ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೀಸಲಾತಿ ಬಿಡಿ, ರಾಜಕೀಯವೇ ಮುಸ್ಲಿಂ ಮಹಿಳೆಗೆ ನಿಷಿದ್ಧ! (Muslim women | discard purdah | politics | Women's bill)
Bookmark and Share Feedback Print
 
ಮಹಿಳಾ ಮೀಸಲಾತಿ ವಿಧೇಯಕವನ್ನು ಕೇವಲ ಕೆಲವು ರಾಜಕೀಯ ಪಕ್ಷಗಳು ಮಾತ್ರ ವಿರೋಧಿಸುತ್ತಿರುವುದಲ್ಲ, ಕೆಲವು ಮುಸ್ಲಿಂ ಧರ್ಮಗುರುಗಳು ಹಾಗೂ ವಿದ್ವಾಂಸರು ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ ಜಾತ್ಯತೀತ ರಾಷ್ಟ್ರದಲ್ಲಿ ಮುಸ್ಲಿಂ ಮಹಿಳೆ ಚುನಾವಣೆಗೆ ಸ್ಪರ್ಧಿಸುವುದು ಇಸ್ಲಾಮ್‌ಗೆ ವಿರುದ್ಧ ಮತ್ತು ಮಹಿಳಾ ಮೀಸಲಾತಿ ಪ್ರಜಾಪ್ರಭುತ್ವ ಸಮಾಜದ ಮೂಲಭೂತ ತತ್ವಗಳಿಗೆ ವಿರುದ್ಧ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯದ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರು ಬುರ್ಖಾ ತೆಗೆದಿಡುವುದು ಅಥವಾ ಸಾರ್ವಜನಿಕ ಭಾಷಣಗಳನ್ನು ಮಾಡಲು ಇಸ್ಲಾಂ ಅನುಮತಿ ನೀಡುವುದಿಲ್ಲ. ಜಾತ್ಯತೀತ ರಾಷ್ಟ್ರವೊಂದರಲ್ಲಿ ಮುಸ್ಲಿಂ ಮಹಿಳೆ ಚುನಾವಣೆಗೆ ಸ್ಪರ್ಧಿಸುವುದು ಇಸ್ಲಾಮ್‌ಗೆ ವಿರುದ್ಧವಾಗಿದೆ ಎಂದು 'ನದ್ವಾ-ತುಲ್ ಉಲೇಮಾ'ದ ಮುಖ್ಯಸ್ಥ ಮೌಲಾನಾ ಸೈದುರ್ ರೆಹಮಾನ್ ಅಜ್ಮಿ ನಾದ್ವಿ ತಿಳಿಸಿದ್ದಾರೆ.

ಉತ್ತರ ಭಾರತದ ಅತ್ಯುನ್ನತ ಇಸ್ಲಾಮಿಕ್ ಸಂಘಟನೆ ಎಂದು ಹೇಳಲಾಗುತ್ತಿರುವ ಮತ್ತು ಮೃದು ಮಾತುಗಳಿಗೆ ಹೆಸರಾಗಿರುವ ಮುಸ್ಲಿಂ ಪಂಡಿತರು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ, 'ಮುಸ್ಲಿಂ ಮಹಿಳೆಯರು ಮುಸ್ಲಿಂ ರಾಷ್ಟ್ರಗಳಲ್ಲಿ ಮಾತ್ರ ಚುನಾವಣೆಗೆ ಸ್ಪರ್ಧಿಸಬಹುದು. ಯಾಕೆಂದರೆ ಅಲ್ಲಿ ಬುರ್ಖಾ ಧರಿಸುವುದು ಕಡ್ಡಾಯವಾಗಿರುತ್ತದೆ, ಆದರೆ ಜಾತ್ಯತೀತ ಸಮಾಜದಲ್ಲಿ ಇದಕ್ಕೆ ಅವಕಾಶವಿಲ್ಲ' ಎಂದು ತಿಳಿಸಿದರು.

ಸಂಸತ್ತಿನಲ್ಲಿ ಮುಸ್ಲಿಂ ಮಹಿಳೆಯರು ಸ್ಪರ್ಧಿಸಲು ಇಸ್ಲಾಂ ಅವಕಾಶ ನೀಡುವುದಿಲ್ಲ. ಯಾಕೆಂದರೆ ಈ ಸಂದರ್ಭದಲ್ಲಿ ಅವರು ಇತರ ಪುರುಷರೊಂದಿಗೆ ಹತ್ತಿರದಿಂದ ಮಾತುಕತೆ, ಸಂಪರ್ಕದಲ್ಲಿರಬೇಕಾಗುತ್ತದೆ. ಸಂಸತ್ ಕಲಾಪಗಳಲ್ಲಿ 'ಪರ್ದಾ' ಧರಿಸಲು ಅವಕಾಶ ಇಲ್ಲದೇ ಇರುವುದರಿಂದ ಇಸ್ಲಾಮ್ ಪ್ರಕಾರ ಚುನಾವಣೆಗೆ ಸ್ಪರ್ಧಿಸುವುದು ನಿಷಿದ್ಧ ಎಂದು ಅವರು ವಿವರಣೆ ನೀಡಿದ್ದಾರೆ.

ಆದರೆ ಇದರಿಂದ ಮುಸ್ಲಿಂ ಮಹಿಳೆಯಲ್ಲಿ ಅನಕ್ಷರತೆ ಹೆಚ್ಚುತ್ತದೆ ಎಂಬ ವಾದವನ್ನು ಅವರು ತಳ್ಳಿ ಹಾಕುತ್ತಾರೆ. 'ಇಸ್ಲಾಂ ಯಾವತ್ತೂ ಮಹಿಳೆಯ ಶಿಕ್ಷಣಕ್ಕೆ ವಿರುದ್ಧವಾಗಿಲ್ಲ. ಶಿಕ್ಷಣ ಪಡೆಯುವ ಆಯ್ಕೆಯನ್ನು ಅವರಿಗೆ ಬಿಡಲಾಗಿದೆ. ಆದರೆ ಅವರು ಬುರ್ಖಾ ಧರಿಸುವುದು ಕಡ್ಡಾಯ ಎಂದು ಇಸ್ಲಾಂ ಸ್ಪಷ್ಟವಾಗಿ ಹೇಳಿದ್ದು, ಅವರನ್ನು ತಮ್ಮ ಮನೆಯ ವಾತಾವರಣಕ್ಕೆ ನಿರ್ಬಂಧಗೊಳಿಸಲಾಗಿದೆ. ಅವರು ಮನೆಗೆಲಸಗಳಿಗಷ್ಟೇ ಸೀಮಿತ' ಎಂದಿದ್ದಾರೆ.

ಲಕ್ನೋದ ಇಸ್ಲಾಂ ಫಿರಂಗಿ ಮಹಲ್ ಮುಖ್ಯಸ್ಥರಾಗಿರುವ ನಯೀಮ್ ಇಮಾಮ್ ಮೌಲಾನಾ ಖಾಲಿದ್ ರಷೀದ್ ಪ್ರಕಾರ ಮುಸ್ಲಿಂ ಮಹಿಳೆಯರು ರಾಜಕೀಯದಲ್ಲಿರುವುದು ತಪ್ಪಲ್ಲ. ಅವರು ಚುನಾವಣೆಗಳಿಗೂ ಸ್ಪರ್ಧಿಸಬಹುದು.

ಮುಸ್ಲಿಂ ಮಹಿಳೆ ಸಕ್ರಿಯ ರಾಜಕಾರಣ ಮತ್ತು ಚುನಾವಣೆಗೆ ಸ್ಪರ್ಧಿಸುವುದರಲ್ಲಿ ತಪ್ಪೇನಿಲ್ಲ. ಈಗಾಗಲೇ ಹಲವು ಮುಸ್ಲಿಂ ಮಹಿಳೆಯರು ರಾಜಕೀಯದಲ್ಲಿದ್ದಾರೆ. ಆದರೆ ಮಹಿಳಾ ಮೀಸಲಾತಿ ವಿಧೇಯಕನ್ನು ನಾನು ವಿರೋಧಿಸುತ್ತೇನೆ. ಇದು ಪ್ರಜಾಪ್ರಭುತ್ವ ಸಮಾಜದ ಮೂಲಭೂತ ನಿಯಮಾವಳಿಗಳಿಗೆ ವಿರುದ್ಧವಾಗಿದೆ. ಅಲ್ಲದೆ ಮೀಸಲಾತಿಯೊಳಗಿನ ಮೀಸಲಾತಿ ಭಾರತೀಯ ಸಂವಿಧಾನದ ಅರ್ಥಕ್ಕೆ ವಿರುದ್ಧವಾದುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ