ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ ಹೋರಾಟದಲ್ಲಿ ನಕ್ಸಲರು; ಪುರಾವೆ ಒದಗಿಸಿ: ಸುಪ್ರೀಂ (Naxal | Andhra Pradesh | Osmania University | Telangana)
Bookmark and Share Feedback Print
 
ತೆಲಂಗಾಣ ಹೋರಾಟದಲ್ಲಿ ಭಾರೀ ಸಂಖ್ಯೆಯ ನಕ್ಸಲರು ಸೇರಿಕೊಂಡಿದ್ದಾರೆ ಎಂಬ ಆಂಧ್ರಪ್ರದೇಶ ಸರಕಾರದ ವಾದವನ್ನು ಆಲಿಸುತ್ತಿರುವ ಸರ್ವೋಚ್ಛ ನ್ಯಾಯಾಲಯವು ಅಗತ್ಯ ಪುರಾವೆಗಳನ್ನು ಒದಗಿಸುವಂತೆ ನಿರ್ದೇಶನ ನೀಡಿದೆ.

ಉಸ್ಮಾನಿಯಾ ವಿಶ್ವವಿದ್ಯಾಲಯದ ಆವರಣದಿಂದ ಅರೆಮಿಲಿಟರಿ ಪಡೆಯನ್ನು ಹಿಂದಕ್ಕೆ ಪಡೆಯಬೇಕು ಆಂಧ್ರ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿರುವ ಸುಪ್ರೀಂ ಕೋರ್ಟ್, ಈ ಸಂಬಂಧ ಸೂಕ್ತ ಸಾಕ್ಷ್ಯಗಳನ್ನು ನೀಡುವಂತೆ ತಿಳಿಸಿದೆ.

ನಕ್ಸಲರು ಉಸ್ಮಾನಿಯಾ ಯುನಿವರ್ಸಿಟಿಯಲ್ಲಿ ಆಶ್ರಯ ಪಡೆದುಕೊಂಡಿರುವ ಬಗ್ಗೆ ನಮ್ಮಲ್ಲಿ ಸಾಕಷ್ಟು ಪುರಾವೆಗಳಿವೆ. ತೆಲಂಗಾಣ ಹೋರಾಟದಲ್ಲೂ ಅವರು ಪ್ರತಿಭಟನಾಕಾರರ ವೇಷದಲ್ಲಿ ಸೇರಿಕೊಂಡಿದ್ದಾರೆ ಎಂದು ಆಂಧ್ರಪ್ರದೇಶ ಸರಕಾರ ಆಂಧ್ರ ಹೈಕೋರ್ಟ್‌ಗೆ ತಿಳಿಸಿತ್ತು.

ಆದರೆ ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಮೇಲೆ ಭದ್ರತಾ ಪಡೆಗಳು ಲಾಠಿಚಾರ್ಜ್ ನಡೆಸಿ ಗಾಯಗೊಳಿಸಿರುವುದನ್ನು ಗಮನಿಸಿದ ಹೈಕೋರ್ಟ್ ತಕ್ಷಣವೇ ಕಾಲೇಜು ಕ್ಯಾಂಪಸ್ಸಿನಿಂದ ಪಡೆಗಳನ್ನು ಹಿಂದಕ್ಕೆ ಪಡೆಯುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಿತ್ತು. ಈ ತೀರ್ಪಿನಿಂದ ಅಸಮಾಧಾನಗೊಂಡ ಸರಕಾರ ಸುಪ್ರೀಂ ಮೆಟ್ಟಿಲೇರಿತ್ತು.

ಉಸ್ಮಾನಿಯಾ ವಿಶ್ವವಿದ್ಯಾಲಯ ಆವರಣದೊಳಗೆ ನಕ್ಸಲರು ನುಸುಳಿದ್ದಾರೆ ಎಂಬುದಕ್ಕೆ ಏನು ಪುರಾವೆಗಳಿವೆ? ಅದನ್ನು ಪರಿಶೀಲಿಸುವ ಅಗತ್ಯವಿದೆ. ಸಾಕ್ಷ್ಯಗಳನ್ನು ಒದಗಿಸಿ ಎಂದು ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ಮತ್ತು ಅಶೋಕ್ ಕುಮಾರ್ ಗಂಗೂಲಿಯವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಆಂಧ್ರ ಪ್ರದೇಶ ಸರಕಾರಕ್ಕೆ ನಿರ್ದೇಶನ ನೀಡಿದೆ.

ಈ ಸಂಬಂಧ ನಾಳೆ ಅಥವಾ ನಾಡಿದ್ದು ಅಗತ್ಯ ಮಾಹಿತಿಗಳನ್ನು ನ್ಯಾಯಾಲಯಕ್ಕೆ ನೀಡುವುದಾಗಿ ಹಿರಿಯ ವಕೀಲ ಹರೀಶ್ ಸಾಲ್ವೆಯವರು ನ್ಯಾಯಾಲಯಕ್ಕೆ ತಿಳಿಸಿದ ನಂತರ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 25ರಂದು ನಡೆಸಲಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.

ಮಾವೋವಾದಿಗಳು ಚಳುವಳಿಯಲ್ಲಿ ಸೇರಿಕೊಂಡಿರುವುದರಿಂದ ಅರೆಸೇನಾ ಪಡೆಗಳ ನಿಯೋಜನೆ ಅಗತ್ಯವಾಗಿದೆ ಎಂಬ ಸರಕಾರ ನಿಲುವನ್ನು ಸಾಲ್ವೆಯವರು ಮಂಡಿಸಿದ ಬಳಿಕ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು, ಆಂಧ್ರಪ್ರದೇಶ ಹೈಕೋರ್ಟ್ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಫೆಬ್ರವರಿ 25ರವರೆಗೆ ವಿಸ್ತರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ