ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೌಕಾಪಡೆ ವಿಮಾನ ಪತನ; ಇಬ್ಬರು ಪೈಲಟ್‌ಗಳ ದುರ್ಮರಣ (Hyderabad | Navy plane crash | Kiran MK-II | Suresh Mourya)
Bookmark and Share Feedback Print
 
ಹೈದರಾಬಾದ್‌ನಲ್ಲಿ ವಾಯುಪಡೆಯ ವೈಮಾನಿಕ ಪ್ರದರ್ಶನ ನಡೆಯುತ್ತಿರುವ ವೇಳೆ ನೌಕಾಪಡೆಗೆ ಸೇರಿದ ವಿಮಾನವೊಂದು ಜನವಸತಿ ಪ್ರದೇಶದ ಕಟ್ಟಡವೊಂದರ ಮೇಲೆ ಬಿದ್ದ ಪರಿಣಾಮ ಇಬ್ಬರೂ ಪೈಲಟ್‌ಗಳೂ ಸಾವನ್ನಪ್ಪಿದ್ದಾರೆ.

ಇಲ್ಲಿನ ಬೇಗಂ ಪೇಟೆ ವಿಮಾನ ನಿಲ್ದಾಣದ ಸಮೀಪ ನಡೆಯುತ್ತಿದ್ದ ವೈಮಾನಿಕ ಪ್ರದರ್ಶನದ ವೇಳೆ ಪೈಲಟ್‌ಗಳ ನಿಯಂತ್ರಣ ತಪ್ಪಿದ ಪರಿಣಾಮ ವಿಮಾನ ದರೆಗುರುಳಿತ್ತು.

ಉತ್ತರ ಪ್ರದೇಶದ ಸುಲ್ತಾನಪುರದ ಕಮಾಂಡರ್ ಸುರೇಶ್ ಮೌರ್ಯ ಮತ್ತು ಸಹ ಪೈಲಟ್ ದೆಹಲಿಯ ರಾಹುಲ್ ನಾಯರ್ ಎಂಬ ಇಬ್ಬರು ಪೈಲಟ್‌ಗಳೇ ಸಾವನ್ನಪ್ಪಿದ ದುರ್ದೈವಿಗಳು. ಉಳಿದಂತೆ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ಇತರ ಮೂರು ವಿಮಾನಗಳೊಂದಿಗೆ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ನೌಕಾ ಪಡೆಯ ಸಾಗರ್ ಪವನ್ ತಂಡದ 'ಕಿರಣ್ ಎಂಕೆ-II' ಎಂಬ ವಿಮಾನ ನಿಯಂತ್ರಣ ತಪ್ಪಿ ಮೂರು ಮಹಡಿಗಳ ಕಟ್ಟಡದ ಮೇಲೆ ಉರುಳಿ ಬಿತ್ತು. ಈ ಸಂದರ್ಭದಲ್ಲಿ ಪ್ಯಾರಾಚೂಟ್‌ಗಳನ್ನು ಪೈಲಟ್‌ಗಳಿಗೆ ಬಳಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.

ಭಾರತೀಯ ವಾಯುಪಡೆಯ ಎರಡು ಪ್ರದರ್ಶನ ತಂಡಗಳಾದ 'ಸೂರ್ಯ ಕಿರಣ್ ಏರೋಬಾಟಿಕ್ ಟೀಮ್' ಮತ್ತು 'ಸಾರಂಗ್' ಹೆಲಿಕಾಫ್ಟರ್ ಪಡೆ ಸೇರಿದಂತೆ ನೌಕಾಪಡೆಯ ನಾಲ್ಕು ವಿಮಾನಗಳನ್ನು ಹೊಂದಿದ್ದ ಸಾಗರ್ ಪವನ್ ಏರೋಬಾಟಿಕ್ ಟೀಮ್ ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

ಸಾವನ್ನಪ್ಪಿರುವ ಇಬ್ಬರೂ ಪೈಲಟ್‌ಗಳು ನೌಕಾದಳದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಾಗಿದ್ದರು ಮತ್ತು ಅವರ ಸಾವು ದೇಶಕ್ಕೆ ಬಹುದೊಡ್ಡ ನಷ್ಟ ಎಂದು ಸಾಗರ್ ಪವನ್ ತಂಡದ ಸಂಸ್ಥಾಪಕ ಸದಸ್ಯ ಕ್ಯಾಪ್ಟನ್ ಸುರೇಂದ್ರ ಅಹುಜಾ ಪ್ರತಿಕ್ರಿಯೆ ನೀಡಿದ್ದಾರೆ.

ಜನವಸತಿ ಪ್ರದೇಶದ ಮೇಲೆ ವಿಮಾನ ಪತನವಾಗದಂತೆ ತಡೆಯಲು ಪೈಲಟ್‌ಗಳು ಯತ್ನಿಸಿದ್ದಾರೆ ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಪ್ರತಿಕ್ರಿಯಿಸಿರುವ ಕೇಂದ್ರ ವಾಯುಯಾನ ಸಚಿವ ಪ್ರಫುಲ್ ಪಟೇಲ್, ಇದು ದುರದೃಷ್ಟಕರ ಎಂದು ಹೇಳಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ವಿಮಾನವು ಮೊದಲು ಕಟ್ಟಡದ ಮೇಲಿದ್ದ ಮೊಬೈಲ್ ಟವರ್‌ಗೆ ಡಿಕ್ಕಿ ಹೊಡೆದು, ಬಳಿಕ ಕೆಳಕ್ಕುರುಳಿದೆ. ಮಾರ್ಚ್ 3ರಿಂದ 7ರವರೆಗೆ ನಡೆಯಲಿರುವ ವೈಮಾನಿಕ ಪ್ರದರ್ಶನದ ಆರಂಭಿಕ ದಿನವೇ ಈ ಅವಘಢವು ಸಂಭವಿಸಿದೆ.

ಅಫಘಾತ ನಡೆದ ಪ್ರಾಥಮಿಕ ಮಾಹಿತಿಗಳ ಪ್ರಕಾರ ಸಾವನ್ನಪ್ಪಿದ ಮೌರ್ಯ ಎಂಬ ಪೈಲಟ್ ಬೆಂಗಳೂರಿನವರು ಎಂದು ಹೇಳಲಾಗಿತ್ತು. ಆದರೆ ಇದೀಗ ಖಚಿತ ಮಾಹಿತಿ ಬಂದಿದ್ದು, ಅವರು ಉತ್ತರ ಪ್ರದೇಶದವರಾಗಿದ್ದಾರೆ ಮತ್ತು ಬೆಂಗಳೂರಿನ ಪೈಲಟ್ ಇದರಲ್ಲಿ ಪಾಲ್ಗೊಂಡಿರಲಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ