ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸ್ಫೋಟಕ್ಕೆ ಕೇಂದ್ರವನ್ನು ದೂರಿದ ಬಿಜೆಪಿ ಮೇಲೆ ಕಾಂಗ್ರೆಸ್ ಕಿಡಿ..! (Politicisation | terror | anti-national | BJP)
Bookmark and Share Feedback Print
 
ಪುಣೆ ಸ್ಫೋಟಕ್ಕೆ ಕೇಂದ್ರ ಸರಕಾರವೇ ನೇರ ಹೊಣೆ ಎಂದು ಟೀಕಿಸಿದ್ದ ಬಿಜೆಪಿ ಮತ್ತು ಶಿವಸೇನೆಗಳ ಮೇಲೆ ಹರಿಹಾಯ್ದಿರುವ ಕಾಂಗ್ರೆಸ್, ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ರಾಜಕೀಕರಣಗೊಳಿಸುವುದು ಅಥವಾ ಜಾತೀಕರಣಗೊಳಿಸುವುದು ರಾಷ್ಟ್ರ ವಿರೋಧಿ ಎಂದು ತಿರುಗೇಟು ನೀಡಿದೆ.

ಯಾವುದೇ ಸ್ಪಷ್ಟತೆ ಕಂಡು ಬರದ ಹೊರತು ಟೀಕಾಸ್ತ್ರವನ್ನು ಪ್ರಯೋಗಿಸುವುದು ಅವಿವೇಕಯುತ, ಅನುಚಿತ ಮತ್ತು ಬೇಜವಾಬ್ದಾರಿಯುತ ಎಂದು ಬಿಜೆಪಿಯ ಹೇಳಿಕೆಗೆ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಹೇಳಿದ್ದಾರೆ.

ಪುಣೆ ಸ್ಫೋಟದ ಸಂಬಂಧ ಪ್ರಮುಖ ವಿರೋಧಪಕ್ಷದ ಟೀಕೆಗೆ ನೀವೇನು ಹೇಳುತ್ತೀರಿ ಎಂಬ ಪ್ರಶ್ನೆಗೆ ಅವರು, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಕೋಮು ಲೇಪ ಹಚ್ಚುವುದು ಅಥವಾ ರಾಜಕೀಕರಣಗೊಳಿಸುವುದು ನಿಜಕ್ಕೂ ರಾಷ್ಟ್ರವಿರೋಧಿ ಕೃತ್ಯ ಎಂದರು.

ತನಿಖಾ ಫಲಿತಾಂಶಗಳು ಹೊರ ಬೀಳಲಿ. ನಂತರ ಯಾವುದಾದರೂ ನಿರ್ಧಾರಗಳು ಅಗತ್ಯವಿದ್ದರೆ ಸರಕಾರ ಅದನ್ನು ಪರಿಗಣಿಸುತ್ತದೆ ಎಂಬ ಭರವಸೆ ನಮಗಿದೆ. ಹಾಗೆಂದು ಸುಖಾಸುಮ್ಮನೆ ಸರಕಾರದ ಮೇಲೆ ಟೀಕೆ ನಡೆಸುವುದು ಸರಿಯಲ್ಲ ಎಂದು ತಿವಾರಿ ವಿರೋಧ ಪಕ್ಷಗಳಿಗೆ ಸಲಹೆ ನೀಡಿದ್ದಾರೆ.

ಗುಪ್ತಚರ ವೈಫಲ್ಯ, ಸರಕಾರವೇ ಹೊಣೆ..
ಮಹಾರಾಷ್ಟ್ರ ಸರಕಾರ ಮತ್ತು ಕೇಂದ್ರ ಸರಕಾರಕ್ಕೆ ಬಾಲಿವುಡ್ ಚಿತ್ರ ಬಿಡುಗಡೆ ಮಾಡುವುದೇ ಮುಖ್ಯವಾಗಿತ್ತು. ಇದೇ ಕಾರಣದಿಂದ ಆಯಕಟ್ಟಿನ ಸ್ಥಳಗಳಿಂದ ಭದ್ರತೆಯನ್ನು ಹಿಂದಕ್ಕೆ ಪಡೆದು ಸಿನಿಮಾ ಮಂದಿರಗಳಿಗೆ ನಿಯೋಜಿಸಲಾಗಿತ್ತು. ಅಲ್ಲದೆ ಬೇಹುಗಾರಿಕಾ ವೈಫಲ್ಯವೂ ಇದಕ್ಕೆ ಕಾರಣ. ಇವೆಲ್ಲದರ ಹೊಣೆ ಕೇಂದ್ರ ಸರಕಾರದ್ದು ಎಂದು ಬಿಜೆಪಿ ಮತ್ತು ಶಿವಸೇನೆಗಳು ಟೀಕಿಸಿವೆ.

ಈ ಟೀಕೆಗೆ ಎಡಪಕ್ಷಗಳು ಕೂಡ ಕೈಜೋಡಿಸಿದ್ದು, ಕೇಂದ್ರ ಸರಕಾರದ ಬೇಹುಗಾರಿಕಾ ಸಾಮರ್ಥ್ಯವನ್ನೇ ಪ್ರಶ್ನಿಸಿವೆ. ಅಮೆರಿಕಾದಲ್ಲಿ ಒಂದು ದಾಳಿ ನಡೆದ ನಂತರ ಮತ್ತೆ ಕುಕೃತ್ಯ ನಡೆಯದಂತೆ ನೋಡಿಕೊಳ್ಳುವುದು ಸಾಧ್ಯವಾದರೆ, ಅದು ಭಾರತದಲ್ಲಿ ಯಾಕೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನೇತೃತ್ವದ ಕೇಂದ್ರವನ್ನು ಪ್ರಶ್ನಿಸಿವೆ.

ಗುಪ್ತಚರ ವೈಫಲ್ಯದಿಂದ ಸ್ಫೋಟ ಸಂಭವಿಸಿಲ್ಲ ಎಂಬ ಗೃಹಸಚಿವ ಪಿ. ಚಿದಂಬರಂ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ದಾಳಿಯ ಕುರಿತು ಈ ಹಿಂದೆಯೇ ಮಾಹಿತಿ ಲಭ್ಯವಾಗಿದ್ದ ಹೊರತಾಗಿಯೂ ಕೇಂದ್ರ ಅದನ್ನು ತಪ್ಪಿಸಲು ವಿಫಲವಾಗಿದೆ ಎಂದು ಟೀಕಾ ಪ್ರಹಾರ ನಡೆಸಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್ ಅವರು ನಟ ಶಾರೂಖ್ ಅವರ ಮನೆಯ ಅಂಗರಕ್ಷಕರಾಗಲಿ ಎಂದಿದ್ದ ಶಿವಸೇನೆ ಮತ್ತೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ರಾಜಕೀಯ ಮರೆತ ಚೌಹಾನ್ ಕಾರಣದಿಂದ ಒಂಬತ್ತು ಮಂದಿ ಅಮಾಯಕರು ಬಲಿಯಾದರು ಎಂದಿದೆ.
ಸಂಬಂಧಿತ ಮಾಹಿತಿ ಹುಡುಕಿ