26/11: ಸೂಕ್ತ ಮಾಹಿತಿ ಇದ್ದರೆ ಸಮರ್ಥವಾಗಿ ನಿಭಾಯಿಸಬಹುದಿತ್ತು
ನವದೆಹಲಿ, ಸೋಮವಾರ, 23 ನವೆಂಬರ್ 2009( 09:49 IST )
ಅತ್ಯಾಧುನಿಕ ಸಲಕರಣೆಗಳು ಮತ್ತು ಖಚಿತವಾದ ಗುಪ್ತಚರ ಮಾಹಿತಿ ಇದ್ದಿದ್ದರೆ ಕಳೆದ ವರ್ಷ ಉಗ್ರರು ಮುಂಬೈ ಮೇಲೆ ನಡೆಸಿದ ದಾಳಿಯನ್ನು ಇನ್ನಷ್ಟು ಸಮರ್ಥವಾಗಿ ಎದುರಿಸಬಹುದಿತ್ತು ಎಂದು ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ)ಯ ಮಾಜಿ ಮುಖ್ಯಸ್ಥ ಜೆ.ಕೆ.ದತ್ ಹೇಳಿದ್ದಾರೆ.
"ದಾಳಿ ನಡೆಸಿದ ಭಯೋತ್ಪಾದಕರು ದೈಹಿಕವಾಗಿ ಬಹಳ ಸಮರ್ಥರಾಗಿದ್ದರು. ತಾಜ್, ಟ್ರೈಡೆಂಟ್ ಮತ್ತು ನಾರಿಮನ್ ಹೌಸ್‌ನ ಸಂಪೂರ್ಣ ಮಾಹಿತಿ ಹೊಂದಿದ್ದರು. ಹಾಗಾಗಿ ಕಾರ್ಯಾಚರಣೆ ಮುಕ್ತಾಯವಾಗಲು 60 ತಾಸುಗಳು ಬೇಕಾಯಿತು ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ ನೇತೃತ್ವದ ಮುಂಬೈ ಭಯೋತ್ಪಾದಕ ನಿಗ್ರಹ ದಳವು ಇಂತಹ ಪರಿಸ್ಥಿತಿಯನ್ನು ನಿಭಾಯಿಸುವ ಅನುಭವ ಹೊಂದಿರಲಿಲ್ಲ. ದಾಳಿ ನಡೆದ ಬಹಳ ಹೊತ್ತಿನವರೆಗೆ ಈ ದಳದ ಅಧಿಕಾರಿಗಳು ಇದನ್ನು ಗ್ಯಾಂಗ್‌ವಾರ್ ನಡೆಯುತ್ತಿದೆ ಎಂದು ತಿಳಿದಿದ್ದರು. ಅದು ಉಗ್ರರ ದಾಳಿ ಎಂಬುದು ತಿಳಿಯಲು ಬಹಳಹೊತ್ತಾಗಿತ್ತು" ಎಂದು ದತ್ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
"ದಾಳಿಗೆ ಒಳಗಾಗಿದ್ದ ಕಟ್ಟಡಗಳಲ್ಲಿ ಎಷ್ಟು ಮಂದಿ ಭಯೋತ್ಪಾದಕರು ಇದ್ದರು ಎಂಬ ಸ್ಪಷ್ಟ ಗುಪ್ತಚರ ಮಾಹಿತಿ ಇರಲಿಲ್ಲ. ವಿವಿಧ ಗುಪ್ತಚರ ವಿಭಾಗಗಳು 10ರಿಂದ 30 ಮಂದಿ ಭಯೋತ್ಪಾದಕರು ಇರುವ ಮಾಹಿತಿ ನೀಡಿದ್ದರಿಂದ ಕಾರ್ಯಾಚರಣೆಯನ್ನು ನಿಖರವಾಗಿ ನಡೆಸಲು ಸಾಧ್ಯವಾಗಲಿಲ್ಲ" ಎಂದು ದತ್ ತಿಳಿಸಿದ್ದಾರೆ.
ಕಾರ್ಯಾಚರಣೆ ಮುಗಿದ ನಂತರ ಎಷ್ಟು ಮಂದಿ ಭಯೋತ್ಪಾದಕರು ಇದ್ದರು ಎಂದು ತಿಳಿಸಬೇಕು ಎಂದಾಗ, ಗುಪ್ತಚರ ವಿಭಾಗದ ಮುಖ್ಯಸ್ಥರು ಎಕೆ-47 ರೈಫಲ್ ಎಣಿಸಿದರೆ ಗೊತ್ತಾಗುತ್ತದೆ ಎಂದು ತಿಳಿಸಿದ್ದರು ಎಂದರೆ ಭಯೋತ್ಪಾದಕರ ಸಂಖ್ಯೆಯ ಬಗ್ಗೆ ಎಷ್ಟು ಗೊಂದಲವಿತ್ತು ಎಂಬುದು ಇದರಿಂದ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.
ಭದ್ರತಾ ಪಡೆಗಳಿಗೆ ತಾಜ್ ಹೋಟೆಲ್ ಮತ್ತು ನಾರಿಮನ್ ಭವನದ ಸರಿಯಾದ ನಕ್ಷೆಗಳಿರಲಿಲ್ಲ. ಆದರೆ ಭಯೋತ್ಪಾದಕರಿಗೆ ಪ್ರತಿ ಅಂಗುಲ ಜಾಗದ ಸಂಪೂರ್ಣ ಮಾಹಿತಿ ಇತ್ತು. ಹಾಗಾಗಿ ಅವರು ಒಂದೇ ಬಾಗಿಲು ಇರುವ ಕೊಠಡಿಗಳಿಗೆ ಪ್ರವೇಶಿಸಿಲ್ಲ. ಬದಲಿಗೆ ಎರಡು ಅಥವಾ ಮೂರು ಬಾಗಿಲುಗಳಿರುವ ಕೊಠಡಿಗಳನ್ನು ಬಳಸಿಕೊಂಡು ನಮ್ಮ ವಿರುದ್ಧ ಹೋರಾಡಿದ್ದರು ಎಂದು ದತ್ ತಿಳಿಸಿದ್ದಾರೆ.