ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲ್ ಪರ ಗಿಟಾರ್ ಹಿಡಿದು ಹಾಡಲಿರುವ ತೃಣಮೂಲ ಸಂಸದ (Naxals | Maoists | Trinamool Congress | Kabir Suman)
Bookmark and Share Feedback Print
 
ನಕ್ಸಲರ ವಿರುದ್ಧದ ಕಾರ್ಯಾಚರಣೆಯನ್ನು ವಿರೋಧಿಸುತ್ತಿರುವ ಆಡಳಿತ ಪಕ್ಷದ ಪಾಲುದಾರ ತೃಣಮೂಲ ಕಾಂಗ್ರೆಸ್ ಸಂಸದರೊಬ್ಬರು ಕೇಂದ್ರ ಸರಕಾರದ ನೀತಿಯ ವಿರುದ್ಧ ವಿಶಿಷ್ಟ ಪ್ರತಿಭಟನೆಯನ್ನು ಮಾಡಲಿದ್ದಾರೆ. ಮೂಲತಃ ಹಾಡುಗಾರರಾಗಿರುವ ಅವರು ಗಿಟಾರ್ ಹಿಡಿದುಕೊಂಡು ನಕ್ಸಲ್ ಪರ ಗೀತೆಗಳನ್ನು ಹಾಡುವ ಮೂಲಕ ತನ್ನ ಇಂಗಿತವನ್ನು ಸಂಬಂಧಪಟ್ಟವರಿಗೆ ತಲುಪಿಸಲಿದ್ದಾರೆ.

ಕೇಂದ್ರ ಸರಕಾರದ 'ಆಪರೇಷನ್ ಗ್ರೀನ್ ಹಂಟ್' ನೀತಿಯನ್ನು ತೀವ್ರವಾಗಿ ವಿರೋಧಿಸುತ್ತಿರುವ ತೃಣಮೂಲ ಕಾಂಗ್ರೆಸ್ ಸಂಸದ ಕಬೀರ್ ಸುಮನ್, ಕಾನೂನು ವಿರೋಧಿ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ವಿರುದ್ಧ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸುತ್ತೇನೆ ಎಂದಿದ್ದಾರೆ.

ಈ ಸಂಬಂಧ ತನ್ನ ಅಧಿನಾಯಕಿ ಮಮತಾ ಬ್ಯಾನರ್ಜಿಯವರು ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರೂ ಹೋರಾಟ ಕೈ ಬಿಡುವುದಿಲ್ಲ. ನನ್ನ ಹೋರಾಟ ಶಾಂತಿಯುತವಾಗಿರುತ್ತದೆ. ನನ್ನ ಗಿಟಾರ್ ತೆಗೆದುಕೊಂಡು ಹೋಗಲಿರುವ ನಾನು ಯುಎಪಿಎಯಂತಹ ಕಾಯ್ದೆಗಳನ್ನು ನಕ್ಸಲರ ಮೇಲೆ ಹೇರುವುದನ್ನು ನಾನು ವಿರೋಧಿಸಲಿದ್ದೇನೆ. ನನ್ನೊಂದಿಗೆ ಯಾರು ಸೇರುವುದಿದ್ದರೂ ಸ್ವಾಗತ ಎಂದು ಸುಮನ್ ತಿಳಿಸಿದ್ದಾರೆ.

ಈ ಬಗ್ಗೆ ನೀವು ಮಮತಾ ಬ್ಯಾನರ್ಜಿಯವರಲ್ಲಿ ಮಾತುಕತೆ ನಡೆಸಿದ್ದೀರಾ ಎಂಬ ಪ್ರಶ್ನೆಗವರು, ನಾನು ಪ್ರತಿಯೊಬ್ಬರನ್ನೂ ಆಹ್ವಾನಿಸಿದ್ದೇನೆ; ಅವರು ಕೂಡ ನನ್ನೊಂದಿಗೆ ಇರಬೇಕೆಂದು ಬಯಸುತ್ತಿದ್ದೇನೆ ಎಂದು ಸುಮನ್ ತಿಳಿಸಿದ್ದಾರೆ. ಆ ಮೂಲಕ ತಾನು ಮಮತಾ ಅವರೊಂದಿಗೆ ಈ ವಿಚಾರವನ್ನು ಚರ್ಚಿಸಿಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

ಬಜೆಟ್ ಅಧಿವೇಶನದ ದಿನವೇ ನಾನು ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದೆ. ಆದರೆ ಪಕ್ಷದ ಮುಖಂಡರು ಪಕ್ಷದ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಬಳಿಕ ಪ್ರತಿಭಟನೆ ನಡೆಸಿ, ಈಗ ಬೇಡ ಎಂದು ಸೂಚಿಸಿದ್ದರು. ಆದರೆ ಮಾರ್ಚ್ ಆರರಂದು ನಾನು ಪ್ರತಿಭಟನೆ ನಡೆಸಿಯೇ ಸಿದ್ಧ. ನಾನು ಸರಕಾರ ಅಥವಾ ಪಕ್ಷದ ವಿರುದ್ಧ ಹೋಗುತ್ತಿಲ್ಲ ಎಂದಿದ್ದಾರೆ.

ಅಲ್ಲದೆ ಮಮತಾ ಅವರು ಏನು ಮಾಡುತ್ತಿದ್ದಾರೋ ಅದನ್ನು ನಾನು ಬೆಂಬಲಿಸುತ್ತಿದ್ದೇನೆ. ನನಗೆ ಭಿನ್ನಾಭಿಪ್ರಾಯವಿರುವುದು ಸರಕಾರವು ಕೆಲವು ವಿಚಾರಗಳ ಕುರಿತು ತೆಗೆದುಕೊಂಡಿರುವ ನಿರ್ಧಾರಗಳ ಕುರಿತು ಮಾತ್ರ. ಈ ಕುರಿತು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಇಚ್ಛಿಸುತ್ತೇನೆ ಎಂದು ಸುಮನ್ ಹೇಳಿದ್ದಾರೆ.

ಅದೇ ಹೊತ್ತಿಗೆ ಮಾವೋವಾದಿಗಳು ನಡೆಸುತ್ತಿರುವ ಹಿಂಸಾಚಾರ ಸರಿಯಲ್ಲ ಎಂಬುದನ್ನು ಒಪ್ಪಿಕೊಳ್ಳುವ ಅವರು, 'ಅವರು ಹಿಂಸಾಚಾರವನ್ನು ನಿಲ್ಲಿಸಬೇಕು ಎಂಬುದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ ಅವರ ಕದನವಿರಾಮ ಆಹ್ವಾನವನ್ನು ಸರಕಾರ ಸ್ವೀಕರಿಸಬೇಕು ಮತ್ತು ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಮಾತುಕತೆ ನಡೆಸಬೇಕು' ಎಂದು ಸುಮನ್ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ