ನಂಬಿದರೆ ನಂಬಿ ಬಿಟ್ಟರೆ ಬಿಡಿ. ಇದು ನಿಜ. ಅದೇನೆಂದರೆ, ಆಂಧ್ರಪ್ರದೇಶದ ಅಧಿಕಾರಿಗಳು ಮಹಾತ್ಮ ಗಾಂಧೀಜಿ ಹೆಸರಲ್ಲಿ, ಅವರದೇ ಭಾವಚಿತ್ರವಿರುವ ಪಡಿತರ ಚೀಟಿಯೊಂದನ್ನು ನೀಡಿದ್ದಾರೆ!
ಇಷ್ಟೆ ಅಲ್ಲ. ಇನ್ನೂ ಆಘಾತಕಾರಿ ವಿಚಾರ ಏನೆಂದರೆ, ಈ ರೇಶನ್ ಕಾರ್ಡಿನಲ್ಲಿ ತಂದೆಯ ಹೆಸರಿರುವೆಡೆ ಮಹಾತ್ಮಾಗಾಂಧಿಯ ತಂದೆಯ ಹೆಸರನ್ನು ನಾಥೂರಾಮ ಗೋಡ್ಸೆ ಎಂದು ನಮೂದಿಸಲಾಗಿದೆ. ಆದರೆ ಇದರಲ್ಲಿ ಗೋಡ್ಸೆ ಸ್ಪೆಲ್ಲಿಂಗ್ ಅನ್ನು Godse ಬದಲಿಗೆ Godsay ಎಂದು ಬರೆಯಲಾಗಿದೆ.
ಬೋಗಸ್ ಕಾರ್ಡ್‌ಗಳ ಪತ್ತೆಗಾಗಿ ಅಧಿಕಾರಿಗಳು ಪರಿಶೀಲನಾ ಕಾರ್ಯ ನಡೆಸುತ್ತಿದ್ದ ವೇಳೆ ಕಾಲ್ಪನಿಕ ವಿಳಾಸದಲ್ಲಿ ನೀಡಲಾಗಿರುವ ಈ ಪಡಿತರ ಚೀಟಿ ಪತ್ತೆಯಾಗಿದೆ. ಇದರು ಕುರಿತು ತನಿಖೆ ನಡೆಸಲು ಚಿತ್ತೂರು ಜಿಲ್ಲಾಧ್ಯಕ್ಷ ವಿ.ಶೇಷಾದ್ರಿ ಆದೇಶ ನೀಡಿದ್ದಾರೆ.
ಚಿತ್ತೂರು ಜಿಲ್ಲೆಯ ರಾಮಚಂದ್ರಪುರಂ ಮಂಡಲದ ಚುಟ್ಟಗುಂಟ ಗ್ರಾಮದಲ್ಲಿ ಈ ಪಡಿತರ ಚೀಟಿ ನೀಡಲಾಗಿದೆ. ಎಂ.ಕೆ. ಗಾಂಧಿ ತಾತ ಹೆಸರಲ್ಲಿರುವ ಈ ಕಾರ್ಡಿನಲ್ಲಿ ಗಾಂಧೀಜಿ ಭಾವಚಿತ್ರವಿದೆ. ಪ್ರಾಯ 65, ತಂದೆಯ ಹೆಸರು ಗೋಡ್‌ಸೆ, ನಂ.15-46541, ಗಾಂಧಿ ಬೀದಿ, ಗಾಂಧಿ ರಸ್ತೆ ಎಂಬ ವಿಳಾಸವಿದೆ. ಇದು ನ್ಯಾಯಬೆಲೆ ಅಂಗಡಿಯ ಮಾಲಕರೊಬ್ಬರ ವಿಳಾಸವಾಗಿದೆ.
ಈ ವಿಚಾರದ ತನಿಖೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಶೇಷಾದ್ರಿಯವರು ತ್ರಿಸದಸ್ಯ ಸಮಿತಿಯೊಂದನ್ನು ನೇಮಿಸಿದ್ದಾರೆ.
ಪಡಿತರ ಚೀಟಿ ನೀಡುವ ವೇಳೆ ಭಾವಚಿತ್ರಗಳನ್ನು ಪಡೆದು ಅದನ್ನು ಚೀಟಿಯಲ್ಲಿ ಅಂಟಿಸುವ ಜವಾಬ್ದಾರಿಯನ್ನು ಹೊಂದಿರುವ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳುವ ಸಾಧ್ಯತೆ ಇದೆ. ಕಂದಾಯ ಅಧಿಕಾರಿಗಳೂ ಸಹ ಹೆಸರು ಹಾಗೂ ವಿಳಾಸವನ್ನು ಪರಿಶೀಲಿಸುವಲ್ಲಿ ಸೋತಿದ್ದಾರೆ.
ಇಂತಹ ಪ್ರಕರಣಗಳು ಇಲ್ಲಿ ಹೊಸದೇನಲ್ಲ. ಈ ಹಿಂದೆಯೂ ರಾಜಕಾರಣಿಗಳು, ಕ್ರೀಡಾಪಟುಗಳು ಮಾತ್ರವಲ್ಲದೆ ಹಿಂದೂ ದೇವರುಗಳ ಹೆಸರಲ್ಲೂ ಕಾರ್ಡ್ ನೀಡಿರುವ ಉದಾಹರಣೆಗಳಿವೆ. ಕಳೆದ ಜೂನ್ ತಿಂಗಳಿನಲ್ಲಿ ವಿಜಿಯನಗರಂ ಜಿಲ್ಲೆಯ ಲಕ್ಷ್ಮಿ ಎಂಬ ಮಹಿಳೆಗೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಭಾವಚಿತ್ರ ಬಳಸಿ ಕಾರ್ಡ್ ನೀಡಲಾಗಿತ್ತು.
ಆದರೆ ಈ ಸರ್ತಿ ರಾಷ್ಟ್ರಪಿತನ ಹೆಸರಲ್ಲಿ ಇಂತಹ ಚೇಷ್ಟೆ ಮಾಡಿರುವ ಕಾರಣ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹಲವು ನ್ಯಾಯಬೆಲೆ ಅಂಗಡಿ ಮಾಲಕರು ಡಜನುಗಟ್ಟಲೆ ಖೊಟ್ಟಿ ಕಾರ್ಡುಗಳನ್ನು ಹೊಂದಿರುವ ಕಾರಣ ಅಧಿಕಾರಿಗಳು ತಮ್ಮ ಪರಿಶೀಲನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವವರಿಗೆ ಬಿಳಿ ಬಣ್ಣದ ಪಡಿತರ ಚೀಟಿ ನೀಡುತ್ತಿದ್ದು, ಇಂತಹವರಿಗೆ ಕಿಲೋ ಒಂದರ ಎರಡು ರೂಪಾಯಿಗೆ ಅಕ್ಕಿ ಹಾಗೂ ಆರೋಗ್ಯವಿಮೆ, ಮನೆ ಸಾಲ ಮುಂತಾದ ಸಾಮಾಜಿಕ ಭದ್ರತೆ ಅನುಕೂಲಗಳು ಲಭಿಸುತ್ತವೆ.
ಕೆಲವು ಜಿಲ್ಲೆಗಳಲ್ಲಿ ಜನತೆಯ ಸಂಖ್ಯೆಗಿಂತ ಹೆಚ್ಚಿನ ಪಡಿತರ ಚೀಟಿಗಳು ನೀಡಲ್ಪಟ್ಟಿರುವ ಕಾರಣ ಅಧಿಕಾರಿಗಳು ಮನೆಮನೆ ತೆರಳಿ ಪರಿಶೀಲನೆ ನಡೆಸುವ ಕಾರ್ಯ ಹಮ್ಮಿಕೊಂಡಿದ್ದಾರೆ. ಆಂಧ್ರ ಪ್ರದೇಶದಾದ್ಯಂತ ಸುಮಾರು 3.5 ಮಿಲಿಯನ್ ಬೋಗಸ್ ಕಾರ್ಡ್‌ಗಳನ್ನು ನೀಡಲಾಗಿದೆ ಎಂದು ಅಂದಾಜಿಸಲಾಗಿದೆ.