ಕಳೆದ ವರ್ಷ ಇದೇದಿನದಂದು ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿ ವೇಳೆ ಜೀವಂತ ಸೆರೆಸಿಕ್ಕಿರುವ ಉಗ್ರ ಅಜ್ಮಲ್ ಅಮೀರ್ ಕಸಬ್‌ಗಾಗಿ ಭಾರತ ಸರ್ಕಾರ ಇದುವರೆಗೆ ಮಾಡಿರುವ ವೆಚ್ಚ 31 ಕೋಟಿ ರೂಪಾಯಿ ಮತ್ತು ಇದು ದಿನೇದಿನೇ ಹೆಚ್ಚುತ್ತಲೇ ಹೋಗುತ್ತಿದೆ.
ಮುಂಬೈ ಸರ್ಕಾರ ಈ ನರ ಹಂತಕನನ್ನು ಜೀವಂತವಿಡಲು ಇದುವರೆಗೆ 31 ಕೋಟಿ ರೂಪಾಯಿ ವ್ಯಯಿಸಿದೆ. ಅಂದರೆ ಸರಿಸುಮಾರು ದಿನ ಒಂದರ 8.5 ಲಕ್ಷ ರೂಪಾಯಿ.
ಮುಂಬೈ ದಾಳಿಯ ವಿಚಾರಣೆಗಾಗಿ ಅರ್ಥರ್ ರಸ್ತೆ ಜೈಲಿನಲ್ಲೇ ವಿಶೇಷ ನ್ಯಾಯಾಲಯ ತೆರೆಯಲಾಗಿದೆ. ಸರ್ಕಾರವು ತನ್ನ ಪುರಾವೆಗಳ ಪ್ರಸ್ತುತಿಯನ್ನು ಅಂತ್ಯಗೊಳಿಸಲು ನಿರ್ಧರಿಸಿದೆ. ಆದರೆ ಈ ಮೇ ತಿಂಗಳಲ್ಲಿ ಆರಂಭವಾಗಿರುವ ವಿಚಾರಣೆಯು ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ವಿಚಾರಣೆ ಸಂಪೂರ್ಣಗೊಳ್ಳಲು ಇನ್ನೂ ಎರಡ್ಮೂರು ತಿಂಗಳು ಬೇಕಾಗಬಹುದು ಎಂಬುದಾಗಿ ಸರ್ಕಾರಿ ವಕೀಲ ಉಜ್ವಲ್ ನಿಕಂ ಹೇಳಿದ್ದಾರೆ.
ಕಸಬ್‌ನನ್ನು ಇರಿಸಿರುವ ಜೈಲಿನಲ್ಲಿ ಎಷ್ಟು ಬಿಗಿಬಂದೋಬಸ್ತ್ ಇದೆಯೆಂದರೆ, ಒಂದು ಲಾರಿಗಟ್ಟಲೆ ಸ್ಫೋಟಕಗಳನ್ನು ಒಯ್ದರೂ ಏನೂ ಆಗದಂತಹ ವ್ಯವಸ್ಥೆಮಾಡಲಾಗಿದೆ. ಕಸಬ್‌ನನ್ನು ಜೀವಂತ ಉಳಿಸಿ, ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇದೆ ಎಂದು ಸಾಬೀತು ಪಡಿಸಲು ಇಂತಹ ವ್ಯವಸ್ಥೆ ಅತ್ಯಗತ್ಯ ಎಂಬುದಾಗಿ ಅಧಿಕಾರಿಯೊಬ್ಬರು ಹೇಳಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ತುರ್ತುಬಳಕೆಗೆ ಅವಶ್ಯ ಆಯುಧಗಳು, ವಾಹನಗಳು ಸೇರಿದಂತೆ ಅರ್ಥರ್ ರಸ್ತೆ ಜೈಲು ಹಾಗೂ ಜೆಜೆ ಆಸ್ಪತ್ರೆಯಲ್ಲಿ ಎರಡು ವಿಶೇಷ ಕೊಠಡಿಗಳನ್ನು ತೆರೆಯಲಾಗಿದೆ. ಜೆಜೆ ಆಸ್ಪತ್ರೆಯಲ್ಲಿ ಕಸಬ್‌ನ ಆರೋಗ್ಯ ತಪಾಸಣೆಗಾಗಿ ವಿಶೇಷ ಸೆಲ್ ತೆರೆಯಲಾಗಿದೆ. ಅರ್ಥರ್ ಜೈಲಿನಲ್ಲಿ ಭಾರೀ ಭದ್ರತೆ ಏರ್ಪಡಿಸಲು ದೊಡ್ಡ ಮೊತ್ತವನ್ನು ವ್ಯಯಿಸಲಾಗಿದೆ. ಆದರೆ ಕಸಬ್‌ನನ್ನು ಎಂದಿಗೂ ಅಲ್ಲಿ ಕರೆದೊಯ್ಯಲಾಗಿರಲಿಲ್ಲ. ಬದಲಿಗೆ ವೈದ್ಯರನ್ನೇ ಜೈಲಿಗೆ ಕರೆಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಕಸಬ್‌ನನ್ನು ಇರಿಸಲಾಗಿರುವ ಜೈಲಿನಲ್ಲಿ ನಿಯೋಜಿಸಲಾಗಿರುವ ಕೇಂದ್ರೀಯ ಪಡೆಗಳ ವೇತನ, ಪ್ರಕರಣದಲ್ಲಿ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ವಕೀಲರು ಹಾಗೂ ಕಸಬ್‌ನಿಗೆ ನಿಯೋಜಿಸಲಾಗಿರುವ ವಕೀಲರ ಶುಲ್ಕ ಎಲ್ಲವೂ ದುಬಾರಿ.