ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಫ್ಜಲ್ ಕ್ಷಮಾದಾನ ಅರ್ಜಿ ಪೆಂಡಿಂಗ್ ಇಡಿ ಅಂದದ್ಯಾರು ಗೊತ್ತಾ? (Shivraj Patil | Afzal Guru | Sheila Dikshit | India)
Bookmark and Share Feedback Print
 
ಸಂಸತ್ ಮೇಲೆ ದಾಳಿ ಮಾಡಿ ನ್ಯಾಯಾಲಯದಿಂದ ಮರಣ ದಂಡನೆ ಶಿಕ್ಷೆಯ ತೀರ್ಪನ್ನು ಪಡೆದುಕೊಂಡು ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ ನಂತರ ಆತನ ಅರ್ಜಿಯನ್ನು ನಿಧಾನವಾಗಿ ವಿಲೇವಾರಿ ಮಾಡಿ ಎಂದು ದೆಹಲಿ ಸರಕಾರಕ್ಕೆ ಅಂದಿನ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಹೇಳಿದ್ದರು ಎಂದು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮಗುಮ್ಮಾಗಿ ಒಪ್ಪಿಕೊಂಡಿದ್ದಾರೆ.

ಕೇಂದ್ರ ಗೃಹ ಸಚಿವಾಲಯವು ಅಫ್ಜಲ್ ಗುರು ಕ್ಷಮಾದಾನ ಅರ್ಜಿಯ ಬಗ್ಗೆ ದೆಹಲಿ ಸರಕಾರಕ್ಕೆ ನಿರಂತರವಾಗಿ ನೆನಪಿಸುತ್ತಿದ್ದರೂ ಅರ್ಜಿಯನ್ನು ವಿಳಂಬಿಸುವಂತೆ ಪಾಟೀಲ್ ರಾಜ್ಯಕ್ಕೆ ಸೂಚನೆ ನೀಡಿದ್ದರೇ ಎಂದು ಸುದ್ದಿ ವಾಹಿನಿಯೊಂದು ದೀಕ್ಷಿತ್ ಅವರಲ್ಲಿ ಪ್ರಶ್ನಿಸಿದಾಗ, 'ನೀವು ಯೋಚನೆ ಮಾಡುತ್ತಿರುವುದು ಸರಿಯಿರಬಹುದು' ಎಂದಿದ್ದಾರೆ.

ಆದರೆ ತಕ್ಷಣವೇ ಸುಧಾರಿಸಿಕೊಂಡ ದೀಕ್ಷಿತ್ ಮುಂದಿನ ಪ್ರಶ್ನೆಗಳಿಗೆ ಎಚ್ಚರಿಕೆಯಿಂದ ಉತ್ತರಿಸಲಾರಂಭಿಸಿದರು. ಅಫ್ಜಲ್ ಗುರು ಅರ್ಜಿಯ ಕುರಿತು ರಾಜಕೀಯ ಒತ್ತಡಗಳಿದ್ದುವೇ ಎಂದಾಗ ನೇರವಾಗಿ ಉತ್ತರಿಸಲು ನಿರಾಕರಿಸಿದ ಅವರು, 'ರಾಜಕೀಯ ಒತ್ತಡಗಳಿದ್ದವು ಮತ್ತು ಇರಲಿಲ್ಲ. ಈ ಬಗ್ಗೆ ಇದಕ್ಕಿಂತ ಹೆಚ್ಚು ಏನನ್ನೂ ಹೇಳಲಾರೆ' ಎಂದರು.

ಅಫ್ಜಲ್ ಗುರು ಮರಣ ದಂಡನೆ ಕುರಿತು ಆತನ ಪತ್ನಿ ರಾಷ್ಟ್ರಪತಿಯವರಿಗೆ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಕೇಂದ್ರ ಗೃಹ ಸಚಿವಾಲಯವು ಅಭಿಪ್ರಾಯ ತಿಳಿಸುವಂತೆ ದೆಹಲಿ ಸರಕಾರಕ್ಕೆ ನಾಲ್ಕು ವರ್ಷಗಳ ಹಿಂದೆಯೇ ಕಳುಹಿಸಿತ್ತು. ಈ ಸಂದರ್ಭದಲ್ಲಿ ಗೃಹ ಸಚಿವಾಲಯವು ದೆಹಲಿ ಸರಕಾರಕ್ಕೆ 16 ಬಾರಿ ಫೈಲಿನ ಕುರಿತು ನೆನಪಿಸಿತ್ತು. ಸಚಿವಾಲಯಕ್ಕೆ ಕಳುಹಿಸಿದ್ದ ಇತ್ತೀಚಿನ ಅಂದರೆ ಮೇ ತಿಂಗಳ ಪ್ರತಿಕ್ರಿಯೆಯಲ್ಲಿ ರಾಜ್ಯ ಸರಕಾರವು 'ಸಕ್ರಿಯ ಪರಿಗಣನೆಯಲ್ಲಿದೆ' ಎಂದು ಉತ್ತರಿಸಿತ್ತು.

ಮೇ 19ರಂದು ಅಫ್ಜಲ್ ಮರಣ ದಂಡನೆಯನ್ನು ಬೆಂಬಲಿಸಿ ದೆಹಲಿ ಸರಕಾರವು ತನ್ನ ಹೇಳಿಕೆಯನ್ನು ರವಾನಿಸಿತ್ತು. ಆದರೆ ಆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಜಾಗರೂಕತೆ ವಹಿಸುವಂತೆ ಸಲಹೆ ನೀಡಿತ್ತು. ಇದನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ತೇಜೆಂದ್ರ ಖನ್ನಾ ಶುಕ್ರವಾರ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಭಯೋತ್ಪಾದಕರನ್ನು ಪೋಷಿಸುತ್ತಿದೆ ಎಂದು ಬಿಜೆಪಿ ಆಗಾಗ ಆರೋಪಿಸುತ್ತಾ ಬಂದಿದ್ದು, ದೀಕ್ಷಿತ್ ಹೇಳಿಕೆಯು ರಾಜಕೀಯ ವಲಯದಲ್ಲಿ ತೀವ್ರ ವಿವಾದವನ್ನೆಬ್ಬಿಸಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ