ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಪಿಐಎಂ ಬರುವವರೆಗೆ ಯುಪಿಎ ತ್ಯಜಿಸಲ್ಲ: ಮಮತಾ ಬ್ಯಾನರ್ಜಿ (Mamata Banerjee | Trinamool Congress | UPA | Congress)
Bookmark and Share Feedback Print
 
ಯುಪಿಎ ಅಧಿಕಾರಾವಧಿ ಮುಕ್ತಾಯಗೊಳ್ಳುವವರೆಗೆ ಸರಕಾರದ ಜತೆಗಿನ ಮೈತ್ರಿಯನ್ನು ಮುಂದುವರಿಸುವುದಾಗಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದು, ಮುಂಬರುವ ಪಶ್ಚಿಮ ಬಂಗಾಲ ವಿಧಾನಸಭಾ ಚುನಾವಣೆಯಲ್ಲಿನ ಮೈತ್ರಿಯ ಬಗ್ಗೆ 'ಯಾವುದೂ ಮುಗಿದಿಲ್ಲ' ಎನ್ನುವ ಮೂಲಕ ಕಾಂಗ್ರೆಸ್‌ಗೆ ಮತ್ತೊಂದು ಆಹ್ವಾನ ನೀಡಿದ್ದಾರೆ.

ಇಂದು ಏನು ನಡೆಯುತ್ತಿದೆ ಎಂಬುದರ ಬಗ್ಗೆ ಮಾತ್ರ ನಾನು ಮಾತನಾಡುತ್ತೇನೆ. ಭವಿಷ್ಯದ ದಿನಗಳ ಬಗ್ಗೆ ನಾನು ಮಾತನಾಡಲು ಹೋಗಲಾರೆ. ಎಲ್ಲರೂ ನಮ್ಮನ್ನು ಬಿಟ್ಟು ಹೋದ (ಕಾಂಗ್ರೆಸ್) ಸಂದರ್ಭದಲ್ಲಿ ನಾವು ಜನರ ಬಳಿ ಹೋದೆವು, ಅವರು ನಮ್ಮನ್ನು ಬೆಂಬಲಿಸಿದರು. ಮುಂದಿನ ದಿನಗಳಲ್ಲಿ ಅವಕಾಶ ಬಂದರೆ, ಆಗ ಮಾತನಾಡೋಣ. ನಾವು ಯಾವುದನ್ನೂ ಮುಗಿಸಿ ಕುಳಿತಿಲ್ಲ ಎಂದು ಪಶ್ಚಿಮ ಬಂಗಾಲದ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗಿನ ಮೈತ್ರಿಯಿಲ್ಲದೆ ಜಯಭೇರಿ ಬಾರಿಸಿದ ನಂತರ ಸುದ್ದಿ ಸಂಸ್ಥೆಯೊಂದಿಗೆ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ಯುಪಿಎ ಎರಡನೇ ಅವಧಿಯ ಸರಕಾರ ಅಸ್ತಿತ್ವಕ್ಕೆ ಬಂದಾಗ ನಾವು ಮೈತ್ರಿಕೂಟದ ಭಾಗವಾಗಿ ಐದು ವರ್ಷಗಳ ಕಾಲ ಉಳಿದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದೆವು. ನಮ್ಮನ್ನು ಹೊರಗೆ ತಳ್ಳುವವರೆಗೆ ನಾವು ಇಲ್ಲೇ ಇರುತ್ತೇವೆ ಎಂದು ಬ್ಯಾನರ್ಜಿ ವ್ಯಂಗ್ಯಮಿಶ್ರಿತ ದನಿಯಲ್ಲಿ ಹೇಳಿದರು.

ನಾವು ನಂಬಿಕೆಗೆ ಅರ್ಹರಲ್ಲ ಎಂದು ಯಾರು ಹೇಳುತ್ತಿದ್ದಾರೋ, ಅವರು ಇತರರಿಗಿಂತ ನಮ್ಮನ್ನು ಹೆಚ್ಚು ನಂಬಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು 55ರ ಹರೆಯದ ಕೇಂದ್ರ ರೈಲ್ವೇ ಸಚಿವೆ ಸಲಹೆ ಮಾಡಿದ್ದಾರೆ. ನಮ್ಮ ಮತ್ತು ಇತರರ ಬದ್ಧತೆ ಕುರಿತು ಇಲ್ಲಿ ಹೋಲಿಕೆ ಮಾಡುವುದು ಸಾಧ್ಯವಿಲ್ಲ. ನಮ್ಮ ಬಯಕೆ ಸ್ನೇಹ ಮತ್ತು ಗೌರವ ಎಂದರು.

ಯುಪಿಎ ಮೊದಲ ಸರಕಾರದಲ್ಲಿ ಪರಮಾಣು ಒಪ್ಪಂದ ವಿಚಾರದವರೆಗೆ ಪ್ರಮುಖ ಮೈತ್ರಿ ಪಕ್ಷವಾಗಿ ಜತೆಗಿದ್ದ ಎಡಪಕ್ಷಗಳ ಕುರಿತು ಉಲ್ಲೇಖಿಸಿರುವ ಬ್ಯಾನರ್ಜಿ, ಸಿಪಿಐಎಂ ಮೈತ್ರಿಕೂಟದಲ್ಲಿ ಕಾಣಿಸಿಕೊಳ್ಳದಿದ್ದರೆ ತೃಣಮೂಲ ಯುಪಿಎ ಎರಡನೇ ಅವಧಿಯಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಮುಂದುವರಿಯುತ್ತದೆ ಎಂದರು.

ಒಂದು ವೇಳೆ ಸಿಪಿಐಎಂ ಜತೆ ಯುಪಿಎ ಸಂಬಂಧ ಹೊಂದಲು ಬಯಸಿದರೆ, ನಾವು ಅಲ್ಲಿರಲಾರೆವು. ಡಿಎಂಕೆ ಮತ್ತು ಎಐಎಡಿಎಂಕೆ ರೀತಿಯಲ್ಲಿ ಸಿಪಿಐಎಂ ಮತ್ತು ತೃಣಮೂಲ ಒಂದೇ ಬಣದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಯುಪಿಎಯಲ್ಲಿ 19 ಸಂಸದರನ್ನು ಹೊಂದುವ ಮೂಲಕ ಮೈತ್ರಿಕೂಟದ ಎರಡನೇ ಅತಿ ದೊಡ್ಡ ಪಕ್ಷದ ನಾಯಕಿ ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ