ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರತಿಪಕ್ಷಗಳಿಂದ ಬೆಲೆಯೇರಿಕೆ ಕೋಲಾಹಲ: ಕಲಾಪ ಮುಂದಕ್ಕೆ (Price rise | Parliament | Telangana | Lok Sabha)
Bookmark and Share Feedback Print
 
ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿರುವ ಪ್ರತಿಪಕ್ಷಗಳು ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿಸಿವೆ.

ಸಂಸತ್ ಮತ್ತು ರಾಜ್ಯಸಭೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ವಿರೋಧ ಪಕ್ಷಗಳು ಭಾರೀ ಘೋಷಣೆಗಳನ್ನು ಕೂಗುತ್ತಾ ಕಲಾಪಕ್ಕೆ ಅಡ್ಡಿ ಪಡಿಸಿದ ಹಿನ್ನಲೆಯಲ್ಲಿ, ಉಭಯ ಸದನಗಳ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

ಬಳಿಕ ಸಂಸತ್ತಿನ ಹೊರಗಡೆ ಎಡಪಕ್ಷಗಳು ಮತ್ತಿತರ ಪಕ್ಷಗಳ ಜತೆ ಸೇರಿಕೊಂಡು ಧರಣಿ ನಡೆಸಿದವು. ದಿನಸಿ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದರೂ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಕೈಕಟ್ಟಿ ಕುಳಿತುಕೊಂಡಿದೆ. ಜರೂರಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಪ್ರತಿಪಕ್ಷಗಳು ಘೋಷಣೆಗಳನ್ನು ಕೂಗಿದವು.

ಕಲಾಪ ಆರಂಭಕ್ಕೂ ಮೊದಲು ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ತನ್ನ ಆಸನದತ್ತ ಬರುತ್ತಿದ್ದಂತೆ ವಿರೋಧ ಪಕ್ಷಗಳು ಸದನದ ಬಾವಿಗಿಳಿದವು. ಬಿಜೆಪಿ, ಎಡಪಕ್ಷಗಳು, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ಶಿವಸೇನೆಯ ಸಂಸದರು ಘೋಷಣೆಗಳನ್ನು ಕೂಗುತ್ತಾ, ಯುಪಿಎ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆಯೇರಿಕೆ ಹಿಡಿತವನ್ನೇ ಕಳೆದುಕೊಂಡಿದೆ ಎಂದವು.

ಅದೇ ಹೊತ್ತಿಗೆ ಟಿಡಿಪಿ ಸದಸ್ಯರು ತೆಲಂಗಾಣ ಪ್ರತ್ಯೇಕ ರಾಜ್ಯದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಾ, ಅಖಂಡ ಆಂಧ್ರಪ್ರದೇಶಕ್ಕಾಗಿ ಆಗ್ರಹಿಸಿದರು.

ಇತ್ತೀಚೆಗಷ್ಟೇ ದರಯೇರಿಕೆ ಬಗ್ಗೆ ಚರ್ಚೆ ನಡೆಸಲಾಗಿರುವುದರಿಂದ ಪ್ರಶ್ನೋತ್ತರ ವೇಳೆಯನ್ನು ಅಮಾನತುಗೊಳಿಸಲು ಸಾಧ್ಯವಿಲ್ಲ ಎಂದು ಮನವಿಯನ್ನು ಮೀರಾ ಕುಮಾರ್ ತಳ್ಳಿ ಹಾಕಿದರು.

ತಮ್ಮ ಆಸನಗಳಿಗೆ ಮರಳಬೇಕು ಎಂದು ಸ್ಪೀಕರ್ ಮಾಡಿದ ಮನವಿಗೆ ಸದಸ್ಯರು ಸ್ಪಂದಿಸದೇ ಇದ್ದುದರಿಂದ ಸದನವನ್ನು 30 ನಿಮಿಷಗಳ ಕಾಲ ಮುಂದೂಡಿದರು.

ಇದೇ ರೀತಿಯ ವಾತಾವರಣ ರಾಜ್ಯಸಭೆಯಲ್ಲೂ ಸೃಷ್ಟಿಯಾಗಿತ್ತು. ಸಭಾಪತಿ ಹಮೀದ್ ಅನ್ಸಾರಿ ಬರುವ ಮೊದಲೇ ವಿರೋಧ ಪಕ್ಷದ ಸದಸ್ಯರು ತಮ್ಮ ಹೋರಾಟವನ್ನು ಆರಂಭಿಸಿದ್ದರು.

ಇಲ್ಲೂ ಬೆಲೆಯೇರಿಕೆ ಮತ್ತು ತೆಲಂಗಾಣ ಕುರಿತು ತೀವ್ರ ಪರ-ವಿರೋಧಗಳು ಕಂಡು ಬಂದವು. ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ, ಎಡಪಕ್ಷಗಳು ಮತ್ತು ಸಮಾಜವಾದಿ ಪಕ್ಷಗಳು ಸದನದ ಬಾವಿಗಿಳಿದು ಬೆಲೆಯೇರಿಕೆಯನ್ನು ನಿಯಂತ್ರಿಸಲು ವಿಫಲವಾಗಿರುವ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದವು.

ಎರಡೂ ಸದನಗಳು ವಿರಾಮದ ನಂತರ ಆರಂಭವಾದರೂ ಮತ್ತೆ ಕೋಲಾಹಲ ಮುಂದುವರಿದ ಕಾರಣ ನಾಳೆಗೆ ಮುಂದೂಡುವ ನಿರ್ಧಾರಕ್ಕೆ ಬರಲಾಯಿತು.

ಆದರೆ ಪ್ರತಿಪಕ್ಷಗಳು ಸಂಸತ್ತಿನ ಹೊರಗೂ ತಮ್ಮ ಪ್ರತಿಭಟನೆ, ಧರಣಿಯನ್ನು ಮುಂದುವರಿಸಿದವು.
ಸಂಬಂಧಿತ ಮಾಹಿತಿ ಹುಡುಕಿ