ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಂದಿನಿಂದ ಪ್ರತಿ ಮಗುವಿಗೂ ಉಚಿತ ಶಿಕ್ಷಣ ಮೂಲಭೂತ ಹಕ್ಕು (right to education | fundamental right | compulsory education | India)
Bookmark and Share Feedback Print
 
ಮಾಹಿತಿ ಹಕ್ಕು ಕಾಯ್ದೆ ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳ ಬಳಿಕ ಯುಪಿಎ ಸರಕಾರದ ಪ್ರಮುಖ ಎಂದು ಹೇಳಲಾಗುತ್ತಿರುವ ಮೂರನೇ ಕಾಯ್ದೆ ಇಂದಿನಿಂದ ಜಾರಿಗೆ ಬರುತ್ತಿದ್ದು, ಪ್ರತಿ ಮಗು ಕೂಡ ಶಿಕ್ಷಣವನ್ನು ಪಡೆಯುವುದು ಕಡ್ಡಾಯವಾಗಲಿದೆ. ಅದನ್ನು ಮೂಲಭೂತ ಹಕ್ಕು ಎಂದು ನೂತನ ಕಾಯ್ದೆ ಹೇಳುತ್ತದೆ.

ಎಂಟು ವರ್ಷಗಳ ಹಿಂದೆ ಅಂದರೆ 2002ರಲ್ಲಿ ಸಂವಿಧಾನಕ್ಕೆ 86ನೇ ತಿದ್ದುಪಡಿ ತರುವ ಮೂಲಕ ಶಿಕ್ಷಣವನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿತ್ತು. ಅಂತಹ ಐತಿಹಾಸಿಕ ಕಾಯ್ದೆಯೊಂದು ಇಂದಿನಿಂದ ಜಾರಿಗೆ ಬರುತ್ತಿದ್ದು, ಆರರಿಂದ 14 ವರ್ಷದ ನಡುವಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ದೊರಕಲಿದೆ.
WD

ಪ್ರಸಕ್ತ ಅಂದಾಜಿನ ಪ್ರಕಾರ ಸುಮಾರು ಒಂದು ಕೋಟಿ ಮಕ್ಕಳು (92 ಲಕ್ಷ ಮಕ್ಕಳು) ಶಿಕ್ಷಣ ವ್ಯಾಪ್ತಿಯಿಂದ ಹೊರಗುಳಿದಿದ್ದು, ಅವರು ಕಡ್ಡಾಯವಾಗಿ ಕಾಯ್ದೆಯಂತೆ ಶಿಕ್ಷಣ ಪಡೆಯಬೇಕಾಗುತ್ತದೆ. ದೇಶದಲ್ಲಿ ಆರರಿಂದ 14ರ ನಡುವಿನ ಹರೆಯದ 22 ಕೋಟಿ ಮಕ್ಕಳಿದ್ದಾರೆ. ಅವರಲ್ಲಿ ಶೇ.4.6ರಷ್ಟು ಮಕ್ಕಳು ಮಾತ್ರ ಶಾಲೆಯಿಂದ ಹೊರಗಿದ್ದಾರೆ. ಇವರನ್ನು ಶಾಲೆಗೆ ಕರೆತರುವ ಹೊಣೆಗಾರಿಕೆ ರಾಜ್ಯ ಸರಕಾರದ್ದಾಗಿರುತ್ತದೆ.

ಈ ಕಾಯ್ದೆಯಂತೆ ರಾಜ್ಯ ಸರಕಾರ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ಮಕ್ಕಳ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಿಸುವ ಹೊಣೆಗಾರಿಕೆ ಹೊತ್ತುಕೊಳ್ಳಬೇಕಾಗುತ್ತದೆ. ಅಲ್ಲದೆ ಖಾಸಗಿ ಶಿಕ್ಷಣ ಸಂಸ್ಥೆಗಳು ದುರ್ಬಲ ವರ್ಗದ ಮಕ್ಕಳಿಗೆಂದು ಶೇ.25ರಷ್ಟು ಸೀಟುಗಳನ್ನು ಮೀಸಲಾಗಿಡುವುದು ಕಡ್ಡಾಯವಾಗುತ್ತದೆ.

ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದಿರುವುದರಿಂದ ಇನ್ನು ಮುಂದೆ ಎಲ್ಲಾ ಮಕ್ಕಳು ಕೂಡ ಶಿಕ್ಷಣ ಪಡೆಯುವುದು ಕಡ್ಡಾಯವಾಗುತ್ತದೆ. ಅಂದರೆ ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನು ಸರಕಾರ ಉಚಿತವಾಗಿ ನೀಡಲಿದೆ. ಇದರ ಸಂಪೂರ್ಣ ಹೊಣೆಗಾರಿಕೆ ಸ್ಥಳೀಯ ಮತ್ತು ರಾಜ್ಯ ಸರಕಾರದ ವ್ಯಾಪ್ತಿಗೆ ಬರುವುದರಿಂದ ಜವಾಬ್ದಾರಿಗಳು ಹೆಚ್ಚಲಿವೆ. ಇದೇ ನಿಟ್ಟಿನಲ್ಲಿ ಸುಮಾರು ಏಳು ಲಕ್ಷ ಶಿಕ್ಷಕರನ್ನು ಮುಂದಿನ ದಿನಗಳಲ್ಲಿ ನೇಮಕ ಮಾಡಿಕೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ತಿಳಿಸಿದ್ದಾರೆ.

ಈ ಕಾಯ್ದೆಯನ್ನು ಜಾರಿ ಮಾಡಲು ಹಣಕಾಸು ಆಯೋಗವು ಈಗಾಗಲೇ 25,000 ಕೋಟಿ ರೂಪಾಯಿಗಳನ್ನು ರಾಜ್ಯ ಸರಕಾರಗಳಿಗೆ ಒದಗಿಸಿದೆ. ಸರಕಾರದ ಅಂದಾಜಿನ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ ಸುಮಾರು 1.71 ಲಕ್ಷ ಕೋಟಿ ರೂಪಾಯಿಗಳ ಅಗತ್ಯ ಈ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲು ಅಗತ್ಯವಿದೆ. ಸರಕಾರ ಇದಕ್ಕೆ ಬದ್ಧವಾಗಿದೆ ಎಂದು ಸಿಬಲ್ ಸ್ಪಷ್ಟಪಡಿಸಿದ್ದಾರೆ.

ನೂತನ ಕಾಯ್ದೆಯನ್ನು ಪ್ರಚಾರ ಮಾಡುವ ನಿಟ್ಟಿನಿಂದ ಸರಕಾರವು ಕಿರು ಚಿತ್ರಗಳನ್ನು ಟಿವಿ ಚಾನೆಲ್‌ಗಳಲ್ಲಿ ಪ್ರಸಾರ ಮಾಡುವ ಮೂಲಕ ಜಾಗೃತಿ ಸೃಷ್ಟಿಸಲು ಯತ್ನಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ