ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಅಗ್ನಿ' ಪರೀಕ್ಷೆ ಯಶಸ್ವಿ; ಪಾಕಿಸ್ತಾನಕ್ಕೆ ಭಾರತ ಪರೋಕ್ಷ ಎಚ್ಚರಿಕೆ (Agni-III missile | test fire | India | Pakistan)
Bookmark and Share Feedback Print
 
ಆಗಾಗ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ನಾವೇನೂ ಕಮ್ಮಿಯಿಲ್ಲ ಎಂಬ ಹೇಳಿಕೆಗಳನ್ನು ನೀಡುತ್ತಿರುವ ನೆರೆರಾಷ್ಟ್ರ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆಯನ್ನು ರವಾನಿಸಿರುವ ಭಾರತ ಇಂದು ಅಗ್ನಿ-III ಅಣ್ವಸ್ತ್ರ ಸಿಡಿತಲೆ ಖಂಡಾಂತರ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಹಾರಾಟ ನಡೆಸಿದೆ.

3,000 ಕಿಲೋ ಮೀಟರ್ ದೂರ ಕ್ರಮಿಸಬಲ್ಲ ಮತ್ತು 1.5 ಟನ್ ತೂಕದ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು ಹಾರಬಲ್ಲ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯನ್ನು ಭಾನುವಾರ ಬೆಳಿಗ್ಗೆ 10.46ಕ್ಕೆ ಒರಿಸ್ಸಾ ರಾಜಧಾನಿ ಭುವನೇಶ್ವರದಿಂದ 200 ಕಿಲೋ ಮೀಟರ್ ದೂರದಲ್ಲಿರುವ ಭದ್ರಕ್ ಜಿಲ್ಲೆಯ ಧಾಮ್ರಾ ಎಂಬಲ್ಲಿನ ಇನ್ನರ್ ವೀಲರ್ ದ್ವೀಪದಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.
PTI


ಪಕ್ಕದ ಕೆಲವು ದೇಶಗಳನ್ನು ತಲುಪುವ ಸಾಮರ್ಥ್ಯ ಹೊಂದಿರುವ ಅಗ್ನಿ-III ಕ್ಷಿಪಣಿಯ ನಾಲ್ಕನೇ ಪರೀಕ್ಷೆಯಿದು. 2006ರ ಜುಲೈ 9ರಂದು ನಡೆಸಲಾದ ಮೊದಲ ಪರೀಕ್ಷೆ ವಿಫಲವಾಗಿತ್ತು. ರಾಕೆಟ್‌ನ ಎರಡನೇ ಹಂತದಲ್ಲಿ ಕ್ಷಿಪಣಿ ಬೇರ್ಪಡುವಲ್ಲಿ ವಿಳಂಬವುಂಟಾದ ಕಾರಣ ನಿರ್ದಿಷ್ಟ ಗುರಿ ತಲುಪುವುದು ಕ್ಷಿಪಣಿಗೆ ಸಾಧ್ಯವಾಗಿರಲಿಲ್ಲ.

ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಈ ಕ್ಷಿಪಣಿಯನ್ನು 2007ರ ಏಪ್ರಿಲ್ 12ರಂದು ಮತ್ತು 2008ರ ಮೇ 9ರಂದು ಯಶಸ್ವಿ ಪರೀಕ್ಷೆ ನಡೆಸಲಾಗಿತ್ತು.

ಅಗ್ನಿ ಸರಣಿಯ ಕ್ಷಿಪಣಿಗಳಲ್ಲೊಂದಾದ 'ಅಗ್ನಿ-III' ಕ್ಷಿಪಣಿಯು ಎರಡು ಹಂತದ ಪ್ರಬಲ ತಳ್ಳೂಕಗಳನ್ನು ಹೊಂದಿರುವ ಕ್ಷಿಪಣಿಯಾಗಿದ್ದು, 17 ಮೀಟರ್ ಉದ್ದ, ಎರಡು ಮೀಟರ್ ವ್ಯಾಸವಿದೆ. ಉಡಾಯಿಸುವ ಸಂದರ್ಭದಲ್ಲಿ ಇದರ ತೂಕ 50 ಟನ್ನುಗಳು.

ಅಗ್ನಿ-I ಕ್ಷಿಪಣಿ 750-800 ಕಿಲೋ ಮೀಟರ್ ಕ್ರಮಿಸಬಲ್ಲ ಕಡಿಮೆ ಅಂತರದ ಕ್ಷಿಪಣಿ. ಅಗ್ನಿ-II ಕ್ಷಿಪಣಿ ಇದರ ಎರಡು ಪಟ್ಟು ಅಂದರೆ 1,500 ಕಿಲೋ ಮೀಟರ್ ತಲುಪುವ ಸಾಮರ್ಥ್ಯ ಹೊಂದಿದೆ. ಇವೆರಡೂ ಕ್ಷಿಪಣಿಗಳನ್ನು ಭಾರತೀಯ ಭದ್ರತಾ ಪಡೆಗಳಿಗೆ ಸೇರಿಸಲಾಗಿದೆ.

ಹೀಗೆ ಆಗಾಗ ಕ್ಷಿಪಣಿ ಪರೀಕ್ಷೆಗಳನ್ನು ನಡೆಸುವುದರಿಂದ ಅವುಗಳ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಆದರೆ ಈ ಬೆಳವಣಿಗೆ ಪಾಕಿಸ್ತಾನದ ಕಳವಳವನ್ನು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ