ಒಬಿಸಿ ಕೋಟಾದಲ್ಲಿನ ಶೇ.27ರೊಳಗೆ ಹಿಂದುಳಿದ ಮುಸ್ಲಿಮರಿಗೂ ಮೀಸಲಾತಿ ನೀಡುವ ಸಂಬಂಧ ಕೇಂದ್ರ ಸರಕಾರ ಗಂಭೀರವಾಗಿ ಯೋಚಿಸುತ್ತಿದ್ದು, ಈ ಸಂಬಂಧ ಕರಡು ಪ್ರಸ್ತಾವನೆಯನ್ನು ಸಚಿವಾಲಯ ಸಿದ್ಧಪಡಿಸುತ್ತಿದೆ ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷೀದ್ ತಿಳಿಸಿದ್ದಾರೆ.
ಲೋಕಸಭೆಗೆ ಲಿಖಿತ ಮಾಹಿತಿ ನೀಡಿರುವ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತ ಮುಸ್ಲಿಮರಿಗೆ ಶೇ.27ರ ಒಬಿಸಿ ಕೋಟಾದೊಳಗೆ ಮೀಸಲಾತಿ ನೀಡುವುದನ್ನು ಸರಕಾರ ಪರಿಶೀಲಿಸುತ್ತಿದೆ ಎಂದಿದ್ದಾರೆ.
ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಾತಿ ಒದಗಿಸಲು ಕಾನೂನಿಗೆ ತಿದ್ದುಪಡಿ ತರುವ ಪ್ರಸ್ತಾಪ ಸರಕಾರದ ಮುಂದಿದೆಯೇ ಎಂದು ಕರೀಂ ನಗರದ ಸಂಸದ ಪಿ. ಪ್ರಭಾಕರ್ ಎಂಬವರು ಕೇಳಿದ್ದ ಪ್ರಶ್ನೆಗೆ ಖುರ್ಷೀದ್ ಈ ಉತ್ತರವನ್ನು ನೀಡಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಈ ಬದಲಾವಣೆ ತರುವ ಆಶ್ವಾಸನೆ ನೀಡಿದ್ದನ್ನು ಇದೀಗ ಸ್ಮರಿಸಬಹುದಾಗಿದೆ. ಶೀಘ್ರದಲ್ಲೇ ಈ ಮೀಸಲಾತಿ ಪ್ರಸ್ತಾಪ ಸಂಸತ್ತಿನಲ್ಲಿ ಮಂಡನೆಯಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಸಾಚಾರ್ ಸಮಿತಿ ಶಿಫಾರಸ್ಸಿನಂತೆ ಅಲ್ಪಸಂಖ್ಯಾತರಿಗೆ ಉದ್ಯೋಗ ನೀಡುವ ಸಂಬಂಧ ಉದ್ಯೋಗ ವಿನಿಮಯ ಕಚೇರಿಗಳಿಗೆ ಸರಕಾರವು ಮಾರ್ಗದರ್ಶನ ನೀಡಿದೆಯೇ ಎಂಬ ಬಿಎಸ್‌ಪಿ ಸಂಸದ ಶಾಫಿಕರ್ ರಹಮಾನ್ ಬರ್ಕ್ ಕೇಳಿದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಖುರ್ಷೀದ್, ಪೊಲೀಸ್, ಕೇಂದ್ರೀಯ ಪೊಲೀಸ್ ಪಡೆ, ರೈಲ್ವೇ, ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಿಗೆ ಉದ್ಯೋಗ ನೇಮಕಾತಿ ಸಂದರ್ಭದಲ್ಲಿ ವಿಶೇಷ ಪರಿಗಣನೆ ನಡೆಸಬೇಕೆಂದು ಪ್ರಧಾನ ಮಂತ್ರಿಗಳ ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಯ ನೂತನ 15 ಅಂಶಗಳ ಕಾರ್ಯಕ್ರಮಗಳಡಿಯಲ್ಲಿ ನೇಮಕಾತಿ ಸಮಿತಿಗಳಿಗೆ ನಿರ್ದೇಶನವಿದ್ದು, ಅದನ್ನು ಪಾಲಿಸಬೇಕಾಗುತ್ತದೆ ಎಂದರು.