ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಿಯಾಲಿಟಿ ಶೋ ಆವಾಂತರ; 11ರ ಬಾಲಕಿ ಆತ್ಮಾರ್ಪಣೆ..! (Neha Sawant | Sai Darshan Apartment | Reality show | Boogie Woogie)
Bookmark and Share Feedback Print
 
ಟೀವಿ ಕಾರ್ಯಕ್ರಮಗಳಲ್ಲಿ ಭಾಗವಹಿಸೋದು ಬೇಡ, ಓದಿನತ್ತ ಗಮನ ಕೊಡು ಎಂದು ಹೆತ್ತವರು ಹೇಳಿದ್ದನ್ನು ಅರಗಿಸಿಕೊಳ್ಳಲಾಗದ ಪುಟ್ಟ ಬಾಲೆಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ದಿನಕ್ಕೊಂದರಂತೆ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ರಿಯಾಲಿಟಿ ಶೋಗಳಲ್ಲಿ ನಮ್ಮ ಮಕ್ಕಳೂ ಕಾಣಿಸಿಕೊಳ್ಳಬೇಕೆಂದು ಹಂಬಲಿಸುವ ಹೆತ್ತವರಿಗಿದು ಎಚ್ಚರಿಕೆಯ ಕರೆಗಂಟೆ.

ಮುಂಬೈಯಲ್ಲಿನ ಡ್ಯಾನ್ಸ್ ಅಕಾಡೆಮಿಯೊಂದರಲ್ಲಿ ವಿದ್ಯಾರ್ಥಿನಿಯಾಗಿದ್ದ ಬಾಲಕಿ ನೇಹಾ ಸಾವಂತ್, ಬೂಗಿ ವೂಗಿ ಸೇರಿದಂತೆ ಮೂರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಳು. ಅದ್ಭುತ ನೃತ್ಯ ಪ್ರದರ್ಶನ ಮಾಡುತ್ತಿದ್ದ ಬಾಲಕಿಯನ್ನು ಓದಿನತ್ತ ಹೆಚ್ಚಿನ ಗಮನಹರಿಸಬೇಕೆಂಬ ಉದ್ದೇಶದಿಂದ ರಿಯಾಲಿಟಿ ಶೋಗಳಿಂದ ಹೆತ್ತವರು ದೂರ ಉಳಿಸಿದ್ದರು.

ತನ್ನ ಓರಗೆಯ, ತನ್ನ ಜತೆಗಿದ್ದವರು ಟೀವಿಗಳಲ್ಲಿ ನರ್ತಿಸುವುದನ್ನು ಕಂಡ ಪುಟ್ಟ ಹೃದಯ ವಿಲವಿಲನೆ ಒದ್ದಾಡಿರಬೇಕು, ಹೆತ್ತವರ ಹಿತೋಪದೇಶ ವಿಷಮವೆಂದು ಕಂಡಿರಬೇಕು. ಆಗ ಆಕೆಗೆ ತೋಚಿದ್ದು ಆತ್ಮಹತ್ಯೆಯ ಯೋಚನೆ.

ಶನಿವಾರ ಮಗಳು ರೂಮಿನಿಂದ ಹೊರಗೇನು ಬರುತ್ತಿಲ್ಲ ಎಂದು ಬಾಗಿಲು ಬಡಿದವರಿಗೆ ಅಚ್ಚರಿ. ಲಾಕ್ ಮಾಡಿಕೊಂಡಿದ್ದ ಬಾಲಕಿ ತನ್ನ ದುಪ್ಪಟ್ಟಾವನ್ನೇ ನೇಣಾಗಿ ಬಳಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬಾಗಿಲು ಒಡೆದ ನಂತರ ಬೆಳಕಿಗೆ ಬಂದಾಗ ಎಲ್ಲರಿಗೂ ಆಘಾತ.

ಆರನೇ ತರಗತಿ ಬಾಲಕಿ ನೇಹಾಳ ತಾಯಿ ಶಿಕ್ಷಕಿ. ತಂದೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಕಾರ ಇತ್ತೀಚಿನ ಕೆಲ ದಿನಗಳಿಂದ ಮಗಳು ಕೇವಲ ಡ್ಯಾನ್ಸ್‌ಗಳಿಗಷ್ಟೇ ಹೆಚ್ಚಿನ ಮಹತ್ವ ನೀಡುತ್ತಿದ್ದಳು, ಪಾಠದಲ್ಲಿ ಹಿಂದೆ ಬಿದ್ದಿದ್ದಳು. ಹಾಗಾಗಿ ನಾವು ಆಕೆಯನ್ನು ಸ್ಪರ್ಧೆಗಳಿಂದ ದೂರ ಉಳಿಸಿದ್ದೆವು ಎಂದಿದ್ದಾರೆ.

ಇದೀಗ ಹೆತ್ತವರು ರಿಯಾಲಿಟಿ ಶೋ ಕಾರ್ಯಕ್ರಮಗಳಿಗೆ ಕಳುಹಿಸಿದ್ದಕ್ಕೆ ಮತ್ತು ನಂತರದ ದಿನಗಳಲ್ಲಿ ಅದರಿಂದ ದೂರ ಉಳಿಸಿದ್ದಕ್ಕೆ ಮರುಗುತ್ತಿದ್ದಾರೆ, ರಿಯಾಲಿಟಿ ಶೋಗಳನ್ನು ಶಪಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ