ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಟ್ಕಳದ 'ಶಾರುಖ್'ನ ಸಹೋದರ ಈ ಸಮದ್! (Batkal | Yasin | Riyaz | Adbul Samad | Pune Blast | Terror | Karnataka)
Bookmark and Share Feedback Print
 
ಕನ್ನಡದ ಕರಾವಳಿ ತೀರ ಭಟ್ಕಳದಲ್ಲಿ ದೇಶದ್ರೋಹಿ ಚಟುವಟಿಕೆಗಳು ಒಳಗಿಂದೊಳಗೇ ನಡೆಯುತ್ತಲೇ ಇವೆ ಎಂಬ ಕುರಿತು ನ್ಯಾ. ಜಗನ್ನಾಥ ಶೆಟ್ಟಿ ಆಯೋಗವು ಸಲ್ಲಿಸಿರುವ ವರದಿಯು ಬೇರಾವುದೇ ವರದಿಗಳಂತೆಯೇ ಧೂಳು ತಿನ್ನುತ್ತಾ ಇರುವಂತೆಯೇ, ಅಬ್ದುಲ್ ಸಮದ್ ಜರಾರ್ ಸೋಮವಾರ ಬಂಧನಕ್ಕೀಡಾಗಿರುವುದು, ಭಟ್ಕಳದ ಮೇಲೆ ಮತ್ತೊಮ್ಮೆ ಬೆಳಕು ಚೆಲ್ಲಿ, ಎಚ್ಚರಿಕೆಯ ಕರೆಗಂಟೆ ಬಾರಿಸಿದೆ.

ಬಂಧಿತ ಅಬ್ದುಲ್ ಸಮದ್ ಬೇರಾರೂ ಅಲ್ಲ, 'ಶಾ ರುಖ್' ಎಂದೇ ಅಡ್ಡಹೆಸರಿರುವ, ಹಲವಾರು ದೇಶದ್ರೋಹಿ ಕೃತ್ಯಗಳ ರೂವಾರಿ, ಯಾಸಿನ್ ಭಟ್ಕಳ ಅಲಿಯಾಸ್ ಅಹಮದ್ ಮಹಮದ್ ಜರಾರ್ ಸಿದ್ದಿ ಬಾವಾನ ಕಿರಿಯ ಸಹೋದರ. ದುಬೈಯಿಂದ ಏರ್ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಸೋಮವಾರ ಮಂಗಳೂರಿನ ಬಜಪೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣವೇ ಸಮದ್‌ನನ್ನು ಭದ್ರತಾ ಪಡೆಗಳು ವಶಕ್ಕೆ ತೆಗೆದುಕೊಂಡಾಗ, ತಾವೊಂದು ಬಲುದೊಡ್ಡ ಮಿಕವನ್ನು ಹಿಡಿದಿದ್ದೇವೆ ಎಂಬುದು ಬಹುಶಃ ಈ ಅಧಿಕಾರಿಗಳಿಗೇ ಗೊತ್ತಿರಲಿಕ್ಕಿಲ್ಲ.

ಭಟ್ಕಳದ ಜರಾರ್ ಮಂಜಿಲ್ ಎಂಬುದು ಈತನ ಮನೆ. ಸಮದ್‌ನನ್ನು ಬಂಧಿಸಿ ಮುಂಬಯಿಗೆ ಕರೆದೊಯ್ಯಲಾಗುತ್ತಿದೆ ಎಂಬ ಸಂದೇಶವು ಸೋಮವಾರ ಬೆಳಿಗ್ಗೆ ಆತನ ತಾಯಿ ರೆಹನಾರಿಗೆ ತಲುಪಿತ್ತು. ಈತನ ತಂದೆ ಮಹಮದ್ ಜರಾರ್ ಸಿದ್ದಿ ಬಾವಾ. ಕಳೆದ 30 ವರ್ಷಗಳಿಂದ ಭಟ್ಕಳ ಮತ್ತು ದುಬೈ ನಡುವೆ ಇವರ ವ್ಯವಹಾರ ನಡೆಯುತ್ತಿದೆ.

ಈಕೆಯ ಹಿರಿಯ ಪುತ್ರ, ಬಾಂಬ್ ತಯಾರಿ ನಿಪುಣ, ಅಹಮದ್ ಮಹಮದ್ ಜರಾರ್ (ಯಾಸಿನ್ ಭಟ್ಕಳ) ಕಳೆದ ನಾಲ್ಕು ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಪುಣೆಯ ಜರ್ಮನ್ ಬೇಕರಿ ಸ್ಫೋಟ ಪ್ರಕರಣದಲ್ಲಿಯೂ ಪ್ರಧಾನ ಪಾತ್ರ ವಹಿಸಿದ್ದ ಮತ್ತು ಆತ ಪುಣೆಯ ಈ ಬೇಕರಿಗೆ ಭೇಟಿ ನೀಡಿದ್ದುದು ಕೂಡ ಅಲ್ಲಿನ ಸಿಸಿಟಿವಿ ಕ್ಯಾಮರದಲ್ಲಿ ದಾಖಲಾಗಿತ್ತು. 2005ರಿಂದ 2008ರ ಅವಧಿಯಲ್ಲಿ ದೇಶದ ವಿವಿಧೆಡೆ ನಡೆದಿದ್ದ ಸ್ಫೋಟ ಪ್ರಕರಣಗಳಲ್ಲಿ ಈತ ತಯಾರಿಸಿದ ಬಾಂಬ್‌ಗಳೇ ಕೆಲಸ ಮಾಡಿದ್ದವು.

2008ರ ಸೆಪ್ಟೆಂಬರ್ 13ರಂದು ನಡೆದ ದೆಹಲಿ ಸ್ಫೋಟ ಪ್ರಕರಣದ ಬಳಿಕ 'ಶಾ ರುಖ್' ಎಂಬ ಅಡ್ಡ ಹೆಸರಿನಿಂದ ಕರೆಯಲ್ಪಡುತ್ತಿದ್ದ ಯಾಸಿನ್, ಇಂಡಿಯನ್ ಮುಜಾಹಿದೀನ್ (ಐಎಂ) ಎಂಬ ದೇಶದ್ರೋಹಿ ಸಂಘಟನೆಯ ಸ್ಥಾಪಕ, ಈಗ ಕರಾಚಿಯಲ್ಲಿ ಆಶ್ರಯ ಪಡೆದಿದ್ದಾನೆ ಎಂದು ನಂಬಲಾಗಿರುವ ರಿಯಾಜ್ ಭಟ್ಕಳನ ಜೊತೆ ಬಾಂಬ್ ತಯಾರಿ ಪ್ರಕ್ರಿಯೆಯಲ್ಲಿ ಭಾಗೀದಾರ ಎನ್ನಲಾಗುತ್ತಿದೆ.

ಸಮದ್ ಚಟುವಟಿಕೆ ಮೇಲೆ ಹಲವು ಸಮಯದಿಂದ ಎಟಿಎಸ್ (ಭಯೋತ್ಪಾದನಾ ನಿಗ್ರಹ ದಳ) ನಿಗಾ ವಹಿಸಿತ್ತು. ಆತ ದುಬೈಯಿಂದ ಭಟ್ಕಳಕ್ಕೆ ಬಂದುಹೋಗುತ್ತಿದ್ದ. ಇದೀಗ ಈತ ಯಾಸಿನ್‌ನ ಸಹೋದರನಾಗಿರುವುದರಿಂದ ದೇಶದ್ರೋಹಿ ಸಂಘಟನೆ ಐಎಂ ಕುರಿತು ಮತ್ತಷ್ಟು ಮಹತ್ವದ ಮಾಹಿತಿಗಳು ವಿಚಾರಣೆ ವೇಳೆ ಹೊರಬರಲಿವೆ ಎಂಬುದು ತನಿಖಾಧಿಕಾರಿಗಳ ನಿರೀಕ್ಷೆ.

ಇತ್ತ, ಭಟ್ಕಳದಲ್ಲಿ ಈತನ ತಾಯಿ ರೆಹಾನಾ ತೀರಾ ಆಕ್ರೋಶಿತರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತನ್ನ ಮಗ ಮೂರು ತಿಂಗಳ ಸಂದರ್ಶನ ವೀಸಾದಲ್ಲಿ ದುಬೈಗೆ ಹೋಗಿದ್ದ, ಆತ ಭಟ್ಕಳದಲ್ಲೇ ಇದ್ದ, ಕಂಪ್ಯೂಟರ್ ಕೋರ್ಸ್ ಮಾಡುತ್ತಿದ್ದ. ದುಬೈಗೆ ಅವನ ತಂದೆ ಕರೆದ ಕಾರಣ ಉದ್ಯೋಗ ಅರಸಿ ಅಲ್ಲಿನ ಅಲ್ ರಾಸ್ ಪ್ರದೇಶಕ್ಕೆ ಹೋಗಿದ್ದವ ಈಗ ಮರಳಿ ಬರುತ್ತಿದ್ದ ಎಂದಿದ್ದಾರೆ ಆಕೆ. ಅಲ್ಲಿ ಅವರಿಗೆ ಜವುಳಿ ಮಳಿಗೆ ಇದೆ. ಯಾಸಿನ್ ಕೂಡ ಇದೇ ಮಳಿಗೆಯಲ್ಲಿ ನಾಲ್ಕು ವರ್ಷದ ಹಿಂದೆ ಕೆಲಸ ಮಾಡುತ್ತಿದ್ದನಂತೆ.
ಸಂಬಂಧಿತ ಮಾಹಿತಿ ಹುಡುಕಿ