ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಲೆಯೇರಿಕೆ ವಿರುದ್ಧದ ರ‌್ಯಾಲಿಯಲ್ಲಿ ಕುಸಿದ ಬಿದ್ದ ನಿತಿನ್ ಗಡ್ಕರಿ (Nitin Gadkari | BJP | anti-price rise rally | Manmohan Singh)
Bookmark and Share Feedback Print
 
ಅಗತ್ಯ ವಸ್ತುಗಳ ಬೆಲೆಯೇರಿಕೆ ನಿಯಂತ್ರಣಕ್ಕೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ವಿಫಲವಾಗಿದೆ ಎಂದು ಆರೋಪಿಸುತ್ತಾ ಲಕ್ಷಾಂತರ ಕಾರ್ಯಕರ್ತರೊಂದಿಗೆ ರಾಜಧಾನಿಯ ಬೀದಿಗಳಲ್ಲಿ ಸರಕಾರದ ವಿರುದ್ಧ ಬೃಹತ್ ರ‌್ಯಾಲಿ ನಡೆಸುತ್ತಿದ್ದ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಕೆಲ ಕ್ಷಣಗಳ ಕಾಲ ಆತಂಕ ಸೃಷ್ಟಿಸಿದರು.

ಎಲ್.ಕೆ. ಅಡ್ವಾಣಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ಮುರಳಿ ಮನೋಹರ ಜೋಷಿ, ಅನಂತ ಕುಮಾರ್ ಮುಂತಾದ ನಾಯಕರ ಜತೆ ರಾಮಲೀಲಾ ಮೈದಾನದಲ್ಲಿನ ಪ್ರತಿಭಟನಾ ಸಭೆಯನ್ನು ನಡೆಸಿದ ಬಳಿಕ ಸಂಸತ್ ಚಲೋ ಬೃಹತ್ ರ‌್ಯಾಲಿಯನ್ನು ಸಂಘಟಿಸಿದ ಗಡ್ಕರಿ, ತೀವ್ರ ಬಿಸಿಲಿನ ಕಾರಣದಿಂದ ಸುಸ್ತಾಗಿ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಬದಿಗೆ ಕರೆದುಕೊಂಡು ಹೋಗಿ ಉಪಚರಿಸಲಾಯಿತು. ಬಳಿಕ ಗಡ್ಕರಿ ಚೇತರಿಸಿಕೊಂಡರು.

ಇದಕ್ಕೂ ಮೊದಲು ರಾಜಧಾನಿಯ ಪ್ರಮುಖ ಬೀದಿಗಳಲ್ಲಿ ಬಿಜೆಪಿ ನಡೆಸಿದ ಪ್ರತಿಭಟನಾ ರ‌್ಯಾಲಿಯಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಮಂದಿ ಕಾರ್ಯಕರ್ತರು, ರಾಜ್ಯ ಘಟಕಗಳ ನಾಯಕರು, ಸಂಸದರು, ಸಚಿವರುಗಳು, ಶಾಸಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ ಗಡ್ಕರಿ ಸೇರಿದಂತೆ ಹಲವು ನಾಯಕರು ಕಿಡಿ ಕಾರಿದ್ದಾರೆ.

ಕಾಂಗ್ರೆಸ್ ಯಾವಾಗ ಅಧಿಕಾರಕ್ಕೆ ಬಂದರೂ, ಆಗ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತವೆ ಎಂದ ಗಡ್ಕರಿ, ಪ್ರಧಾನಿ ಮನಮೋಹನ್ ಸಿಂಗ್ ಯುಪಿಎ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರು ಪ್ರಮುಖ ವಸ್ತುಗಳ ಬೆಲೆಯನ್ನು 100 ದಿನಗಳೊಳಗೆ ನಿಯಂತ್ರಣಕ್ಕೆ ತರುತ್ತೇವೆ ಎಂದು ನೀಡಿದ್ದ ಭರವಸೆಯನ್ನು ನೆನಪಿಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಸತತ ಎರಡನೇ ಬಾರಿ ಒಂದು ವರ್ಷವನ್ನು ಪೂರ್ಣಗೊಳಿಸುತ್ತಿದ್ದರೂ ಬಡ ಜನತೆ ಬೆಲೆಯೇರಿಕೆಯ ಬಿಸಿಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದೂ ಗಡ್ಕರಿ ಜರೆದಿದ್ದಾರೆ.

ಸರಕಾರ ಅನುಸರಿಸುತ್ತಿರುವ ಆರ್ಥಿಕ ನೀತಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ ಅಧ್ಯಕ್ಷ, ತಾನು ಬೆಲೆ ಏರಿಕೆ ಬಗ್ಗೆ ಪ್ರಧಾನಿಯವರಲ್ಲಿ 14 ಪ್ರಶ್ನೆಗಳನ್ನು ಮುಂದಿಟ್ಟಿದ್ದೆ. ಆದರೆ ಒಂದೇ ಒಂದು ಉತ್ತರವನ್ನು ನೀಡಲು ಆಡಳಿತ ಪಕ್ಷಕ್ಕೆ ಸಾಧ್ಯವಾಗಿಲ್ಲ. ಈ ಪ್ರಶ್ನೆಗಳಿಗೆ ಉತ್ತರಿಸಲು ಕಾಂಗ್ರೆಸ್‌ನ ಯಾರೊಬ್ಬರಿಗೂ ಸಾಧ್ಯವಾಗುತ್ತಿಲ್ಲವೇ ಎಂದು ನೆರೆದಿದ್ದ ಲಕ್ಷಾಂತರ ಕಾರ್ಯಕರ್ತರೆದುರು ಪ್ರಶ್ನಿಸಿದರು.

ಅಲ್ಲದೆ ಉಗ್ರಾಣಗಳಲ್ಲಿ ಆಹಾರ ವಸ್ತುಗಳ ದಾಸ್ತಾನು ಕೊಳೆಯುತ್ತಿದೆ. ಸರಕಾರವು ಉದ್ದೇಶಪೂರ್ವಕವಾಗಿ ಈ ದಾಸ್ತಾನನ್ನು ನಿರ್ಲಕ್ಷ್ಯ ಮಾಡುತ್ತಿದೆ. ನಂತರ ಇದನ್ನು ಕಡಿಮೆ ದರಕ್ಕೆ ಮದ್ಯ ತಯಾರಕರಿಗೆ ಮಾರಾಟ ಮಾಡಲಾಗುತ್ತಿದೆ ಎಂದೂ ಗಂಭೀರ ಆರೋಪ ಮಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ