ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆರೋಪ ತನಿಖೆಗೆ ಸಮಿತಿ ರಚಿಸಿ: ದಿನಕರನ್ ಬಯಕೆ (PD Dinakaran | Karnataka CJ | KG Balakrishnan | India)
Bookmark and Share Feedback Print
 
ಅಕ್ರಮ ಆಸ್ತಿ-ಮೋಸಗಳ ಆರೋಪ ಎದುರಿಸುತ್ತಿರುವ ಕರ್ನಾಟಕದ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್, ಅದರ ತನಿಖೆಗಾಗಿ ಸಮಿತಿಯೊಂದನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ತನ್ನ ವಿರುದ್ಧದ ಆರೋಪಗಳಿಂದ ಹೊರ ಬರಲು ಯತ್ನಿಸುತ್ತಿರುವ ದಿನಕರನ್, ಈ ಸಂಬಂಧ ಮೂರು ಮಂದಿ ಸದಸ್ಯರ ಸಮಿತಿಯನ್ನು ರಚಿಸಿ ತನಿಖೆ ನಡೆಸಲು ಸೂಚಿಸುವಂತೆ ಮುಖ್ಯ ನ್ಯಾಯಮೂರ್ತಿಯವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ತನಿಖಾ ಪ್ರಕ್ರಿಯೆ ಆರಂಭವಾದ ಮೇಲೆ ದಿನಕರನ್ ನ್ಯಾಯಾಲಯದ ಯಾವುದೇ ಕಲಾಪಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಬಾಲಕೃಷ್ಣನ್ ಹೇಳಿದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.

ರಾಜ್ಯಸಭೆಯ 76 ಸದಸ್ಯರು ದಿನಕರನ್ ಪದಚ್ಯುತಿಗಾಗಿ ನಿರ್ಣಯವೊಂದನ್ನು ಈಗಾಗಲೇ ಮಂಡಿಸಿದ್ದು, ಅವರು ಮಹಾಭಿಯೋಗ ಭೀತಿಯನ್ನು ಎದುರಿಸುತ್ತಿದ್ದಾರೆ.

ನ್ಯಾಯಮೂರ್ತಿ ದಿನಕರನ್ ಅವರನ್ನು ಮಹಾಭಿಯೋಗಕ್ಕೆ ಒಳಪಡಿಸಬೇಕೆಂದು ರಾಜ್ಯಸಭಾ ಸದಸ್ಯರು ಸೋಮವಾರ ತಮ್ಮ ಮನವಿಯನ್ನು ಸಭಾಪತಿ ಹಮೀದ್ ಅನ್ಸಾರಿಯವರಿಗೆ ಸಲ್ಲಿಸಿದ್ದರು.

ಅಕ್ರಮ ಆಸ್ತಿ ಮತ್ತು ಆದಾಯಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿರುವ ಆರೋಪವನ್ನು ಕರ್ನಾಟಕದ ನ್ಯಾಯಮೂರ್ತಿ ಎದುರಿಸುತ್ತಿದ್ದಾರೆ.

ದಿನಕರನ್ ಅವರ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಭಡ್ತಿ ಶಿಫಾರಸ್ಸನ್ನು ಕೇಂದ್ರ ಸರಕಾರ ವಾಪಸ್ ತೆಗೆದುಕೊಂಡಿದ್ದು, ಸುಪ್ರೀಂ ಕೋರ್ಟ್ ಇದರ ಕುರಿತು ಇನ್ನಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ