ಗಿಲಾನಿ. ದಾವೂದ್ ಬಳಿಕ ತನ್ನ ಹೆಸರನ್ನು 2006ರಲ್ಲಿ ಬದಲಿಸಿದ್ದು, ತನ್ನ ತಾಯಿ ಸೆರಿಲ್ ಹೆಡ್ಲಿಯ ಉಪನಾಮವನ್ನು ಇರಿಸಿಕೊಂಡಿದ್ದಾನೆ ಎಂಬುದಾಗಿ ಮಾಧ್ಯಮ ವರದಿಯೊಂದು ತಿಳಿಸಿದೆ.
ಸಿರಿಲ್ ಹೆಡ್ಲಿ ತನ್ನ ಪತಿಯಿಂದ ವಿಚ್ಚೇದನ ಪಡೆದಿದ್ದು, ಪಾಕಿಸ್ತಾನ ನ್ಯಾಯಾಲಯವು ಆಕೆಯ ಮಕ್ಕಳ ವಶವನ್ನು ಪತಿಗೆ ನೀಡಿತ್ತು. ಬರಿಯ ಹತ್ತುವರ್ಷಗಳು ಪಾಕಿಸ್ತಾನದಲ್ಲಿದ್ದ ಸೆರಿಲ್, ಬಳಿಕ ಫಿಲೆಡೆಲ್ಪಿಯಾಗೆ ತೆರಳಿದ್ದು ಅಲ್ಲಿ 100 ವರ್ಷದ ಹಳೆಯ ಪಾನಗೃಹವೊಂದನ್ನು ಖರೀದಿಸಿ ಅದನ್ನು ಬಳಿಕ ನೈಟ್ ಕ್ಲಬ್ ಆಗಿ ಬದಲಿಸಿದ್ದರು ಎಂಬುದಾಗಿ ಫಿಲೆಡೆಲ್ಪಿಯಾದ ಇಕ್ವೈರರ್ ಪತ್ರಿಕೆ ತಿಳಿಸಿದೆ.
ಆಕೆಯ ಖೈಬರ್ ಪಾಸ್ ಪಬ್ ನಂ.56 ಎಸ್. ಸೆಕೆಂಡ್ ಸ್ಟ್ರೀಟ್‌ನಲ್ಲಿ ಇದೆ. ಪಾಕಿಸ್ತಾನದಲ್ಲಿ ಪುರುಷರಿಗೆ ಮಕ್ಕಳ ಮೇಲೆ ಹಕ್ಕು ಇರುತ್ತದೆ. ಅಲ್ಲಿ ಮಹಿಳೆಯರಿಗೆ ಮಕ್ಕಳ ಮೇಲೆ ಹಕ್ಕಿಲ್ಲ ಎಂಬುದಾಗಿ ಅವರು 1974ರಲ್ಲಿ ನೀಡಿದ ಸಂದರ್ಶನ ಒಂದರಲ್ಲಿ ಹೇಳಿದ್ದರು.
ಆದರೆ ಬಳಿಕ ಹೋರಾಟ ನಡೆಸಿದ ಆಕೆ 1977ರಲ್ಲಿ ತನ್ನ ಪುತ್ರನನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆಗ ಹೆಡ್ಲಿ 16ರ ಹರೆಯದವನಾಗಿದ್ದ. ಸೇನಾ ಶಾಲೆಯಲ್ಲಿ ಕಲಿಯುತ್ತಿದ್ದ ಹೆಡ್ಲಿಯನ್ನು ಕರೆದೊಯ್ಯಲಾಗಿತ್ತು. ಹೆಡ್ಲಿಯ ಒಂದು ಕಣ್ಣು ನೀಲಿಯಾಗಿದ್ದರೆ, ಮತ್ತೊಂದು ಕಂದು ಮಿಶ್ರಿತ ಹಸಿರು ಬಣ್ಣದ್ದು ಎಂಬುದಾಗಿ ಆತನ ಕುಟುಂಬಿಕರು ವಿವರಿಸಿದ್ದಾರೆ.
ಮುಸ್ಲಿಂ ಸಂಪ್ರದಾಯದಲ್ಲಿ ಬೆಳೆದ ಹೆಡ್ಲಿಗೆ ತನ್ನ ತಾಯಿ ಬಾರ್ ನಡೆಸುವುದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿತ್ತು ಎಂದು ಇಕ್ವೈರರ್ ಹೇಳಿದೆ.
ಸ್ವಲ್ಪ ಸಮಯ ತನ್ನ ತಾಯಿಯ ಬಾರ್ ನೋಡಿಕೊಳ್ಳುತ್ತಿದ್ದ ಹೆಡ್ಲಿ ಬಳಿಕ ಅದನ್ನು ತನ್ನ ಸಹೋದರನಿಗೆ ವಹಿಸಿದ್ದ, ಸೆರಿಲ್ ಹೆಡ್ಲಿ 2008ರಲ್ಲಿ ಸಾವನ್ನಪ್ಪಿದ್ದು, ಆಕೆಯ ದ್ವಿತೀಯ ಪತಿ ಡಿಕ್ ಪೊತಿಯರ್ ಇಕ್ವೈರರ್ ಪತ್ರಿಕೆಯ ವರದಿಗಾರನಾಗಿದ್ದು ಅವರೂ 1997ರಲ್ಲಿ ಸಾವನ್ನಪ್ಪಿದ್ದರು.
1977ರಲ್ಲಿ ಹೆಡ್ಲಿ ತನ್ನ ದಾವೂದ್ ಹೆಸರಿನಲ್ಲಿ ಬ್ರೂಕ್ಲಿನ್‌ನಲ್ಲಿ ಬಂಧನಕ್ಕೀಡಾಗಿದ್ದ. ಆತ ಹೆರಾಯಿನ್ ಕಳ್ಳಸಾಗಣಿವೇಳೆ ಸಿಕ್ಕಿಬಿದ್ದಿದ್ದು, 15 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದ.
ಫಿಲಿಡೆಲ್ಪಿಯಾದಲ್ಲಿ ವಿದ್ಯಾಭ್ಯಾಸ ಪೂರೈಸಿರುವ ಹೆಡ್ಲಿ ಲೆಕ್ಕಶಾಸ್ತ್ರ ಅಧ್ಯಯನ ಮಾಡಿದ್ದ. ಈತ ಬಳಿಕ ತನ್ನ ತಾಯಿಯೊಂದಿಗೆ ಫ್ಲಿಕ್ಸ್ ವಿಡಿಯೋ ಎಂಬ ವಿಡಿಯೋ ಅಂಗಡಿಯನ್ನು ಸೆಂಟರ್ ಸಿಟಿಯಲ್ಲಿ ನಡೆಸುತ್ತಿದ್ದ.
2006ರ ಬಳಿಕ ಹೆಡ್ಲಿ ಪಾಕಿಸ್ತಾನ, ಭಾರತ ಹಾಗೂ ಡೆನ್ಮಾರ್ಕಿಗೆ ಸಾಕಷ್ಟು ಬಾರಿ ಪ್ರಯಾಣ ಮಾಡಿದ್ದ. ಕೆಲವೊಮ್ಮೆ ಈತ ತಿಂಗಳಾನುಗಟ್ಟಲೆ ಪಾಕಿಸ್ತಾನದಲ್ಲಿ ಇರುತ್ತಿದ್ದ.
ಈ ಹೆಡ್ಲಿ ಕಳೆದ ತಿಂಗಳು ಎಫ್‌ಬಿಐ ಬಂಧನಕ್ಕೀಡಾಗಿದ್ದಾನೆ. ತರವೂರ್ ರಾಣಾ ಎಂಬ ಸಹಚರನೊಂದಿಗೆ ಬಂಧನಕ್ಕೀಡಾಗಿರುವ ಹೆಡ್ಲಿ ಉತ್ತರ ಭಾರತದ ಎರಡು ವಸತಿ ಶಾಲೆಗಳು ಹಾಗೂ ರಕ್ಷಣಾ ತರಬೇತಿ ಕಾಲೇಜಿನ ಮೇಲೆ ದಾಳಿ ನಡೆಸುವ ಯೋಜನೆ ಹೊಂದಿದ್ದ ಎಂಬುದಾಗಿ ತನಿಖೆಯ ವೇಳೆಗೆ ಹೇಳಿದ್ದ.
ಪ್ರಸಕ್ತ ಚಿಕಾಗೋದ ಫೆಡರಲ್ ಜೈಲಿನಲ್ಲಿರುವ ಹೆಡ್ಲಿ, 2005ರಲ್ಲಿ ಪ್ರವಾದಿ ಮೊಹಮ್ಮದ್ ವ್ಯಂಗ್ಯಚಿತ್ರ ಪ್ರಕಟಿಸಿದ ಡೇನಿಶ್ ಪತ್ರಿಕೆ ಸೇರಿದಂತೆ ವಿದೇಶಗಳಲ್ಲಿ ದಾಳಿ ನಡೆಸಲು ಯೋಜಿಸಿದ್ದ. ಈತನ ಬ್ಯಾಗಿನಲ್ಲಿ ಡೇನಿಶ್ ಪತ್ರಿಕೆಯ ಮುಖಪುಟ ಹಾಗೂ ಪತ್ರಿಕಾ ಕಚೇರಿಯ ಪ್ರವೇಶ ಪ್ರದೇಶದ ವಿಡಿಯೋಗಳನ್ನು ಹೊಂದಿದ್ದ.
ಹೆಡ್ಲಿ ಮೇಲೆ ಉಗ್ರರಿಗೆ ಬೆಂಬಲ ಹಾಗೂ ವಸ್ತುಗಳನ್ನು ಸರಬರಾಜು ಮಾಡಿರುವ ಸಂಚಿನ ಆರೋಪ ಹೊರಿಸಲಾಗಿದ್ದು, ಜಾಮೀನು ರಹಿತ ಬಂಧನದಲ್ಲಿರಿಸಲಾಗಿದೆ.
165 ಮಂದಿಯನ್ನು ಆಹುತಿ ಪಡೆದಿರುವ ಮುಂಬೈ ದಾಳಿಯ ಹಿಂದೆಯೂ ಹೆಡ್ಲಿ ಇರಬಹುದು ಎಂಬುದಾಗಿ ಭಾರತೀಯ ಪ್ರಾಧಿಕಾರ ಶಂಕಿಸಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.
ಡೇನಿಶ್ ಪತ್ರಿಕೆಯ ಮೇಲಿನ ದಾಳಿ ಸಂಚಿಗೆ 'ಮಿಕ್ಕಿ ಮೌಸ್ ಪ್ರೊಜೆಕ್ಟ್' ಅಥವಾ 'ನಾರ್ದರ್ನ್ ಪ್ರೊಜೆಕ್ಟ್ 'ಎಂಬುದಾಗಿ ಹೆಸರಿರಿಸಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಡಾಕ್ಟರ್ ಮ್ಯಾರೀಡ್! ಇತ್ತೀಗೆ ಲಷ್ಕರೆ ಉಗ್ರ ಇಲ್ಯಾಸ್ ಕಾಶ್ಮೀರಿ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ್ದಾಗ ಹೆಡ್ಲಿ ಈ ವಿಚಾರವನ್ನು ತನ್ನ ಸಂಕೇತ ಭಾಷೆಯಲ್ಲಿ ದಾಖಲಿಸಿದ್ದ. ಕಾಶ್ಮೀರಿಯ ಸಾವನ್ನು ಆತ 'ಡಾಕ್ಟರ್‌ಗೆ ಮದುವೆ ಆಗಿರಬಹುದು' (ಡಾಕ್ಟರ್ ಮೆ ಹ್ಯಾವ್ ಗಾಟನ್ ಮ್ಯಾರಿಡ್) ಎಂಬುದಾಗಿ ದಾಖಲಿಸಿಕೊಂದಿದ್ದಾನೆ. ಮತ್ತು ಇದು 'ಹೂಡಿಕೆಗಳ'(ಇನ್ವೆಸ್ಟ್‌ಮೆಂಟ್ಸ್) ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದು ಹೇಳಿಕೊಂಡಿದ್ದಾನೆ. ಹೂಡಿಕೆ ಅಂದರೆ ಆತನ ಸಂಕೇತ ಭಾಷೆಯಲ್ಲಿ ಹಿಂಸಾತ್ಮಾಕ ದಾಳಿಗಳು ಎಂಬುದಾಗಿ ಎಫ್‌ಬಿಐ ಏಜೆಂಟ್‌ಗಳು ಹೇಳಿದ್ದಾರೆ.
ಮಾಜಿ ಪಾಕ್ ಸೇನಾಧಿಕಾರಿಯೊಂದಿಗೂ ಸಂಪರ್ಕ ಹೆಡ್ಲಿ ಹಾಗೂ ರಾಣಾರ ಸಂಚಿನಲ್ಲಿ ಪಾಕಿಸ್ತಾನದ ಮಾಜಿ ಸೇನಾಧಿಕಾರಿಯೂ ಸಹ ಸಂಚುಗಾರನಾಗಿದ್ದ ಎಂಬುದಾಗಿ ಅಮೆರಿಕ ಸರ್ಕಾರಿ ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ. ಪಾಕಿಸ್ತಾನಿ ಸೇನೆ ಹಾಗೂ ಗುಪ್ತಚರ ಅಧಿಕಾರಿಗಳು, ಭಾರತ ಸೇರಿದಂತೆ ಪಾಕಿಸ್ತಾನದ ವಿರೋಧಿಗಳ ಮೇಲೆ ದಾಳಿ ನಡೆಸಲು ಉಗ್ರರನ್ನು ಬೆಂಬಲಿಸುತ್ತಾರೆ ಎಂಬುದಾಗಿ ಅಮೆರಿಕ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ.