ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಖಂಡ ಆಂಧ್ರಕ್ಕಾಗಿ ಮಾತ್ರ ಟಿಡಿಪಿ ಜತೆಗಿದ್ದೆ: ಜಗನ್ (Andhra Pradesh | Telangana | YS Jaganmohan Reddy | Congress)
Bookmark and Share Feedback Print
 
ಆಂಧ್ರಪ್ರದೇಶ ವಿಭಜನೆಗೆ ಸಂಬಂಧಪಟ್ಟಂತೆ ತೆಲುಗು ದೇಶಂ ಪಕ್ಷದ ಜತೆ ನಿಲುವು ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದ ವೈ.ಎಸ್. ರಾಜಶೇಖರ ರೆಡ್ಡಿಯವರ ವಿರುದ್ಧ ಹರಿಹಾಯ್ದಿರುವ ತೆಲಂಗಾಣ ಸಂಸದರು, ರಾಜ್ಯ ಸರಕಾರದ ಪತನಕ್ಕೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಜಗನ್, 'ಅಖಂಡ ರಾಜ್ಯ'ವಷ್ಟೇ ನನ್ನ ಬಯಕೆ ಎಂದಿದ್ದಾರೆ.

ಲೋಕಸಭೆಯಲ್ಲಿ ಟಿಡಿಪಿ ಜತೆ ಸೇರಿಕೊಂಡು ತೆಲಂಗಾಣ ವಿರೋಧಿ ನಿಲುವು ಪ್ರಕಟಿಸಿರುವ ಜಗನ್ಮೋಹನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತೆಲಂಗಾಣ ಪ್ರಾಂತ್ಯದ ಕಾಂಗ್ರೆಸ್ ಸಂಸದರು ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಜಗನ್ಮೋಹನ್, ನಾನು ಟಿಡಿಪಿ ಸಂಸದರನ್ನು ಬೆಂಬಲಿಸಿಲ್ಲ. ನಾನಲ್ಲಿದ್ದ ಕಾರಣ ತೆಲಂಗಾಣ ರಾಜ್ಯ ರಚನೆ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೆ. ನಾನು ಹಾಗೆ ಮಾಡದೇ ಇದ್ದಿದ್ದರೆ ಹೋರಾಟದ ಕೀರ್ತಿಯೆಲ್ಲ ಟಿಪಿಪಿ ಪಾಲಾಗುತ್ತಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ನಂತರ ತೆಲಂಗಾಣ ಪರ ಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ ಜಗನ್ಮೋಹನ್, ನಾನು ಅವರನ್ನು ಕಳೆದುಕೊಳ್ಳಲು ಬಯಸುವುದಿಲ್ಲ; ನಾವು ಒಂದು ಕುಟುಂಬದಂತೆ ಮುಂದೆ ಸಾಗುತ್ತೇವೆ. ಗೋಲ್ಡನ್ ತೆಲಂಗಾಣ ನನ್ನ ಕನಸು. ನಾವೆಲ್ಲ ಅಣ್ಣ-ತಮ್ಮಂದಿರಂತೆ ಒಂದಾಗಿ ಬಾಳಲಿದ್ದೇವೆ ಎಂದರು.

ಅದೇ ಹೊತ್ತಿಗೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ವಿರುದ್ಧ ಟೀಕಾ ಪ್ರಹಾರ ನಡೆಸಿದ ಅವರು, ಈ ಗೊಂದಲಕ್ಕೆ ನಾಯ್ಡು ಕಾರಣ. ಇವತ್ತು ರಾಜ್ಯ ಈ ಸ್ಥಿತಿಗೆ ತಲುಪಿದ್ದರೆ, ಅದಕ್ಕೆ ನಾಯ್ಡುರವರೇ ಹೊಣೆ ಎಂದು ಆರೋಪಿಸಿದರು.

ಅವರು ತೆಲಂಗಾಣಕ್ಕೆ ತನ್ನ ಬೆಂಬಲ ನೀಡದೇ ಇರುತ್ತಿದ್ದರೆ, ಇಂತಹ ಸಮಸ್ಯೆಗಳೇ ಉದ್ಭವಿಸುತ್ತಿರಲಿಲ್ಲ. ನನ್ನ ನಿಲುವೇನಿದ್ದರೂ ಅಖಂಡ ಆಂಧ್ರಪ್ರದೇಶ ಎಂದು ಜಗನ್ ಸ್ಪಷ್ಟಪಡಿಸಿದರು.

ಜಗನ್ ವಿರುದ್ಧ ಮುನಿಸಿಕೊಂಡಿರುವ ತೆಲಂಗಾಣ ಪ್ರಾಂತ್ಯದ ಕಾಂಗ್ರೆಸ್ ಸಂಸದರ ನಿಯೋಗವೊಂದು ರಕ್ಷಣಾ ಸಚಿವ ಎ.ಕೆ. ಆಂಟನಿಯವರನ್ನು ಭೇಟಿ ಮಾಡಿ ಮಾಜಿ ಮುಖ್ಯಮಂತ್ರಿ ಪುತ್ರನ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿತು.

ಜಗನ್ ಟಿಡಿಪಿ ಸಂಸದರು, ಅದರಲ್ಲೂ ಅವಕಾಶವಾದಿ ನಾಯಕ ಚಂದ್ರಬಾಬು ನಾಯ್ಡುರವರ ಜತೆ ಸೇರಿ ಪಕ್ಷದ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾವು ದೂರು ನೀಡಿದ್ದೇವೆ ಎಂದು ಸಂಸದ ಮಧು ಗೌಡ್ ಯಕ್ಷಿಯವರು ತಿಳಿಸಿದ್ದಾರೆ.

ತೆಲಂಗಾಣ ವಿವಾದದಿಂದಾಗಿ ರಾಜ್ಯ ರಾಜಕಾರಣದಲ್ಲಿ ವಿಭಜನೆ ಕಂಡು ಬಂದಿರುವುದು ಸ್ಪಷ್ಟವಾಗುತ್ತಿದ್ದು, ಕಾಂಗ್ರೆಸ್‌ನಲ್ಲಿ ಎರಡು ಪ್ರತ್ಯೇಕ ಬಣಗಳ ಸೃಷ್ಟಿಯಾಗಿದೆ. ಲೋಕಸಭೆಯಲ್ಲಿ ತೆಲಂಗಾಣ ಪರ ಮತ್ತು ವಿರೋಧ ಗುಂಪುಗಳು ಬಹಿರಂಗವಾಗಿಯೇ ವಾಗ್ವಾದ ನಡೆಸುವ ಮೂಲಕ ತಮ್ಮ ಭಿನ್ನಮತವನ್ನು ಜಗಜ್ಜಾಹೀರುಗೊಳಿಸಿವೆ.

ಜಗನ್ ನಾಟಕಕ್ಕೆ ಲೋಕಸಭೆಯೇ ಸಾಕ್ಷಿಯಾಗಿದೆ. ಅವರು ತೆಲಂಗಾಣ ವಿಚಾರವನ್ನು ಬಳಸಿಕೊಂಡು ಆಂಧ್ರಪ್ರದೇಶ ಸರಕಾರವನ್ನು ಉರುಳಿಸಲು ಯತ್ನಿಸುತ್ತಿದ್ದಾರೆ. ವೈಎಸ್ಆರ್ ನಿಧನದ ನಂತರ ತನ್ನನ್ನು ಮುಖ್ಯಮಂತ್ರಿ ಮಾಡದೇ ಇರುವುದರಿಂದ ಜಗನ್‌‌ಗೆ ಈಗ ಪಕ್ಷದ ಹೈಕಮಾಂಡ್ ಜತೆ ಅಸಮಾಧಾನವಿದೆ. ಅದನ್ನು ಈ ಮೂಲಕ ತೀರಿಸಿಕೊಳ್ಳುತ್ತಿದ್ದಾರೆ ಎಂದು ಯಕ್ಷಿ ಇದೇ ಸಂದರ್ಭದಲ್ಲಿ ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ