ಕೊನೆಗೂ ಶೋಯಿಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ನಡುವಿನ ಮದುವೆ ಸದ್ದಿಲ್ಲದೆ ದಿಢೀರ್ ನಡೆದು ಹೋಗಿದೆ. ಎಲ್ಲಾ ಗಂಡಾಂತರಗಳಿಂದ ಹೊರ ಬಂದಿರುವ ಶೋಯಿಬ್, ಸಾನಿಯಾರನ್ನು ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಪತ್ನಿಯಾಗಿ ಸ್ವೀಕರಿಸಿದ್ದಾರೆ.
ಏಪ್ರಿಲ್ 15ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ ಎಂದು ಹೇಳಲಾಗಿದ್ದ ಈ ಮದುವೆ ಇಂದೇ ನಡೆಯುತ್ತದೆ ಎಂದು ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಬಹಿರಂಗವಾಗಿತ್ತು. ಮದುವೆ ಕಾರ್ಯಕ್ರಮವನ್ನು ಸಾಕಷ್ಟು ಗೌಪ್ಯವಾಗಿಡಲು ಯತ್ನಿಸಲಾಗಿತ್ತು.
ಹೈದರಾಬಾದ್‌ನ ತಾಜ್ ಕೃಷ್ಣಾ ಪಂಚತಾರಾ ಹೊಟೇಲ್ ಪಕ್ಕದ 'ಡೆಕ್ಕನ್' ಹೊಟೇಲಿನಲ್ಲಿ ಮಧ್ಯಾಹ್ನದ ಹೊತ್ತಿಗೆ ನಡೆದ ನಿಖಾ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. ಆಯ್ದ ಗಣ್ಯರು ಮತ್ತು ಆಪ್ತರಿಗೆ ಮಾತ್ರ ಪ್ರವೇಶವಿತ್ತು.
ತನ್ನ ತಾಯಿಯ ನಿಖಾ ಸಂದರ್ಭದಲ್ಲಿ ತಾಯಿ ಬಳಸಿದ್ದ ಕೆಂಪು ಸೀರೆಯನ್ನೇ ಸಾನಿಯಾ ನಿಖಾಕ್ಕೂ ಬಳಸಲಾಯಿತು. ಅದೇ ಕೆಂಪು ಸೀರೆಯನ್ನುಟ್ಟಿದ್ದ ಸಾನಿಯಾ ಮನೆಯಿಂದ ಕಾರಿನಲ್ಲಿ ಹೊರಟು ಹೊಟೇಲ್ ಸೇರಿಕೊಂಡರು. ಶೋಯಿಬ್ ಕಪ್ಪು ಶೇರ್ವಾನಿ ತೊಟ್ಟಿದ್ದರು.
ಏಪ್ರಿಲ್ 13ರಂದು ಮೆಹೆಂದಿ, ಏಪ್ರಿಲ್ 14ರಂದು ಸಂಗೀತ್ ಮತ್ತು ಏಪ್ರಿಲ್ 15ರಂದು ಆರತಕ್ಷತೆ ನಡೆಯಲಿದೆ ಭಾರತೀಯ ಟೆನಿಸ್ ಆಟಗಾರ್ತಿಯ ವಕ್ತಾರೆ ರುಚಾ ನಾಯಕ್ ತಿಳಿಸಿದ್ದಾರೆ.
ಸಾನಿಯಾ ಮನೆ ಬಿಟ್ಟಿದ್ದ ಶೋಯಿಬ್... ಮದುವೆಯಾಗುವ ಮೊದಲು ವರ ಮತ್ತು ವಧು ಒಂದೇ ಮನೆಯಲ್ಲಿ ವಾಸಿಸುವುದು ಇಸ್ಲಾಂ ಪ್ರಕಾರ ನಿಷಿದ್ಧ ಎಂದು ಮುಸ್ಲಿಂ ಧಾರ್ಮಿಕ ಪಂಡಿತರು ಫತ್ವಾ ಹೊರಡಿಸಿದ್ದ ಬೆನ್ನಿಗೆ ಕಳೆದ ಹಲವು ದಿನಗಳಿಂದ ಸಾನಿಯಾ ಮಿರ್ಜಾ ಮನೆಯಲ್ಲಿ ಬೀಡು ಬಿಟ್ಟಿದ್ದ ಶೋಯಿಬ್ ಮಲಿಕ್ ಇದ್ದಕ್ಕಿದ್ದಂತೆ ಮೊನ್ನೆ ನಾಪತ್ತೆಯಾಗಿದ್ದರು.
ಈಗಾಗಲೇ ಸಾಕಷ್ಟು ವಿವಾದಗಳಲ್ಲಿ ಸಿಲುಕಿ ನಲುಗುತ್ತಿರುವ ಶೋಯಿಬ್, ಮತ್ತೆ ಸಂಕಷ್ಟಕ್ಕೆ ಸಿಲುಕುವುದು ಬೇಡ ಎಂಬ ನಿಟ್ಟಿನಿಂದ ಸಾನಿಯಾರ ಜುಬಿಲಿ ಹಿಲ್ಸ್‌ನ ಮನೆಯಿಂದ ಬೇರೆಡೆಗೆ ಸ್ಥಳಾಂತರಗೊಂಡಿದ್ದರು. ಆದರೆ ಅವರು ಪ್ರಸಕ್ತ ಎಲ್ಲಿದ್ದಾರೆ ಎಂಬ ಮಾಹಿತಿಗಳನ್ನು ಕುಟುಂಬ ಗೌಪ್ಯವಾಗಿಟ್ಟಿತ್ತು.
ಶೋಯಿಬ್ ಕುಟುಂಬದ ಆರು ಮಂದಿ ಸದಸ್ಯರು ಈಗಾಗಲೇ ಭಾರತಕ್ಕೆ ಬಂದಿದ್ದಾರೆ. ಅವರೆಲ್ಲರೂ ಸಾನಿಯಾ ಮನೆಯಲ್ಲೇ ಇದ್ದಾರೆ. ಇದಕ್ಕೆ ಧರ್ಮಗುರುಗಳು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದರೆ ಕಳೆದ ಏಳೆಂಟು ದಿನಗಳಿಂದ ಸಾನಿಯಾ ಮನೆಯಲ್ಲೇ ತಂಗಿದ್ದ ಶೋಯಿಬ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನು ಸ್ವತಃ ಸಾನಿಯಾ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಮದುವೆಗಿಂತ ಮೊದಲು ವಧು ಮತ್ತು ವರ ಒಂದೇ ಮನೆಯಲ್ಲಿ ಬದುಕುವುದು ಅನಿಸ್ಲಾಮಿಕ ಮತ್ತು ಅಸ್ವೀಕಾರಾರ್ಹ ಎಂದು ಸುನ್ನಿ ಉಲೇಮಾ ಮಂಡಳಿಯು ಫತ್ವಾ ಹೊರಡಿಸಿತ್ತು ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಅಖಿಲ ಭಾರತ ಸುನ್ನಿ ಉಲೇಮಾ ಮಂಡಳಿಯನ್ನು ಸಂಪರ್ಕಿಸಿದಾಗ, ಈ ವಿಚಾರದಿಂದ ತಾನು ದೂರ ಉಳಿಯುವುದಾಗಿ ಹೇಳಿದೆ. ಪ್ರಸಕ್ತ ಫತ್ವಾ ಹೊರಡಿಸುವ ಸಂಘಟನೆಯೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ. ಇಂತಹ ಫತ್ವಾಗಳನ್ನು ಹೊರಡಿಸುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ವಿಚಾರವು ಹಲವು ಅಪಾರ್ಥಗಳಿಗೆ ಎಡೆ ಮಾಡಿಕೊಟ್ಟಿರುವುದರಿಂದ ನಾವು ಒಂದು ವಿಚಾರವನ್ನು ಸ್ಪಷ್ಟಪಡಿಸುತ್ತಿದ್ದೇವೆ. ಕಳೆದ ಕೆಲವು ದಿನಗಳಿಂದ ವರ (ಶೋಯಿಬ್) ಮಿರ್ಜಾ ನಿವಾಸದಲ್ಲಿ ಉಳಿದುಕೊಂಡಿಲ್ಲ. ಅವರ ತಾಯಿ ಮತ್ತು ಕುಟುಂಬದವರು ಅತಿಥಿಗಳಾಗಿ ಮಿರ್ಜಾ ಮನೆಯಲ್ಲಿದ್ದಾರೆ ಎಂದು ಸಾನಿಯಾ ವಕ್ತಾರರು ವಿವರಣೆ ನೀಡಿದ್ದಾರೆ.
ತನ್ನ ಮೊದಲ ಪತ್ನಿ ಆಯೇಶಾ ಸಿದ್ಧಿಕಿಗೆ ವಿಚ್ಛೇದನ ನೀಡಿರುವ ಶೋಯಿಬ್ ಪ್ರಸಕ್ತ ಹೈದರಾಬಾದ್‌ನ ಸಾನಿಯಾ ಸಂಬಂಧಿಕರ ಬಳಿ ಉಳಿದುಕೊಂಡಿದ್ದಾರೆ ಎಂದು ಹೇಳಲಾಗಿತ್ತು.
ವಾರದೊಳಗೆ ಪಾಸ್‌ಪೋರ್ಟ್ ವಾಪಸ್.. ಕಾನೂನು ವಿಧಿವಿಧಾನಗಳನ್ನು ಪೂರೈಸಿದ ಬಳಿಕ ವಾರದೊಳಗೆ ಶೋಯಿಬ್ ಪಾಸ್‌ಪೋರ್ಟನ್ನು ವಾಪಸ್ ಮಾಡುತ್ತೇವೆ ಎಂದು ಹೈದರಾಬಾದ್ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಆಯೇಶಾ ಸಿದ್ಧಿಕಿ ಜತೆಗಿನ ವಿವಾದ ಸಂಬಂಧ ವಿಚಾರಣೆ ನಡೆಸಿದ್ದ ಪೊಲೀಸರು ಶೋಯಿಬ್ ಪಾಸ್‌ಪೋರ್ಟನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಬಳಿಕ ಶೋಯಿಬ್ ವಿಚ್ಛೇದನ ನೀಡಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ವಾಪಸ್ ಪಡೆದುಕೊಳ್ಳಲಾಗಿತ್ತು. ಆದರೆ ಪಾಸ್‌ಪೋರ್ಟ್ ಇನ್ನಷ್ಟೇ ಶೋಯಿಬ್ ಕೈ ಸೇರಬೇಕಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ ಪ್ರಕರಣವನ್ನು ಮುಕ್ತಾಯಗೊಳಿಸಬೇಕಿದ್ದರೆ, ಆಯೇಶಾ ಜತೆ ಶೋಯಿಬ್ ಸ್ಥಳೀಯ ನ್ಯಾಯಾಲಯಕ್ಕೆ ಸ್ವತಃ ಹಾಜರಾಗಬೇಕು.