ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಾಲಿಬಾನ್ ಜತೆ ಭಾರತ ಮಾತುಕತೆ ವರದಿ; ಬಿಜೆಪಿ ಆಕ್ರೋಶ (Taliban | India | BJP | Afghanistan)
Bookmark and Share Feedback Print
 
ಜಾಗತಿಕ ಭಯೋತ್ಪಾದಕ ಸಂಘಟನೆ ತಾಲಿಬಾನ್ ಜತೆ ಭಾರತ ಮಾತುಕತೆಗೆ ಮುಂದಾಗಿದೆ ಎಂಬ ವರದಿಗಳನ್ನು 'ಆಘಾತಕಾರಿ' ಎಂದು ಬಣ್ಣಿಸಿರುವ ಬಿಜೆಪಿ, ಈ ಕುರಿತು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ವಿವರಣೆ ನೀಡಬೇಕೆಂದು ಆಗ್ರಹಿಸಿದೆ.

ತಾಲಿಬಾನ್ ಮತ್ತು ಗುಲ್ಬುದ್ದೀನ್ ಹಿಕ್ಮೆತ್ಯಾರ್ ಮುಂದಾಳುತ್ವದ 'ಹಿಜ್ಬ್ ಇ ಇಸ್ಲಾಮಿ' ಜತೆ ಭಾರತ ಮಾತುಕತೆ ನಡೆಸಲು ಆಸಕ್ತಿ ತೋರಿಸುತ್ತಿದ್ದು, ಅಫಘಾನಿಸ್ತಾನ ಕುರಿತ ನೀತಿಯನ್ನು ಸರಕಾರ ಬದಲಾಯಿಸುತ್ತಿರುವುದನ್ನು ನಂಬಲರ್ಹ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆಗಳು ವರದಿ ಮಾಡಿವೆ ಎಂದು ಬಿಜೆಪಿ ತಿಳಿಸಿದೆ.

ಈ ಕುರಿತು ಸರಕಾರ ಸ್ಪಷ್ಟನೆ ನೀಡಬೇಕಾಗಿದೆ. ಒಂದು ವೇಳೆ ವರದಿಗಳು ನಿಜವೇ ಆಗಿದ್ದರೆ, ಭಾರತದ ಅಫಘಾನಿಸ್ತಾನ ನೀತಿಗಳು ಸ್ಥಾನಪಲ್ಲಟಗೊಳ್ಳುತ್ತಿರುವುದರ ಕುರಿತು ಜನತೆಗೆ ವಿವರಣೆ ನೀಡಲೇಬೇಕು ಎಂದು ಬಿಜೆಪಿ ವಕ್ತಾರ ತರುಣ್ ವಿಜಯ್ ಪತ್ರಕರ್ತರಿಗೆ ತಿಳಿಸಿದ್ದಾರೆ.

ಕೇವಲ ಪತ್ರಿಕಾ ವರದಿಗಳನ್ನಷ್ಟೇ ಆಧರಿಸಿ ಬಿಜೆಪಿ ಪ್ರತಿಕ್ರಿಯೆ ನೀಡುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯ್, 'ಪಕ್ಷವು ವಿದೇಶಾಂಗ ಸಚಿವಾಲಯದ ಮೂಲಗಳಿಂದ ಇದನ್ನು ಖಚಿತಪಡಿಸಿಕೊಂಡಿದೆ. ತಾಲಿಬಾನ್ ಮತ್ತು ಹಿಕ್ಮೆತ್ಯಾರ್ ಜತೆ ಮಾತುಕತೆಗೆ ವೇದಿಕೆ ಸಿದ್ಧಪಡಿಸಲು ಯತ್ನಗಳು ನಡೆಯುತ್ತಿರುವುದು ನಮಗೆ ತಿಳಿದು ಬಂದಿದೆ' ಎಂದಿದ್ದಾರೆ.

ಅಮೆರಿಕಾ ಒತ್ತಡದ ಮೇರೆಗೆ ಪಾಕಿಸ್ತಾನದ ಜತೆ ನಡೆದ ಅರ್ಥಹೀನ ಮಾತುಕತೆ ಮತ್ತು ಉಗ್ರ ಡೇವಿಡ್ ಹೆಡ್ಲಿ ಪ್ರಕರಣದ ವಿಫಲತೆಯ ಬಳಿಕ ಭಾರತ ವಿರೋಧಿ ಶಕ್ತಿಗಳ ಜತೆ ರಾಜಿ ಮಾತುಕತೆಗೆ ಯುಪಿಎ ಸರಕಾರ ಮುಂದಾಗಿರುವುದು ಆಘಾತಕಾರಿ ಎಂದರು.

ಬಿಜೆಪಿಯದ್ದು ಬಾಲಿಶ ವರ್ತನೆ: ಕಾಂಗ್ರೆಸ್
ದೇಶದ ಭದ್ರತೆಯ ವಿಚಾರದಲ್ಲಿ ಬಿಜೆಪಿಯು ಬಾಲಿಶ ವರ್ತನೆ ತೋರಿಸುತ್ತಿದೆ ಎಂದು ಕಾಂಗ್ರೆಸ್ ಪ್ರತಿದಾಳಿ ನಡೆಸಿದೆ.

ಭಾರತವು ತಾಲಿಬಾನ್ ಜತೆ ಮಾತುಕತೆಗೆ ಮುಂದಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, 'ದೇಶದ ಭದ್ರತೆಗೆ ಸಂಬಂಧಪಟ್ಟ ಸೂಕ್ಷ್ಮ ವಿಚಾರಗಳ ಕುರಿತು ಬಿಜೆಪಿಯು ಬಾಲಿಶವಾಗಿ ಮಾತನಾಡುತ್ತಿದೆ. ಅವರಿಗೆ ರಾಷ್ಟ್ರೀಯ ಹಿತಾಸಕ್ತಿ ಇದೆಯೇ ಅಥವಾ ಇಲ್ಲವೇ ಎಂಬ ಶಂಕೆ ನನಗೆ ಕಾಡುತ್ತಿದೆ' ಎಂದು ವಕ್ತಾರ ಮನೀಷ್ ತಿವಾರಿ ಹೇಳಿದ್ದಾರೆ.

ತಾಲಿಬಾನ್ ಜತೆ ಮಾತುಕತೆಯ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲದ ಹೊರತಾಗಿ ಯಾವುದೇ ಪ್ರತಿಕ್ರಿಯೆ ನೀಡುವುದು ಸಮರ್ಥನೀಯವಲ್ಲ ಎಂದರು.

ಬಿಜೆಪಿಗೆ ಎಲ್ಲವನ್ನೂ ರಾಜಕೀಕರಣಗೊಳಿಸುವುದು ಒಂದು ಹವ್ಯಾಸ. ಅವರು ಕೊಂಚ ಕಾಯಬೇಕಾಗಿತ್ತು ಎಂದು ತಿವಾರಿ ಸಲಹೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ