ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಖಂಡ ಆಂಧ್ರ ಆಗ್ರಹಿಸಿ ಬಂದ್‌; ತೆಲಂಗಾಣೇತರ ತತ್ತರ (Telangana | Andhra Pradesh | Hyderabad | Rayalaseema)
Bookmark and Share Feedback Print
 
ಅಖಂಡ ಆಂಧ್ರಪ್ರದೇಶವನ್ನು ಬೆಂಬಲಿಸಿ ಸರ್ವಪಕ್ಷಗಳ ಜಂಟಿ ಕ್ರಿಯಾ ಸಮಿತಿ ಸೋಮವಾರ ಕರೆ ನೀಡಿರುವ ಬಂದ್‌ಗೆ ತೆಲಂಗಾಣೇತರ ಪ್ರಾಂತ್ಯಗಳು ತತ್ತರಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಅಖಂಡ ಆಂಧ್ರಪ್ರದೇಶ ಎಷ್ಟು ಅಗತ್ಯ ಎಂಬುದನ್ನು ಕೇಂದ್ರ ಸರಕಾರಕ್ಕೆ ಮನಗಾಣಿಸಲು, ಸ್ಪಷ್ಟ ಸಂದೇಶ ಕಳುಹಿಸಲು ನಾವು ಈ ಸಂಪೂರ್ಣ ಬಂದ್‌ಗೆ ಕರೆ ನೀಡಿದ್ದೇವೆ ಎಂದು ಅಖಂಡ ಆಂಧ್ರ ಜಂಟಿ ಕ್ರಿಯಾ ಸಮಿತಿ ಸಲಹೆಗಾರ ಪ್ರೊಫೆಸರ್ ಸ್ಯಾಮ್ವೆಲ್ ತಿಳಿಸಿದ್ದಾರೆ.

ನಾಳೆ ನವದೆಹಲಿಯಲ್ಲಿ ನಡೆಯಲಿರುವ ಆಂಧ್ರಪ್ರದೇಶದ ಎಂಟು ರಾಜಕೀಯ ಪಕ್ಷಗಳ ಸಭೆಗೂ ಮೊದಲು ಇಂತದ್ದೊಂದು ಬಂದ್‌ಗೆ ಕರೆ ನೀಡುವ ಮೂಲಕ ತೆಲಂಗಾಣ ವಿರೋಧಿ ಒತ್ತಡ ಹೆಚ್ಚಿಸುವ ತಂತ್ರ ಅಖಂಡ ಆಂಧ್ರ ಹೋರಾಟಗಾರರದ್ದು. ತೆಲಂಗಾಣ ಕುರಿತು ಅಂತಿಮ ನಿರ್ಧಾರಕ್ಕೆ ಬರಲು ಈ ಸಭೆಯನ್ನು ಗೃಹಸಚಿವ ಪಿ. ಚಿದಂಬರಂ ಕರೆದಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ಮುನ್ನೆಚ್ಚೆರಿಕೆ ಕ್ರಮವಾಗಿ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತೆಲಂಗಾಣ, ಆಂಧ್ರ ಕರಾವಳಿ ಮತ್ತು ರಾಯಲಸೀಮೆ ಪ್ರಾಂತ್ಯದಲ್ಲಿ ತನ್ನ ಸೇವೆಗಳನ್ನು ರದ್ದುಗೊಳಿಸಿದೆ. ಸಾರ್ವಜನಿಕ ಸಾರಿಗೆ ಸೇವೆ ಅಲಭ್ಯವಾದ ಕಾರಣ ಪ್ರಯಾಣಿಕರು ತೀವ್ರವಾಗಿ ಪರದಾಡುತ್ತಿದ್ದಾರೆ.

ಅಲ್ಲದೆ ಶಾಲೆಗಳು, ಕಾಲೇಜುಗಳು, ಅಂಗಡಿಗಳು ಮತ್ತು ಇತರ ಉದ್ಯಮ ಸಂಸ್ಥೆಗಳು ಕೂಡ ಇಂದು ತೆರೆದಿಲ್ಲ.

ಚಿತ್ತೂರು ಜಿಲ್ಲೆಯಲ್ಲಿ ತಿರುಪತಿ ದೇವಸ್ಥಾನಕ್ಕೆ ಹೋಗುವ ಬಸ್ಸುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸಾರಿಗೆ ಸೇವೆಗಳನ್ನು ರದ್ದು ಮಾಡಲಾಗಿದೆ.

ವಿಜಯವಾಡದಲ್ಲಿ ಮಾಜಿ ಮೇಯರ್ ಮಲ್ಲಿಕಾ ಬೇಗಮ್ ಮತ್ತು ಇತರ ಕೆಲವು ನಾಯಕರನ್ನು ಬಂಧಿಸಲಾಗಿದೆ. ಅವರು ಪ್ರತಿಭಟನೆಯನ್ನು ನಡೆಸಲು ಯತ್ನಿಸಿದಾಗ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ.

ಕೇಂದ್ರವು ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳಬಾರದೆಂದು ನಾವು ಎಚ್ಚರಿಸುತ್ತಿದ್ದೇವೆ. ಅಖಂಡ ಆಂಧ್ರಪ್ರದೇಶವನ್ನು ಬೆಂಬಲಿಸಿ ನಾವು ನಮ್ಮ ಮುಂದಿನ ಸಭೆಯನ್ನು ಹೈದರಾಬಾದ್‌ನಲ್ಲಿಯೂ ನಡೆಸಲಿದ್ದೇವೆ ಎಂದು ಟಿಡಿಪಿ ಶಾಸಕ ಡಿ. ಉಮಾಮಹೇಶ್ವರ ರಾವ್ ತಿಳಿಸಿದ್ದಾರೆ.

ಈ ನಡುವೆ ತೆಲಂಗಾಣ ಜಂಟಿ ಕ್ರಿಯಾ ಸಮಿತಿಯು ನಾಳೆ ತೆಲಂಗಾಣ ಪ್ರಾಂತ್ಯದಲ್ಲಿ ರೈಲು ಹಾಗೂ ರಸ್ತೆ ತಡೆ ನಡೆಸಲಿದೆ. ನವದೆಹಲಿಯಲ್ಲಿ ಮಹತ್ವದ ಸಭೆ ನಡೆಯುತ್ತಿರುವುದರಿಂದ ಒತ್ತಡ ತಂತ್ರವಾಗಿ ಈ ಪ್ರತಿಭಟನೆಗಳು ನಡೆಯಲಿವೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ