ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆ ವೀಡಿಯೋ ನನ್ನದಲ್ಲ: ನಿತ್ಯಾನಂದ ಸ್ವಾಮೀಜಿ (NIthyananda Swamiji | Dhayana Peetha | Sex Scandal)
Bookmark and Share Feedback Print
 
ಧ್ಯಾನಪೀಠದ ಪರಮಹಂಸ ನಿತ್ಯಾನಂದ ಸ್ವಾಮೀಜಿಯ ಕಾಮಕಾಂಡ ಬಯಲಾಗುತ್ತಿದ್ದಂತೆಯೇ, ಭಿನ್ನ ಭಿನ್ನ ಧ್ವನಿಗಳು, ಊಹಾಪೋಹಗಳು ಕೇಳಿಬರುತ್ತಿವೆ. ಸ್ವಾಮೀಜಿಯ ಇರುವಿಕೆಯ ಬಗ್ಗೆ ಇನ್ನೂ ನಿಖರ ಮಾಹಿತಿ ಇಲ್ಲ. ಆದರೆ ಇವೆಲ್ಲದರ ಹಿಂದೆ, ಆಶ್ರಮದಲ್ಲೇ ಇದ್ದ ಪ್ರೇಮಾನಂದ ಅಲಿಯಾಸ್ ಲೆನಿನ್ ಕುರುಪ್ಪನ್ ಎಂಬಾತನ ಸಂಚಿದ್ದು, ಗ್ರಾಫಿಕ್ಸ್ ಮೂಲಕ ನಕಲಿ ವೀಡಿಯೋ ಸೃಷ್ಟಿ ಮಾಡಲಾಗಿದೆ ಎಂದು ಮಠ ಸ್ಪಷ್ಟನೆ ನೀಡಿದೆ.

ಶಿವಸೇನೆ ರಾಜ್ಯಾಧ್ಯಕ್ಷ ಆರ್.ಕುಮಾರ ರಾಜ ಅವರು ಸ್ವಾಮೀಜಿ ಜೊತೆ ಮಾತನಾಡಿರುವುದಾಗಿ ಹೇಳಿಕೊಂಡಿದ್ದಾರೆ. ವೀಡಿಯೋದಲ್ಲಿದ್ದುದು ತನ್ನ ಚಿತ್ರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಮತ್ತು ಶೀಘ್ರದಲ್ಲೇ ಮಾಧ್ಯಮಗಳಿಗೆ ಈ ಕುರಿತು ಹೇಳಿಕೆ ನೀಡುವುದಾಗಿಯೂ ಭರವಸೆ ನೀಡಿರುವುದಾಗಿ ಕುಮಾರರಾಜ ಹೇಳಿದ್ದಾರೆ.

ತಮಿಳುನಾಡು ರಾಜಕಾರಣಿಗಳ ಕೈವಾಡ?
ಈ ವೀಡಿಯೋವನ್ನು ಇನ್ನೂ ನಂಬಲು ಸಿದ್ಧರಿಲ್ಲದ ಸ್ವಾಮೀಜಿಯ ಭಕ್ತರು, ಸ್ವಾಮೀಜಿ ಮೇಲಿನ ತಮ್ಮ ಶ್ರದ್ಧೆಯನ್ನು ಸಮರ್ಥಿಸಿಕೊಳ್ಳಲು ಹಲವಾರು ಕಾರಣಗಳನ್ನು ನೀಡುತ್ತಿದ್ದಾರೆ. ಅವುಗಳಲ್ಲೊಂದು, ತಮಿಳುನಾಡಿನ ಪ್ರತಿಷ್ಠಿತ ರಾಜಕಾರಣಿಗಳೊಂದಿಗೆ ಇದ್ದ ಜಮೀನು ಸಂಬಂಧಿತ ವಿವಾದವೇ ಈ ಅವಾಂತರಕ್ಕೆ ಕಾರಣ ಎಂಬ ಊಹಾಪೋಹ.

ಹೇಳಿಕೇಳಿ ದೇವರು ದಿಂಡರೆಂದರೆ ಮುಖ್ಯಮಂತ್ರಿ ಕರುಣಾನಿಧಿ ನೇತೃತ್ವದ ಆಡಳಿತಾರೂಢ ಡಿಎಂಕೆ ಸರಕಾರಕ್ಕೆ ಅಷ್ಟಕ್ಕಷ್ಟೇ. ಪರಮಹಂಸ ನಿತ್ಯಾನಂದ ಸ್ವಾಮೀಜಿ ಕಾಮಕಾಂಡದ ದೃಶ್ಯಗಳನ್ನು ಬಿತ್ತರಿಸಿದ ತಮಿಳುನಾಡಿನ ಟಿವಿ ಚಾನೆಲ್ ಒಡೆತನವಿರುವುದು ಕರುಣಾನಿಧಿ ಸಂಬಂಧಿಕರಾದ ಮಾರನ್ ಕುಟುಂಬದ ಬಳಿ. ಈ ಕುಟುಂಬದ ಪ್ರಬಲ ರಾಜಕಾರಣಿಗಳು ಹಾಗೂ ಆಶ್ರಮದ ನಡುವೆ ಹಲವಾರು ವರ್ಷಗಳಿಂದ ಭೂವಿವಾದವಿದ್ದು, ಅವರೇ ಈ ವೀಡಿಯೋ ಟೇಪ್ ಸಿದ್ಧಪಡಿಸಿದ್ದಾರೆ ಎಂಬುದಾಗಿ ಆರೋಪಿಸುತ್ತಾರೆ ಸ್ವಾಮೀಜಿಯ ಕಟ್ಟಾ ಅನುಯಾಯಿಗಳು.

ಈ ಮಠಗಳ ಮುಖ್ಯಾಲಯವಿರುವುದು ಬೆಂಗಳೂರಿನ ಬಿಡದಿ ಸಮೀಪ. ಎಕರೆಗಟ್ಟಲೆ ವಿಶಾಲ ಪ್ರದೇಶವದು. ಇಲ್ಲೇ ಜಯ ಕರ್ನಾಟಕ ಸಂಘಟನೆ ಮುಖ್ಯಸ್ಥ, ಮಾಜಿ ಡಾನ್ ಮುತ್ತಪ್ಪ ರೈ ನಿವಾಸವೂ ಇದೆ.

ಮುತ್ತಪ್ಪ ರೈ ಬಳಗ ಹಾಗೂ ಸ್ವಾಮೀಜಿ ನಡುವೆ ಈ ಅಮೂಲ್ಯ ಆಸ್ತಿಯ ಬಗ್ಗೆ ವಿವಾದವಿದೆ ಎಂಬ ಬಗ್ಗೆ ಬೆಂಗಳೂರಿನ ಮಠದ ಸುತ್ತಮುತ್ತ ಊಹಾಪೋಹಗಳು ಕೇಳಿಬರುತ್ತಿರುವ ಬಗ್ಗೆ ಆಂಗ್ಲ ಪತ್ರಿಕೆ ಹಾಗೂ ಟಿವಿ ಚಾನೆಲ್‌ಗಳಲ್ಲಿ ಪ್ರತಿಕ್ರಿಯೆ ನೀಡಿರುವ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಯೊಬ್ಬರು, ಮೊದಲು ಸ್ವಾಮೀಜಿಯನ್ನು ಒಳ್ಳೆಯವರು ಎಂದು ನಾವು ನಂಬಿದ್ದೆವು. ಅವರಿಗೆ ಸಹಾಯ ಮಾಡಿದ್ದೆವು. ಆದರೆ ಅವರು ಸರಿಯಿಲ್ಲ ಎಂದು ತಿಳಿಯಿತು ಎಂದರಲ್ಲದೆ, "ನಾವೆಂದಿಗೂ ಸ್ವಾಮೀಜಿಗೆ ಕಿರುಕುಳ ನೀಡಿಲ್ಲ, ಅವರ ಜಮೀನು ಕೂಡ ನಮಗೆ ಬೇಡ. ವಾಸ್ತವವಾಗಿ ಸ್ವಾಮೀಜಿಯೇ ಮುತ್ತಪ್ಪ ರೈ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿದ್ದಾರೆ.

ಹಣಕ್ಕಾಗಿ ಬೆದರಿಕೆ ಕರೆ: ಆಶ್ರಮ
ಈ ಮಧ್ಯೆ, ತಮಗೆ ಚೆನ್ನೈಯಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಬೆಂಗಳೂರಿನ ಬಿಡದಿ ಆಶ್ರಮದ ಮ್ಯಾನೇಜರ್ ಸೇವಾನಂದ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ವೀಡಿಯೋದಲ್ಲಿ ತೋರಿಸಿರುವ ಕ್ಲಿಪ್ಪಿಂಗ್‌ಗಳು ಕೃತಕವಾಗಿ ಸೃಷ್ಟಿದವು ಎಂದು ಸ್ಪಷ್ಟಪಡಿಸಿರುವ ಅವರು, ತಮಗೆ ಬೆದರಿಕೆ ಕರೆ ಮಾಡಿದ ವ್ಯಕ್ತಿಯು ಹಣದ ಬೇಡಿಕೆ ಮುಂದಿಟ್ಟಿದ್ದು, ನೀಡದಿದ್ದರೆ ವೀಡಿಯೋ ಫೂಟೇಜ್ ಅನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡುವುದಾಗಿ ಬೆದರಿಸಿದ್ದ ಎಂದು ಹೇಳಿದ್ದಾರೆ.

ಇದಕ್ಕೆ ಪ್ರೇಮಾನಂದನೇ ಕಾರಣ: ಮಠ
ತಮ್ಮ ವಕೀಲರ ಮೂಲಕ ನ್ಯಾಯಾಲಯದ ಮೊರೆ ಹೋಗಿರುವ ನಿತ್ಯಾನಂದ ಸ್ವಾಮೀಜಿ, ಇವೆಲ್ಲವೂ ತನ್ನ ಮಠದಲ್ಲೇ ಇದ್ದ ಲೆನಿನ್ ಕುರುಪ್ಪನ್ ಅಲಿಯಾಸ್ ಪ್ರೇಮಾನಂದನ ಕೃತ್ಯವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈ ವೀಡಿಯೋವನ್ನು ಸೃಷ್ಟಿಸಿ ಮಾಧ್ಯಮಗಳಿಗೆ ನೀಡಲಾಗಿದೆ. ತನ್ನ ಹೆಸರಿಗೆ ಮಸಿ ಬಳಿಯುವುದೇ ಆತನ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾರೆ.

ಮಾರನ್ ಕುಟುಂಬದ ಒಡೆತನದಲ್ಲಿರುವ ಸನ್ ಟಿವಿ, ದಿನಕರನ್ ಪತ್ರಿಕೆ ಹಾಗೂ ತಮಿಳು ಮುರಸು ಹಾಗೂ ನಕ್ಕೀರನ್ ಪತ್ರಿಕೆಗಳು ತನ್ನ ಕುರಿತಾದ ಯಾವುದೇ ವರದಿ, ಚಿತ್ರ, ವೀಡಿಯೋ ಪ್ರಕಟಿಸದಂತೆ ತಡೆ ಕೋರಿ ಅವರು ಸಲ್ಲಿಸಿದ ಅರ್ಜಿಯನ್ನು ಸ್ಥಳೀಯ ನ್ಯಾಯಾಧೀಶ ಎ.ಮಾಣಿಕವಸಗರ್ ಅವರು ಮಾರ್ಚ್ 8ಕ್ಕೆ ನಿಗದಿಪಡಿಸಿದ್ದಾರೆ.

ಮಠಕ್ಕೆ 17 ದೇಶಗಳಲ್ಲಿ 45 ಲಕ್ಷ ಭಕ್ತರಿದ್ದಾರೆ. ಉಚಿತ ವೈದ್ಯಕೀಯ ಶಿಬಿರಗಳು, ಅಗತ್ಯವಿದ್ದವರಿಗೆ ಶಿಕ್ಷಣದ ಸೇವೆ ನೀಡಲಾಗುತ್ತಿದೆ. ಅಲ್ಲದೆ ತಮಿಳುನಾಡಿನ ತಿರುವಣ್ಣಾಮಲೈಯಲ್ಲಿರುವ ಆಶ್ರಮದಲ್ಲಿ ನಿತ್ಯವೂ ನೂರಾರು ಭಕ್ತರಿಗೆ ಅನ್ನ ದಾಸೋಹ ನಡೆಯುತ್ತಿದ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಸ್ವಾಮೀಜಿಗೆ ಶಿವಸೇನೆ ಬೆಂಬಲ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆಯ ತಮಿಳುನಾಡು ಘಟಕದ ಅಧ್ಯಕ್ಷ ಆರ್.ಕುಮಾರರಾಜ, ಹಿಂದೂ ಸಂಸ್ಕೃತಿಯ ವಿರುದ್ಧ ಒಳಸಂಚು ನಡೆಸುತ್ತಿರುವ ಶಕ್ತಿಗಳು ಈ ಕೃತ್ಯ ಎಸಗಿವೆ ಎಂದು ದೂರಿದ್ದಾರೆ.

ತಮಿಳು ಸಂಸ್ಕೃತಿಗೆ ಅವಮಾನ: ವಕೀಲರು
ನಟಿಯೊಂದಿಗೆ ಕಾಮಕೇಳಿ ದೃಶ್ಯಾವಳಿ ಪ್ರಸಾರವಾಗುತ್ತಿದ್ದಂತೆಯೇ ಮದ್ರಾಸ್ ಹೈಕೋರ್ಟ್ ವಕೀಲರ ಬಳಗವೊಂದು, ನಿತ್ಯಾನಂದ ಸ್ವಾಮೀಜಿ ತಮಿಳು ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ, ಅಶ್ಲೀಲತೆಗಾಗಿ ಅವರನ್ನು ಬಂಧಿಸಿ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು, ಆಶ್ರಮದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ವಾಮೀಜಿ ಪ್ರಕರಣವು ತಮಿಳು ಸಂಸ್ಕೃತಿಗೆ ಹೇಗೆ ಅವಮಾನ ಎಂದು ಕೇಳಿದಾಗ, ನಟಿ ಖುಷ್ಬೂ ಈ ಹಿಂದೆ ವಿವಾಹಪೂರ್ವ ಲೈಂಗಿಕತೆ ಕುರಿತು ಹೇಳಿಕೆ ನೀಡಿದಂತೆಯೇ ಇದು ಕೂಡ ಎಂದು ಹೇಳಿದ ವಕೀಲರಾದ ಆರ್.ಶಿವಶಂಕರ್ ಹಾಗೂ ಎಸ್.ರಜನೀಕಾಂತ್ ಪತ್ರಿಕಾಗೋಷ್ಠಿಯಲ್ಲಿ ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.

ಗ್ರಾಫಿಕ್ಸ್‌ನಲ್ಲಿ ಸೃಷ್ಟಿಸಿದ ವೀಡಿಯೋ: ಸ್ವಾಮೀಜಿ ವೆಬ್‌ಸೈಟ್
ಇದೆಲ್ಲವೂ ಗ್ರಾಫಿಕ್ಸ್, ತಿರುಚಿದ ವೀಡಿಯೋ ಮತ್ತು ಗಾಳಿಸುದ್ದಿಗಳ ಸಮ್ಮಿಶ್ರಣ ಎಂದು ಸ್ಪಷ್ಟಪಡಿಸಿರುವ ನಿತ್ಯಾನಂದ ಸ್ವಾಮೀಜಿಯವರ ಧ್ಯಾನಪೀಠಂ ವೆಬ್‌ಸೈಟ್, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ