ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಟೋಲ್ ಹಣ ಕೊಡದ ಸಚಿವ; ಕೇಳಿದ ಉದ್ಯೋಗಿ ಜೈಲಿಗೆ (Madhya Pradesh | Cabinet minister | Vishnu Yadav | Tukojirao Pawar)
Bookmark and Share Feedback Print
 
ಮಧ್ಯಪ್ರದೇಶದ ಸಂಪುಟ ಸಚಿವರೊಬ್ಬರು ಖಾಸಗಿ ವಾಹನದಲ್ಲಿ ಹೋಗುತ್ತಿದ್ದಾಗ ಟೋಲ್ ಬೂತೊಂದರಲ್ಲಿ 13 ರೂಪಾಯಿ ಪಾವತಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಉಂಟಾದ ಗದ್ದಲಕ್ಕೆ ಅಲ್ಲಿನ ಉದ್ಯೋಗಿಯೊಬ್ಬನನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

ಸುಂಕ ನೀಡಲು ನಿರಾಕರಿಸಿದ್ದ ಸಚಿವರಿದ್ದ ಕಾರಿನ ಮೇಲೆ ಟೋಲ್ ಬೂತ್ ಉದ್ಯೋಗಿ ವಿಷ್ಣು ಯಾದವ್ (20) ಕಲ್ಲೆಸೆದಿದ್ದಾನೆ ಎಂದು ಆರೋಪಿಸಲಾಗಿದ್ದು, ಸಾಬೀತಾದಲ್ಲಿ ಎರಡು ವರ್ಷಗಳ ಶಿಕ್ಷೆಯನ್ನು ಆತ ಅನುಭವಿಸಬೇಕಾದ ಭೀತಿಯೆದುರಿಸುತ್ತಿದ್ದಾನೆ.

ಮಧ್ಯಪ್ರದೇಶದ ಕ್ರೀಡಾ ಮತ್ತು ಪ್ರವಾಸೋದ್ಯಮ ಸಚಿವ ತುಕೊಜಿರಾವ್ ಪವಾರ್ ಅವರು ಭೋಪಾಲ್ ಮತ್ತು ಸೆಹೋರ್ ನಡುವಿನ ದೇವಸ್ ಎಂಬಲ್ಲಿಗೆ ತೆರಳುತ್ತಿದ್ದಾಗ ಟೋಲ್ ಬೂತೊಂದರಲ್ಲಿ ಅವರನ್ನು ತಡೆಯಲಾಯಿತು. ಮುಂದಿನ ವಾರ ಇಲ್ಲಿ ನಡೆಯಲಿರುವ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಸರಕಾರಿ ವಾಹನಗಳ ಬದಲು ಸಚಿವರು ಖಾಸಗಿ ವಾಹನದಲ್ಲಿ ಹೋಗುತ್ತಿದ್ದರು.

ಸರಕಾರಿ ವಾಹನಗಳು ಮಾತ್ರ ಟೋಲ್ ಬೂತಿನಲ್ಲಿ ಸುಂಕ ವಿನಾಯಿತಿ ಪಡೆಯುವುದರಿಂದ ಸಚಿವರು ಪ್ರಯಾಣಿಸುತ್ತಿದ್ದ ಖಾಸಗಿ ವಾಹನವನ್ನು ತಡೆದು, ಸುಂಕ ಪಾವತಿಸುವಂತೆ ಉದ್ಯೋಗಿಗಳು ಸೂಚನೆ ನೀಡಿದರು.

ಕಾರಿನಲ್ಲಿರುವುದು ಸಚಿವರಾಗಿರುವುದರಿಂದ ಅದು ಖಾಸಗಿ ವಾಹನವಾಗಿದ್ದರೂ ಸುಂಕ ಪಾವತಿಸುವ ಅಗತ್ಯವಿಲ್ಲ ಎಂದು ಈ ಸಂದರ್ಭದಲ್ಲಿ ಪವಾರ್ ಅವರ ಅಂಗರಕ್ಷಕ ಮತ್ತು ಚಾಲಕ ಟೋಲ್ ಬೂತ್ ಉದ್ಯೋಗಿಗಳ ಜತೆ ವಾದಕ್ಕಿಳಿದಿದ್ದರು.

ಆದರೆ ಈ ವಾದವನ್ನು ನಿರಾಕರಿಸಿದ ವಿಷ್ಣು ಯಾದವ್, ವಾಹನದ ಮೇಲೆ ಕಲ್ಲು ತೂರಿದ್ದು, ಇದು ಅಂಗರಕ್ಷಕನಿಗೆ ಬಡಿದಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ.

ಘಟನೆ ನಡೆದ ಸುಮಾರು ಅರ್ಧಗಂಟೆಗಳಷ್ಟು ಕಾಲ ಟೋಲ್ ಬೂತಿನ ಉದ್ಯೋಗಿಗಳು ತಲೆ ಮರೆಸಿಕೊಂಡಿದ್ದರು. ಈ ಸಂದರ್ಭದಲ್ಲಿ ಈ ಹಾದಿಯಲ್ಲಿ ಹೋಗುತ್ತಿದ್ದ ವಾಹನಗಳು ತೊಂದರೆ ಅನುಭವಿಸಿವೆ ಎಂದು ಮೂಲಗಳು ಹೇಳಿವೆ.

ಅದೇ ವೇಳೆ ಸಚಿವರು ಮುಂದಿನ ಟೋಲ್ ಬೂತ್ ಒಂದರಲ್ಲಿ ಯಾವುದೇ ತಕರಾರಿಲ್ಲದೆ ಸುಂಕ ಪಾವತಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ