ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಟೀಕೆಗಳನ್ನು ಮುಂದುವರಿಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಯಡಿಯೂರಪ್ಪ ಮತ್ತು ಅವರ ಸಹಪಾಠಿಗಳು ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ ರಸ್ತೆಗಾಗಿ 4,800 ಎಕರೆ ಜಮೀನನ್ನು ಒಳಸಂಚು ಮತ್ತು ಮೋಸದ ಮೂಲಕ ನುಂಗಿ ಹಾಕಿದ್ದಾರೆ. ಆ ಮೂಲಕ ರೈತರ ಹಿತಾಸಕ್ತಿಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿಯವರ ವಿರುದ್ಧ ತಾನು ನಿನ್ನೆ ಬಳಸಿದ 'ಬ್ಲಡಿ ಬಾಸ್ಟರ್ಟ್' ಮುಂತಾದ ಪದಗಳು ನಿಂದನಾತ್ಮಕವೆಂಬುದನ್ನು ಒಪ್ಪಿಕೊಂಡಿರುವ ಗೌಡ, ಅದನ್ನು ತಕ್ಷಣವೇ ವಾಪಸ್ ಪಡೆದುಕೊಂಡಿದ್ದೇನೆ; ರೈತರನ್ನು ದಾರಿದ್ರ್ಯಕ್ಕೆ ತಳ್ಳಿದ ಯಾತನೆಯೇ ನನ್ನನ್ನು ಇಂತಹ ಪದಗಳನ್ನು ಬಳಸಲು ಪ್ರೇರೇಪಿಸಿತು ಎಂದು ದೆಹಲಿಯಲ್ಲಿ ಮಾತನಾಡುತ್ತಾ ತಿಳಿಸಿದರು.
PTI
ಆದರೆ ಕ್ಷಮೆ ಯಾಚಿಸಲು ನಿರಾಕರಿಸಿರುವ ಅವರು, ನಾನು ಯಾರ ವಿರುದ್ಧವೂ ಅಸಾಂವಿಧಾನಿಕ ಪದಗಳನ್ನು ಬಳಸಿಲ್ಲ. ನನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಸರಕಾರ ಸಾಬೀತು ಮಾಡಿದಲ್ಲಿ ಇಡೀ ದೇಶದ ಕ್ಷಮೆಯನ್ನು ಯಾಚಿಸುತ್ತೇನೆ ಎಂದರು.
ನೈಸ್ ಕಂಪನಿ, ರಾಜ್ಯದ ಅಡ್ವೊಕೇಟ್ ಜನರಲ್ ಮತ್ತು ಮುಖ್ಯಮಂತ್ರಿಯವರು ಬಡ ರೈತರುಗಳ 4,884 ಎಕರೆ ಜಮೀನಿನನ್ನು ಒಳಸಂಚು, ವಂಚನೆಗಳ ಮೂಲಕ ಕಸಿದುಕೊಂಡಿದ್ದಾರೆ. ರೈತರನ್ನು ಜೀವಂತ ಹೂತು ಹಾಕಿ ಅದರ ಮೇಲೆ ಅರಮನೆ ಕಟ್ಟುವ ಉದ್ದೇಶ 'ನೈಸ್' ಕಂಪನಿಯದ್ದು ಎಂದು ಗೌಡರು ಈ ಸಂದರ್ಭದಲ್ಲಿ ಮತ್ತೊಮ್ಮೆ ವಾಗ್ದಾಳಿ ನಡೆಸಿದರು.
ನಾನು ಕಳೆದ 50 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ಯಾವತ್ತೂ ಈ ರೀತಿ ಯಾರದೇ ಆಸ್ತಿಗಳಿಗೆ ಧಕ್ಕೆ ಮಾಡಿದವನಲ್ಲ. ಆದರೆ ಈ ಸರಕಾರವು ಬಡ ರೈತರ ಜಮೀನುಗಳನ್ನು ನೈಸ್ ಯೋಜನೆಗಾಗಿ ಐಸಿಐಸಿಐ ಬ್ಯಾಂಕಿಗೆ ಅಡವಿಟ್ಟಿದೆ. ನೈಸ್ ಎನ್ನುವುದು ಒಂದು ಅತಿ ಭ್ರಷ್ಟ ಕಂಪನಿಯಾಗಿದ್ದು, ಸತ್ಯಂ ಹಗರಣವನ್ನೂ ಮೀರಿಸುವಂತದ್ದು ಎಂದು ಆಕ್ರೋಶದಿಂದ ನುಡಿದಿದ್ದಾರೆ.