ಮಾಧ್ಯಮಗಳು ತಪ್ಪುತಪ್ಪಾಗಿ ಮತ್ತು ಪಕ್ಷಪಾತಿತನದ ವರದಿಗಾರಿಕೆ ಮಾಡುತ್ತಿವೆ ಎಂದು ದೂರಿರುವ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆ ಮಾಧ್ಯಮಗಳೇನು ದೇವರಲ್ಲ ಎಂದು ಹೇಳಿದ್ದಾರೆ. ಶಿವಸೇನಾದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಠಾಕ್ರೆ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದು, ಸೇನಾಕಾರ್ಯಕರ್ತರು ಶುಕ್ರವಾರ ಮುಂಬೈ ಹಾಗೂ ಪುಣೆಯಲ್ಲಿ ಮಾಧ್ಯಮ ಕಚೇರಿಗಳ ಮೇಲೆ ನಡೆಸಿರುವ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಮಾಧ್ಯಮಗಳು ಶಿವಸೇನಾದ ಪ್ರತಿಷ್ಠೆಗೆ ಮಸಿಬಳಿಯುತ್ತಿದ್ದು, ಪ್ರತೀಕಾರದ ಕ್ರಮಕೈಗೊಳ್ಳುತ್ತಿವೆ ಎಂದು ಅವರು ದೂರಿದ್ದಾರೆ. ತನ್ನ ಹೇಳಿಕೆಗಳನ್ನು ತಿರುಚಿರುವ ಮಾಧ್ಯಮಗಳು ಸಚಿನ್ ಪ್ರಕರಣವನ್ನು ಒಂದು ವಿವಾದವಾಗಿಸಿವೆ ಎಂದು ಆರೋಪಿಸಿದ್ದು, ಇದು ಮರಾಠಿಗರನ್ನು ಕೆರಳಿಸಿದೆ ಎಂದು ಅವರು ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿವೆ ಎಂದು ದೂರಿದ ಅವರು ವಿರೋಧಪಕ್ಷಗಳು ಹಾಗೂ ಪ್ರಭಾವಿ ಮಂದಿಯ ಕೈಗೊಂಬೆಯಾಗಿವೆ ಎಂದೂ ಠಾಕ್ರೆ ದೂರಿದರು.
ಶಿವಸೇವಾ ಸೈನಿಕರು ಮರಾಠಿ ಸುದ್ದಿವಾಹಿನಿ ಐಬಿಎನ್-ಲೋಕಮಾತ ಹಾಗೂ ಇನ್ನೊಂದು ಹಿಂದಿ ವಾಹಿನಿಮೇಲೆ ದಾಳಿನಡೆಸಿದ್ದು, ಪತ್ರಕರ್ತರ ಮೇಲೆ ಹಲ್ಲೆನಡೆಸಿದ್ದರಲ್ಲದೆ, ಪೀಠೋಪಕರಣಗಳು, ಕಿಟಿಕಿ ಬಾಗಿಲುಗಳ ಗಾಜನ್ನು ಪುಡಿಗೈದಿದ್ದರು.