ಬಚ್ಚನ್ ಕಳ್ಳ, ಉಗ್ರ ಅಲ್ಲ; ಕಾಂಗ್ರೆಸಿಗೇಕೆ ಅಲರ್ಜಿ? :ಠಾಕ್ರೆ
ಮುಂಬೈ, ಶನಿವಾರ, 27 ಮಾರ್ಚ್ 2010( 11:33 IST )
ಗುಜರಾತ್ ಬ್ರ್ಯಾಂಡ್ ರಾಯಭಾರಿ ಆಗಿದ್ದಾರೆ ಎಂಬ ಕಾರಣಕ್ಕೆ ಮುಂಬೈಯ ಬಾಂದ್ರಾ-ವರ್ಲಿ ಸೀ ಲಿಂಕ್‌ನ ಎರಡನೇ ಹಂತದ ಉದ್ಘಾಟನೆಗೆ ಮೇರು ನಟ ಅಮಿತಾಭ್ ಬಚ್ಚನ್ ಅವರನ್ನು ಆಹ್ವಾನಿಸಿದ್ದಕ್ಕೆ ಕಾಂಗ್ರೆಸ್ ಕೆರಳಿ ಕೆಂಡವಾಗಿರುವಂತೆಯೇ, ಈ ಕಾರ್ಯಕ್ರಮಕ್ಕೆ ಹಾಜರಾಗಿರುವ ಅಮಿತಾಭ್, ಯಾವುದೇ ಅಪರಾಧ ಎಸಗಿಲ್ಲ, ಅವರೇನೂ ದರೋಡೆಕೋರ, ಕಳ್ಳ ಅಥವಾ ಉಗ್ರಗಾಮಿ ಅಲ್ಲ ಎಂದು ಶಿವಸೇನಾ ವರಿಷ್ಠ ಬಾಳ ಠಾಕ್ರೆ ಹೇಳಿದ್ದಾರೆ.
ಶಿವಸೇನೆ ಮುಖವಾಣಿ 'ಸಾಮ್ನಾ' ಸಂಪಾದಕೀಯದಲ್ಲಿ ಠಾಕ್ರೆ ಅವರು, ಬಾಲಿವುಡ್ ಮೇರು ನಟನನ್ನು 'ಅಸ್ಪೃಶ್ಯ' ಎಂದು ಪರಿಗಣಿಸಿರುವ ಕಾಂಗ್ರೆಸ್ ವಿರುದ್ಧ ಕಿಡಿ ಕಾರುತ್ತಾ, ಬಚ್ಚನ್ ಒಬ್ಬ ಕಳ್ಳ, ಡಕಾಯಿತ ಅಥವಾ ಭಯೋತ್ಪಾದಕ ಅಲ್ಲ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಅವರು ವೇದಿಕೆ ಹಂಚಿಕೊಂಡಿರುವುದರಿಂದ ಕಾರ್ಯಕ್ರಮದ ಪ್ರತಿಷ್ಠೆ ಹೆಚ್ಚಾಗಿದೆಯೇ ಹೊರತು, ಇದಕ್ಕೆ ಪಶ್ಚಾತ್ತಾಪ ಪಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
ಕಾಂಗ್ರೆಸಿಗೆ ಪಾಕಿಸ್ತಾನೀಯರ ಪರವಾಗಿ ಧ್ವನಿಯೆತ್ತಿದ ಶಾರೂಖ್ ಖಾನ್ ಸಾಕು, ಆದರೆ ಅಮಿತಾಭ್ ಎಂದರೆ ಅಲರ್ಜಿ ಎಂದೂ ಠಾಕ್ರೆ ಗುಡುಗಿದರು.
ಗುಜರಾತ್ ರಾಯಭಾರಿಯಾಗಿರುವ ಅಮಿತಾಭ್ ಅವರು ಮುಖ್ಯಮಂತ್ರಿ ಅಶೋಕ್ ಚವಾಣ್ ಜೊತೆ ಈ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿರುವುದರ ಕುರಿತು ಮತ್ತು ಅವರಿಗೆ ಆಹ್ವಾನ ನೀಡಿರುವುದರ ಕುರಿತು ಕಾಂಗ್ರೆಸ್‌ನೊಳಗೆ ತೀವ್ರ ಅಸಮಾಧಾನವೆದ್ದಿತ್ತು. ಇದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ವಿವರಣೆಯನ್ನೂ ಕೋರಿತ್ತು.
ಆ ಬಳಿಕ ಸುದ್ದಿಗಾರರೊಂದಿಗೆ ತಮ್ಮ ನೋವು ಹಂಚಿಕೊಂಡಿದ್ದ ಅಮಿತಾಭ್, ತಾನು ಬಿಜೆಪಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ರಾಯಭಾರಿ ಅಲ್ಲ, ಗುಜರಾತ್ ರಾಜ್ಯದ ಅಭಿವೃದ್ಧಿಯ ರಾಯಭಾರಿಯಾಗಿದ್ದೇನೆ. ಯಾವುದೇ ರಾಜಕೀಯ ಪಕ್ಷದ ಜೊತೆ ತಾನು ಗುರುತಿಸಿಕೊಂಡಿಲ್ಲ ಎಂದು ಹೇಳಿದ್ದರು. ತಾನು ಗುಜರಾತ್ ಪ್ರವಾಸೋದ್ಯಮದ ಪ್ರಚಾರ ಮಾಡುತ್ತಿದ್ದೇನೆಯೇ ಹೊರತು ಮೋದಿಯನ್ನಲ್ಲ ಎಂದಿದ್ದರು ಬಚ್ಚನ್.
ಮೋದಿ ಆಳ್ವಿಕೆಯ ಗುಜರಾತ್‌ಗೆ ಅವರು ಬ್ರ್ಯಾಂಡ್ ರಾಯಭಾರಿ ಎಂಬ ಕಾರಣಕ್ಕೆ ಬಚ್ಚನ್ ಅವರನ್ನು ವಿರೋಧಿಸಲಾಗುತ್ತಿದೆ. ಅದೇ ರೀತಿ, ಗುಜರಾತಿನಲ್ಲಿ ಭರ್ಜರಿಯಾಗಿ ಹೂಡಿಕೆ ಮಾಡಿ ಅಲ್ಲಿನ ಅಭಿವೃದ್ಧಿಗೂ ಕಾರಣವಾಗಿರುವ ಅಂಬಾನಿಗಳು ಮತ್ತು ಟಾಟಾಗಳು ಮುಂಬೈಯಲ್ಲೇ ವಾಸಿಸುತ್ತಿದ್ದಾರೆ. ನೀವೇಕೆ ಗುಜರಾತಿಗೆ ಹಣ ಹೂಡುತ್ತೀರಿ ಎಂದು ಕಾಂಗ್ರೆಸ್ ಅವರನ್ನು ಕೇಳುತ್ತದೆಯೇ ಎಂದೂ ಠಾಕ್ರೆ ಪ್ರಶ್ನಿಸಿದ್ದಾರೆ. ಬಚ್ಚನ್ ಅವರು ಈ ದೇಶಕ್ಕೆ ಸೇರಿದವರಾಗಿದ್ದು, ಹಾಗೆಯೇ ಮುಂದುವರಿಯುತ್ತಾರೆ ಎಂದೂ ಠಾಕ್ರೆ ನುಡಿದರು.