ಮುಂಬೈ ದಾಳಿಕೋರ ಅಜ್ಮಲ್ ಅಮೀರ್ ಕಸಬ್‌ನನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತಿರುವ ವಕೀಲ ಎಸ್.ಜಿ. ಅಬ್ಬಾಸ್ ಖಾಜ್ಮಿ ಸುಳ್ಳು ಹೇಳಿರುವುದು ಮನವರಿಕೆಯಾಗಿದ್ದು, ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶ ತಹಲಿಯಾನಿ ಅವರು, ಖಾಜ್ಮಿ ಬದಲಿಗೆ ಬೇರೆ ವಕೀಲರನ್ನು ನೇಮಿಸುವ ಬೆದರಿಕೆ ಹಾಕಿದ್ದಾರೆ.
ಸರ್ಕಾರಿ ವಕೀಲರಾಗಿರುವ ಉಜ್ವಲ್ ನಿಕಂ ಅವರು ಇನ್ನೂ 340 ಮಂದಿಯ ವಿಚಾರಣೆ ನಡೆಸಲು ನ್ಯಾಯಾಲಯದ ಅನುಮತಿ ಕೇಳಿದಾಗ ಮುಂಬೈ ದಾಳಿ ನಡೆದು ಒಂದು ವರ್ಷ ತುಂಬುತ್ತಿರುವ ಗುರುವಾರದಂದು ಈ ಘಟನೆ ಸಂಭವಿಸಿದೆ.
ನಿಕಂ ಅವರು ನ್ಯಾಯಾಲಯದ ಮುಂದೆ ಅರಿಕೆ ಮಾಡಿಕೊಂಡಾಗ ಎದ್ದುನಿಂತ ಖಾಜ್ಮಿ ತನಗೆ ಈ ಬೆಳವಣಿಗೆ ಕುರಿತು ಮಾಹಿತಿ ನೀಡಿಲ್ಲ ಎಂದು ನುಡಿದರು. ಆದರೆ ಈ ಹೆಚ್ಚುವರಿ ಸಾಕ್ಷಿಗಳನ್ನು ಅಫಿದಾವಿತ್ ಮೂಲಕ ಪರೀಕ್ಷಿಸಲಾಗುವುದು ಮತ್ತು ಅವರನ್ನು ನ್ಯಾಯಾಲಯಕ್ಕೆ ಪಾಟೀ ಸವಾಲಿಗೆ ಕರೆಸಬೇಕೇ ಬೇಡವೇ ಎಂಬುದು ಪ್ರತಿವಾದಿ ವಕೀಲರಿಗೆ ಬಿಟ್ಟ ವಿಚಾರ ಎಂದು ನುಡಿದರು.
ತಾನು ಈ ಕುರಿತು ಮೇ ತಿಂಗಳಲ್ಲಿ ವಿಚಾರಣೆ ಆರಂಭಗೊಂಡ ಆರಂಭದಲ್ಲಿ ಈ ಕುರಿತು ತನ್ನ ಇಚ್ಚೆಯನ್ನು ವ್ಯಕ್ತಪಡಿಸಿದ್ದಲ್ಲದೆ, 340 ಅಫಿದಾವಿತ್‌ಗಳ ಪ್ರತಿಯನ್ನು ಖಾಜ್ಮಿಗೆ ಕಳುಹಿಸಿರುವುದಾಗಿ ನಿಕಂ ತಿಳಿಸಿದರು. ನಿಕಂ ಅವರ ಪ್ರಸ್ತುತಿಯನ್ನು ಸ್ವೀಕರಿಸಿದ ನ್ಯಾಯಾಧೀಶರು, ಖಾಜ್ಮಿಯರ ಹೇಳಿಕೆಯು ಸುಳ್ಳೆಂಬುದು 'ಸ್ಫಟಿಕದಷ್ಟೆ ಸ್ಪಷ್ಟ' ಎಂಬುದಾಗಿ ನುಡಿದು, ಸಾಕ್ಷ್ಯಗಳ ವಿಚಾರಣೆಗಾಗಿ ಮುಕ್ತನ್ಯಾಯಾಲಯದಲ್ಲಿ ಪ್ರತಿವಾದಿ ವಕೀಲರ ಪ್ರಸ್ತುತಿಯಲ್ಲೇ ಅನುಮತಿ ಕೋರಲಾಗಿದೆ ಎಂದು ನುಡಿದರು. ಅಲ್ಲದೆ ಇದನ್ನು ನೀವು ನಿರಾಕರಿಸಲು ಹೇಗೆ ಸಾಧ್ಯ ಎಂಬುದಾಗಿ ಖಾಜ್ಮಿಯವರನ್ನು ಪ್ರಶ್ನಿಸಿದರು.
340 ಸಾಕ್ಷಿಗಳನ್ನು ಅಫಿದಾವಿತ್‌ಗಳ ಮೂಲಕ ಪರೀಕ್ಷಿಸುವುದಾಗಿ ತನಗೆ ತಿಳಿದೇ ಇರಲಿಲ್ಲ ಎಂಬುದಾಗಿ ಪ್ರತಿವಾದಿ ವಕೀಲರು ನುಡಿದರು. ಖಾಜ್ಮಿ ಇದೇ ಮನೋಭಾವವನ್ನು ಮುಂದುವರಿಸಿದರೆ ಅವರನ್ನು ಮುಂದುವರಿಸಬೇಕೇ ಬೇಡವೇ ಎಂಬುದಾಗಿ ನ್ಯಾಯಾಲಯ ಪರಿಗಣಿಸಲಿದೆ ಎಂಬುದಾಗಿ ತಹಿಲಿಯಾನಿ ನುಡಿದರು.
ಖಾಜ್ಮಿ ನ್ಯಾಯಾಲಯದ ಮುಂದೆ ಬೇಷರತ್ ಕ್ಷಮೆ ಯಾಚಿಸಿದರೆ ಮಾತ್ರ ಅವರನ್ನು ಪ್ರತಿವಾದಿ ವಕೀಲರಾಗಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಖಾಜ್ಮಿ ಪ್ರಕರಣದಿಂದ ಹಿಂತೆಗೆಯಲು ತಾನು ಸಿದ್ಧ ಎಂದು ಹೇಳಿದ್ದಾರೆ.
ಈ ವಿಚಾರದ ಕುರಿತು ತೀರ್ಪನ್ನು ನ್ಯಾಯಾಧೀಶರು ಶುಕ್ರವಾರ ನೀಡಲಿದ್ದಾರೆ.