ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೋಳಿ ಓಕುಳಿಯಾಟಕ್ಕೆ ಮುಸ್ಲಿಂ, ಕ್ರೈಸ್ತರಿಂದಲೂ ರಂಗು (Muslim | Christian | Hindu | Holi)
Bookmark and Share Feedback Print
 
ಒರಿಸ್ಸಾದ ಗಲಭೆಪೀಡಿತ ಕಂಧಮಾಲ್ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವೆಡೆ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದವರು ಮತಭೇದವಿಲ್ಲದೆ ಹಿಂದೂಗಳೊಂದಿಗೆ ಹೋಳಿ ಓಕುಳಿಯಾಟದಲ್ಲಿ ಪಾಲ್ಗೊಂಡು ಸಂಭ್ರಮಿಸುವ ಮೂಲಕ ಸಾಮರಸ್ಯಕ್ಕೆ ಜೈ ಎಂದಿದ್ದಾರೆ.

ಎರಡು ವರ್ಷಗಳ ಹಿಂದೆ ಭಾರೀ ಕೋಮುಗಲಭೆಗೆ ಸಾಕ್ಷಿಯಾಗಿದ್ದ ಒರಿಸ್ಸಾದ ಕಂಧಮಾಲ್ ಜಿಲ್ಲೆಯಲ್ಲಿ ಹಿಂದೂಗಳ ಜತೆಗೂಡಿದ ಕ್ರಿಶ್ಚಿಯನ್ನರು ಸಂಭ್ರಮದಿಂದ ಕಾಮನ ಹಬ್ಬದಲ್ಲಿ ಪಾಲ್ಗೊಂಡರು.

ಬಣ್ಣವನ್ನು ಪರಸ್ಪರ ಎರಚಿಕೊಳ್ಳುವ ಮೂಲಕ ಅವರು ತಮ್ಮ ಭಿನ್ನಮತವನ್ನು ಮರೆತಿದ್ದಾರೆ. ಸಿಹಿ-ತಿಂಡಿಗಳನ್ನು ಕೂಡ ಹಂಚಿದ್ದಾರೆ. ಹಲವು ಕಡೆ ಡ್ರಮ್ ಬಡಿತಗಳಿಗೆ ಕ್ರೈಸ್ತರು ಹೆಜ್ಜೆ ಹಾಕುವ ಮೂಲಕ ಕೋಮು ಸಾಮರಸ್ಯ ಹೆಚ್ಚಿಸಲು ಯತ್ನಿಸಿದ ವರದಿಗಳು ಬಂದಿವೆ ಎಂದು ಕಂಧಮಾಲ್ ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೆ ಸುಬರ್ನಾಪುರ ಜಿಲ್ಲೆಯ ನಾರಾಯಣಪುರ ಗ್ರಾಮ ಹಾಗೂ ಭುವನೇಶ್ವರದಿಂದ 110 ಕಿಲೋ ಮೀಟರ್ ದೂರದಲ್ಲಿರುವ ಕರಾವಳಿ ಜಿಲ್ಲೆ ಜಗತಸಿಂಗ್‌ಪುರ್‌ನ ಫಕೀರ್ತಾಕಿಯಾ ಗ್ರಾಮಗಳಲ್ಲಿ ನೂರಾರು ಮುಸ್ಲಿಮರು ಹಿಂದೂಗಳೊಂದಿಗೆ ಸೇರಿಕೊಂಡು ಹೋಳಿ ಹಬ್ಬವನ್ನು ಆಚರಿಸಿದ್ದಾರೆ.

ನಮ್ಮ ನಡುವೆ ಯಾವುದೇ ಭಿನ್ನಮತವಿಲ್ಲ. ನಾವು ಈ ಹಬ್ಬವನ್ನು ಈಗಷ್ಟೇ ಆಚರಿಸಲು ಆರಂಭಿಸಿದ್ದಲ್ಲ. ಇದುವರೆಗೂ ಹಿಂದೂ - ಮುಸ್ಲಿಮರ ನಡುವೆ ಇಲ್ಲಿ ಗಲಭೆ ನಡೆದಿಲ್ಲ. ಪ್ರತೀ ಬಾರಿಯೂ ನಾವು ಒಗ್ಗೂಡಿ ಸಂಭ್ರಮದಿಂದ ಆಚರಿಸುತ್ತೇವೆ. ಈದ್ ಹಬ್ಬವನ್ನೂ ಇದೇ ರೀತಿ ಸಂಭ್ರಮದಿಂದ ಆಚರಿಸುತ್ತೇವೆ. ದೇಶದಾದ್ಯಂತ ನಮ್ಮಂತೆ ಎಲ್ಲರೂ ಬಾಳಬೇಕೆಂದು ನಾನು ಕರೆ ನೀಡುತ್ತಿದ್ದೇನೆ ಎಂದು ಒರಿಸ್ಸಾದ ಪುರಿ ಗ್ರಾಮ ಬಿಜಯ್ ನಾಯಕ್ ಎಂಬವರು ಹೇಳುತ್ತಾರೆ.

ಹಲವಾರು ವರ್ಷಗಳ ಹಿಂದಿನಿಂದಲೇ ಹೋಳಿ ಹಬ್ಬವನ್ನು ಹಿಂದೂ ಮತ್ತು ಮುಸ್ಲಿಮರು ಒಟ್ಟಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುತ್ತೇವೆ. ಇದು ಕೇವಲ ಹಿಂದೂಗಳ ಹಬ್ಬವೆಂದು ನಾವೆಂದೂ ಅಂದುಕೊಂಡಿಲ್ಲ. ನಾವು ಇದು ನಮ್ಮ ಹಬ್ಬವೆಂದು ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಎಸ್.ಕೆ. ಫಕ್ರುದ್ದೀನ್ ವಿವರಣೆ ನೀಡಿದ್ದಾರೆ.

ಇದೇ ರೀತಿ ಹಿಂದೂ - ಮುಸ್ಲಿಮರು ಉತ್ತರ ಪ್ರದೇಶದಲ್ಲಿಯೂ ಒಂದಾಗಿ ಹೋಳಿ ಮೆರವಣಿಗೆ ನಡೆಸಿ ಇತರರಿಗೆ ಮಾದರಿಯಾಗಿದ್ದಾರೆ. ಲಕ್ನೋ ಸಂಸದ ಹಾಗೂ ಬಿಜೆಪಿ ಹಿರಿಯ ಮುಖಂಡ ಲಾಲ್‌ಜಿ ಟಂಡನ್ ನೇತೃತ್ವದಲ್ಲಿ ಈ ಸಮಾರಂಭ ನಡೆಯಿತು.

ಕಳೆದ 40 ವರ್ಷಗಳಿಂದ ಇಲ್ಲಿ 'ಹೋಳಿ ಭಾರತ್' ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಹಿಂದೂ ಮತ್ತು ಮುಸ್ಲಿಮರು ಇಲ್ಲಿ ಸಹೋದರರಂತೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ ಎಂದು ಲಕ್ನೋದಲ್ಲಿ ಟಂಡನ್ ಪ್ರತಿಕ್ರಿಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ