ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಈ ಊರಿನ ಮನೆಗಳಲ್ಲಿ ಬಾಗಿಲೇ ಇಲ್ಲ, ಎಲ್ಲವೂ ದೈವ ಲೀಲೆ! (goddess watching | Singipur | Uttar Pradesh | goddess Kali)
Bookmark and Share Feedback Print
 
ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬ ಗಾದೆ ಈಗ ಹೇಳಲಿದು ಕಾಲವಲ್ಲ. ಏಕೆಂದರೆ ನೂರಾರು ವರ್ಷಗಳ ಹಿಂದೆಯೇ ಬಾಗಿಲು ಹಾಕುವ ಸಂಪ್ರದಾಯವನ್ನು ತೊರೆದಿರುವ ಈ ಊರಲ್ಲಿ ಇನ್ನೂ ಯಾರೂ ಕೊಳ್ಳೆ ಹೊಡೆದಿಲ್ಲ. ಇದೆಲ್ಲದರ ಹಿಂದಿರುವ ಕಾರಣ ಕಾಳಿ ಮಾತೆ.

ಇದು ಈ ಊರಿನ ಹೊರಗಿನವರಿಗೆ ಅಚ್ಚರಿ ತರುವ ವಿಚಾರವಾಗಿರಬಹುದು. ಆದರೆ ನಮಗಿದು ರೂಢಿಯಾಗಿದೆ. ನಮಗೆ ನೆನಪಿರುವಂತೆ ಈ ಊರಿನಲ್ಲಿ ಯಾರೊಬ್ಬರ ಮನೆಗಳಲ್ಲೂ ಬಾಗಿಲಿರುವುದು ತಿಳಿದಿಲ್ಲ. ಬಾಗಿಲು ಹಾಕದೆ ನಾವು ಬಾಳ್ವೆ ನಡೆಸುತ್ತಿದ್ದೇವೆ ಎಂದು 75ರ ಹರೆಯದ ರೈತ ಹಾಗೂ ಇಲ್ಲಿನ ನಿವಾಸಿಯಾಗಿರುವ ಸಂಜೀವನ್ ಪಾಲ್ ಹೇಳುತ್ತಾರೆ.

ಈ ಸಿಂಗಿಪುರ್ ಗ್ರಾಮ ಇರುವುದು ಉತ್ತರ ಪ್ರದೇಶದ ಅಲಹಾಬಾದ್ ಜಿಲ್ಲೆಯಲ್ಲಿ. ರಾಜಧಾನಿ ಲಕ್ನೋದಿಂದ 200 ಕಿಲೋ ಮೀಟರ್ ದೂರದಲ್ಲಿದೆ ಇದು. ಹುಲ್ಲು ಹಾಸಿನ, ಮಣ್ಣಿನ ಗೋಡೆಯ ಮತ್ತು ಸಿಮೆಂಟ್‌ನಿಂದ ನಿರ್ಮಿಸಲಾಗಿರುವ ಮನೆಗಳು ಈ ಗ್ರಾಮದಲ್ಲಿವೆ. ಆದರೆ ಯಾರೊಬ್ಬರೂ ತಮ್ಮ ಮನೆಗಳಿಗೆ ಬಾಗಿಲು ನಿರ್ಮಿಸಲು ಮುಂದಾಗಿಲ್ಲ. ಸರಿಸುಮಾರು 140 ಮನೆಗಳು ಈ ಗ್ರಾಮದಲ್ಲಿವೆ.

ತಮ್ಮ ಮನೆಗಳನ್ನು ಇಲ್ಲಿನ ಕಾಳಿ ದೇವಿ ರಕ್ಷಿಸುತ್ತಾಳೆ, ಎಲ್ಲಾದರೂ ಕಳ್ಳತನ ಅಥವಾ ದರೋಡೆಗಳನ್ನು ಮಾಡಿದರೆ ಅವರನ್ನೂ ದೇವಿ ಶಿಕ್ಷಿಸುತ್ತಾಳೆ ಎಂಬ ನಂಬಿಕೆ ಸ್ಥಳೀಯರದ್ದು.

ನಾವು ದೇವಿಯಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದೇವೆ. ಹಾಗಾಗಿ ಯಾವುದೇ ಚಿಂತೆಯಿಲ್ಲದೆ ನಾವು ನಮ್ಮ ಮನೆಗಳಲ್ಲಿ ಆಕೆಯ ಆಶೀರ್ವಾದದಿಂದ ಬದುಕುತಿದ್ದೇವೆ ಎಂದು ಈ ಗ್ರಾಮದಲ್ಲಿ ಡೈರಿ ನಡೆಸುತ್ತಿರುವ 42ರ ಹರೆಯದ ರಾಜನ್‌ರಾಜ್ ಹೇಳುತ್ತಾರೆ.

ಸರಿಸುಮಾರು ಮಧ್ಯಮ ವರ್ಗದವರೇ ತುಂಬಿರುವ ಸಿಂಗಿಪುರ್ ಗ್ರಾಮದಲ್ಲಿ ಸುಮಾರು 500 ಮಂದಿ ವಾಸಿಸುತ್ತಿದ್ದಾರೆ. ಇಲ್ಲಿರುವ ಬಹುತೇಕ ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರು. ಡೈರಿ ನಡೆಸುವುದು, ಕೂಲಿ ಕೆಲಸಕ್ಕೆ ಹೋಗುವುದು ಅಥವಾ ಕಟ್ಟಡ ನಿರ್ಮಾಣ ಕಾಮಗಾರಿ ಕೆಲಸಕ್ಕೆ ಹೋಗುವವರೇ ಹೆಚ್ಚು.

ಇಲ್ಲಿನ ದೇವಸ್ಥಾನಕ್ಕೂ ಬಾಗಿಲಿಲ್ಲ...
ಮನೆಗಳಿಗೆ ಬಾಗಿಲು ಇಲ್ಲದಿರುವಂತೆ ಕಾಳಿ ದೇವಿಯ ದೇವಳಕ್ಕೂ ಬಾಗಿಲಿಲ್ಲ. ಕನಿಷ್ಠ ಗೇಟೂ ಇಲ್ಲ. ಮತ್ತೊಂದು ಅಚ್ಚರಿಯ ವಿಚಾರವೆಂದರೆ ಈ ದೇವಸ್ಥಾನಕ್ಕೆ ಪೂಜಾರಿಯೇ ಇಲ್ಲದಿರುವುದು.

ನಮ್ಮ ಮನೆಗಳಿಂದ ಕಳ್ಳತನ ಮಾಡಿದವರು ದೇವಿಯ ಕೋಪಕ್ಕೆ ತುತ್ತಾಗುತ್ತಾರೆ. ಹಾಗೆ ಕಳ್ಳತನ, ದರೋಡೆ ಮಾಡಲು ಯತ್ನಿಸಿದವರಿಗೆ ಈ ಹಿಂದೆ ಆಗಿರುವ ಗತಿಯನ್ನು ನಮ್ಮ ಹಿರಿಯರು ನೋಡಿದ್ದಾರೆ. ಬಹುತೇಕ ಮಂದಿ ದೈಹಿಕ ಬಾಧೆಗಳಿಗೊಳಗಾಗಿ ಸಾವನ್ನಪ್ಪಿದ್ದ ಉದಾಹರಣೆಗಳು ಈ ಹಿಂದೆ ಇಲ್ಲಿ ನಡೆದಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ