ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೇನೆಗಳಲ್ಲಿನ್ನು ಮಹಿಳೆಯರಿಗೂ ಪರ್ಮನೆಂಟ್ ಕಮಿಷನ್: ಕೋರ್ಟ್ (Women officers | armed forces | permanent commission | short service commission)
Bookmark and Share Feedback Print
 
ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳಲ್ಲಿ ಮಹಿಳೆಯರಿಗೆ ಪರ್ಮನೆಂಟ್ ಕಮಿಷನ್ ನೇಮಿಸಬೇಕೆಂದು ದೆಹಲಿ ಹೈಕೋರ್ಟ್ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿದ್ದು, ಸೇನಾ ಪಡೆಗಳಲ್ಲಿನ ನೂರಾರು ಮಹಿಳಾ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಸರಕಾರವು ಪುರುಷ ಅಧಿಕಾರಿಗಳು ಮತ್ತು ಮಹಿಳಾ ಅಧಿಕಾರಿಗಳ ನಡುವೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದ ಮಿಲಿಟರಿ ಮತ್ತು ವಾಯುಸೇನೆಯ 50ಕ್ಕೂ ಹೆಚ್ಚು ಮಹಿಳಾ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.

ಶಾರ್ಟ್ ಸರ್ವಿಸ್ ಕಮಿಷನ್ ನೆಲೆಯಲ್ಲಿ ನಿವೃತ್ತಿಯಾಗಿದ್ದ ಮಹಿಳಾ ಅಧಿಕಾರಿಗಳನ್ನು ಸೇನಾಪಡೆಗಳಿಗೆ ಪರ್ಮನೆಂಟ್ ಕಮಿಷನ್ ನೆಲೆಯಲ್ಲಿ ಮರು ಸೇರ್ಪಡೆಗೊಳಿಸಬೇಕು ಎಂದು ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಎಂ.ಪಿ. ಗಾರ್ಗ್ ಆದೇಶ ನೀಡಿದ್ದಾರೆ.

ಪ್ರಕರಣವು ವಿಚಾರಣೆಗೆ ಬಂದ ನಂತರ ನಿವೃತ್ತಿಯಾದ ಎಲ್ಲಾ ಮಹಿಳಾ ಅಧಿಕಾರಿಗಳನ್ನು ಮರು ಸೇರ್ಪಡೆಗೊಳಿಸುವಂತೆ ಸರಕಾರಕ್ಕೆ ತನ್ನ 32 ಪುಟಗಳ ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.

ಶಾರ್ಟ್ ಸರ್ವಿಸ್ ಕಮಿಷನ್ ಅಧಿಕಾರಿಗಳು 14 ವರ್ಷಗಳ ಕಾಲ ಸೇವೆ ಸಲ್ಲಿಸಬಹುದಾಗಿದ್ದರೆ, ಪುರುಷ ಅಧಿಕಾರಿಗಳು ಪರ್ಮನೆಂಟ್ ಕಮಿಷನ್ ಅಡಿಯಲ್ಲಿ ತಮಗೆ 60 ವರ್ಷ ಆಗುವವರೆಗೆ ಸೇನೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶವಿತ್ತು.

ಇದೀಗ ನ್ಯಾಯಾಲಯವು ಮಹಿಳೆಯರಿಗೂ ಪರ್ಮನೆಂಟ್ ಕಮಿಷನ್ ಸ್ಥಾಪಿಸುವಂತೆ ಸರಕಾರಕ್ಕೆ ಆದೇಶ ನೀಡಿದೆ. ಹಾಗಾಗಿ ಮಹಿಳಾ ಅಧಿಕಾರಿಗಳು ಖುಷಿಯಲ್ಲಿದ್ದಾರೆ.

ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇನ್ನು ಮುಂದೆ ಪುರುಷರಂತೆ ಮಹಿಳೆಯರು ಕೂಡ ಸೇನೆಗಳಲ್ಲಿ ಪೂರ್ಣಾವಧಿ ಸೇವೆ ಸಲ್ಲಿಸಲು ಅವಕಾಶವಿದೆ. ಈ ಹಿಂದಿನ ನೀತಿಗಳ ಪ್ರಕಾರ ಮಹಿಳಾ ಅಧಿಕಾರಿಗಳು ಕಡ್ಡಾಯವಾಗಿ 14 ವರ್ಷಗಳಲ್ಲಿ ನಿವೃತ್ತಿಯಾಗಬೇಕಿತ್ತು. ಇಲ್ಲಿ ಅವರ ದಾಖಲೆಗಳು ಅಥವಾ ಸಾಧನೆಗಳು ಕೂಡ ಗಣನೆಗೆ ಬರುತ್ತಿರಲಿಲ್ಲ.

ಅಲ್ಲದೆ ಹೀಗೆ ನಿವೃತ್ತಿಯಾದ ಮಹಿಳಾ ಅಧಿಕಾರಿಗಳಿಗೆ ಪಿಂಚಣಿ ಮತ್ತು ಇತರ ಆರ್ಥಿಕ ಯೋಜನೆಗಳು ಕೂಡ ಸಿಗುತ್ತಿರಲಿಲ್ಲ. ಆದರೆ ಪುರುಷರು ಕೇವಲ ಐದು ವರ್ಷ ಸೇವೆ ಸಲ್ಲಿಸಿದರೂ ಸಹ ಪೂರ್ಣ ಪ್ರಮಾಣದ ಪಿಂಚಣಿ ಮತ್ತಿತರ ಸೌಲಭ್ಯ ಪಡೆಯುತ್ತಿದ್ದರು.
ಸಂಬಂಧಿತ ಮಾಹಿತಿ ಹುಡುಕಿ