ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುಣೆ ಸ್ಫೋಟ ಲಷ್ಕರ್-ಐಎಂ 'ಕರಾಚಿ ಪ್ರೊಜೆಕ್ಟ್'ನ ಭಾಗವೇ? (Pune blast | Karachi Project | Indian Mujahideen | Lashkar-e-Taiba)
Bookmark and Share Feedback Print
 
ಭಾರತದ ಮೇಲಿನ ಆಕ್ರಮಣಕಾರಿ ನೀತಿಯನ್ನು ಮುಂದುವರಿಸುವ ನಿಟ್ಟಿನಿಂದ ಲಷ್ಕರ್ ಇ ತೋಯ್ಬಾದ ಯೋಜಿತ'ಕರಾಚಿ ಪ್ರೊಜೆಕ್ಟ್'ನ್ನು ಗಡಿಯಾಚೆಗೆ ತರಬೇತಿ ಪಡೆದ ಭಾರತೀಯ ಜಿಹಾದಿಗಳು ಮತ್ತು ಪಾಕಿಸ್ತಾನ ಸೇನೆಯ ಮಾಜಿ-ಹಾಲಿ ಅಧಿಕಾರಿಗಳನ್ನೊಳಗೊಂಡ 'ಇಂಡಿಯನ್ ಮುಜಾಹಿದೀನ್' ಶನಿವಾರ ಪುಣೆಯಲ್ಲಿ ಸ್ಫೋಟ ನಡೆಸಿರಬಹುದು ಎಂದು ತನಿಖಾ ದಳಗಳು ಶಂಕೆ ವ್ಯಕ್ತಪಡಿಸಿವೆ.

ಎರಡು ವಿದೇಶೀಯರೂ ಸೇರಿದಂತೆ ಒಂಬತ್ತು ಮಂದಿಯ ಸಾವಿಗೆ ಕಾರಣವಾದ ಜರ್ಮನ್ ಬೇಕರಿ ಸ್ಫೋಟದ ಹಿಂದೆ ದಕ್ಷಿಣ ಭಾರತದ ಇಂಡಿಯನ್ ಮುಜಾಹಿದೀನ್‌ನ ತಲೆಮರೆಸಿಕೊಂಡಿರುವ ಉಗ್ರರಾದ ಪುಣೆ ನಿವಾಸಿ ಮೊಹ್ಸಿನ್ ಚೌದರಿ ಮತ್ತು ಅಬ್ದುಸ್ ಸುಭಾನ್ ಖುರೇಷಿಗಳಿರಬಹುದು ಎಂದು ಭದ್ರತಾ ದಳದ ಮೂಲಗಳು ತಿಳಿಸಿವೆ.
PTI


ಈ ನಡುವೆ ಲಷ್ಕರ್ ಇ ತೋಯ್ಬಾದ ಅಂಗ ಸಂಘಟನೆ ಪಾಕಿಸ್ತಾನ ಮೂಲದ ಜಮಾತ್ ಉದ್ ದಾವಾ ಈ ಕೃತ್ಯ ನಡೆಸಿರುವ ಸಾಧ್ಯತೆಗಳಿವೆ ಎಂದೂ ಹೇಳಲಾಗುತ್ತಿದ್ದು, ಈ ನಿಟ್ಟಿನಲ್ಲೂ ತನಿಖೆಗಳು ಮುಂದುವರಿದಿವೆ.

ಭಾರತದಲ್ಲಿ ದುಷ್ಕೃತ್ಯಗಳನ್ನು ನಡೆಸಲು ಭಾರತೀಯರಿಗೆ ಪಾಕಿಸ್ತಾನದಲ್ಲಿ ಭಯೋತ್ಪಾದನಾ ತರಬೇತಿಗಳನ್ನು ನೀಡಲಾಗುತ್ತಿದೆ. ಈ ಸರಣಿ ಕೃತ್ಯಗಳಿಗೆ 'ಕರಾಚಿ ಪ್ರೊಜೆಕ್ಟ್' ಎಂದು ಹೆಸರಿಸಲಾಗಿದೆ ಎಂದು ಇತ್ತೀಚೆಗಷ್ಟೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಇಂಡಿಯನ್ ಮುಜಾಹಿದೀನ್ ಉಗ್ರ ಪೊಲೀಸರಲ್ಲಿ ಬಾಯ್ಬಿಟ್ಟಿದ್ದ.

ಕರಾಚಿ ಪ್ರೊಜೆಕ್ಟ್ ಅಂಗವಾಗಿ ಲಷ್ಕರ್ ಇ ತೋಯ್ಬಾದಿಂದ ಪಾಕಿಸ್ತಾನದಲ್ಲಿ ತರಬೇತಿ ಪಡೆದು ಭಾರತಕ್ಕೆ ವಾಪಸಾಗಿದ್ದ ಮೊಹಮ್ಮದ್ ಅಹ್ಮದ್ ಖ್ವಾಜಾ ಎಂಬ ಇಂಡಿಯನ್ ಮುಜಾಹಿದೀನ್ ಉಗ್ರನನ್ನು ಹೈದರಾಬಾದ್ ಪೊಲೀಸರು ಇತ್ತೀಚೆಗಷ್ಟೇ ಚೆನ್ನೈಯಲ್ಲಿ ಬಂಧಿಸಿದ್ದರು. ಆತನಿಗೆ ಪುಣೆಯ ಓಶೋ ಆಶ್ರಮ ಮತ್ತು ಮುಂಬೈಯ ಬ್ಲೂ ಸೈನಾಗೋಗ್‌ನಲ್ಲಿನ ವೀಡಿಯೋಗಳನ್ನು ತೋರಿಸಲಾಗಿತ್ತು ಎಂದು ಆತ ತನಿಖಾ ಅಧಿಕಾರಿಗಳಲ್ಲಿ ಹೇಳಿದ್ದ ಎಂದು ಮೂಲಗಳು ಹೇಳಿವೆ.

ಇಂಡಿಯನ್ ಮುಜಾಹಿದೀನ್ ಈ ಹಿಂದೆ ನಡೆಸಿದ ಕೃತ್ಯಗಳಿಗೂ ಇದಕ್ಕೂ ಕೆಲವು ವಿಚಾರಗಳಲ್ಲಿ ಸಾಮ್ಯತೆಗಳು ಕಂಡು ಬಂದಿರುವುದರಿಂದ ಮತ್ತು ಅಮೆರಿಕಾ ವಶದಲ್ಲಿರುವ ಡೇವಿಡ್ ಹೆಡ್ಲಿ ಮುಂಬೈ ಸ್ಫೋಟಕ್ಕೂ ಮೊದಲು ಇಲ್ಲಿಗೆ ಭೇಟಿ ನೀಡಿದ್ದ ಎಂಬ ಮಾಹಿತಿಗಳ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಳನ್ನು ನಡೆಸಲಾಗುತ್ತಿದೆ.

ಮುಂಬೈ ದಾಳಿ ಬಳಿಕ ನಡೆದ ಮೊದಲ ಭಯೋತ್ಪಾದನಾ ಕೃತ್ಯದಲ್ಲಿ ಇಟಲಿಯ ಮಹಿಳೆ ಹಾಗೂ ಇರಾನ್ ವಿದ್ಯಾರ್ಥಿಯೊಬ್ಬ ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದ್ದರು. ಶನಿವಾರ ಪುಣೆಯಲ್ಲಿನ ಜರ್ಮನ್ ಬೇಕರಿಯಲ್ಲಿ ಬಾಂಬ್ ಇಟ್ಟಿದ್ದ ಪೊಟ್ಟಣವೊಂದನ್ನು ಸಿಬ್ಬಂದಿಯೊಬ್ಬ ತೆರೆಯುವಾಗ ಸ್ಫೋಟ ಸಂಭವಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ