ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೆಲೆ ಕಳೆದುಕೊಳ್ಳುತ್ತಿವೆ ಹಿಂದುತ್ವ ಫ್ಯಾಕ್ಟರಿ ಆರೆಸ್ಸೆಸ್ ಶಾಖೆಗಳು! (RSS | Rashtriya Swayamsevak Sangh | Dr K B Hedgewar | Sangh Parivar)
Bookmark and Share Feedback Print
 
ಹಿಂದುತ್ವ ಮತ್ತು ರಾಷ್ಟ್ರೀಯತೆಯ ಫ್ಯಾಕ್ಟರಿ ಎಂದೇ ಕರೆಸಿಕೊಳ್ಳುತ್ತಿದ್ದ, ಒಂದು ಕಾಲದಲ್ಲಿ ವ್ಯಾಪಕವಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳು ದೇಶದಾದ್ಯಂತ ಕಳೆದ ಐದಾರು ವರ್ಷಗಳಲ್ಲಿ 10,000ಕ್ಕೂ ಹೆಚ್ಚು ಕುಸಿತ ಕಂಡಿದ್ದು, ಶಿಸ್ತಿನ ಸಿಪಾಯಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ನಡೆಯುವ ಸಂಘ ಪರಿವಾರದ ಮೂಲ, ರಾಜಕೀಯದಿಂದ ದೂರವಿದ್ದ ಆರೆಸ್ಸೆಸ್ ಇದೀಗ ನೆಲೆ ಕಳೆದುಕೊಳ್ಳುತ್ತಿರುವುದನ್ನು ಮುಖಂಡರು, ಶಿಕ್ಷಕ್ ವರ್ಗ ಒಪ್ಪಿಕೊಳ್ಳುತ್ತಾರಾದರೂ, ಇದಕ್ಕೆ ನಿರ್ದಿಷ್ಟ ಕಾರಣಗಳನ್ನು ಹುಡುಕಲು ಸಾಧ್ಯವಾಗುತ್ತಿಲ್ಲ.

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಅಧಿಕಾರದಲ್ಲಿದ್ದ ಸುದೀರ್ಘ ಆರು ವರ್ಷಗಳ ಅವಧಿಯಲ್ಲಿ ಆರೆಸ್ಸೆಸ್ ಶಾಖೆಗಳು ದೇಶದಲ್ಲಿ ಭಾರೀ ಪ್ರಗತಿಯನ್ನು ಕಂಡಿದ್ದವು. ಈ ಸಂದರ್ಭದಲ್ಲಿ ದೇಶದ ಒಟ್ಟು ಶಾಖೆಗಳ ಸಂಖ್ಯೆ 51,000ಕ್ಕೆ ಏರಿಕೆಯಾಗಿತ್ತು.

ಬಿಜೆಪಿ ಅಧಿಕಾರ ಕಳೆದುಕೊಂಡ ನಂತರ ಶಾಖೆಗಳ ಸಂಖ್ಯೆ ಸುಮಾರು 10,000ಕ್ಕೂ ಹೆಚ್ಚು ಕುಸಿತ ಕಂಡಿದೆ. ಆರೆಸ್ಸೆಸ್ ದೆಹಲಿ ಮಾಧ್ಯಮ ವಿಭಾಗದ ಸದಸ್ಯ ವಾಗೀಶ್ ಇಸಾರ್ ಅವರ ಪ್ರಕಾರ, ಪ್ರಸಕ್ತ ದೇಶದಲ್ಲಿರುವ ಶಾಖೆಗಳ ಸಂಖ್ಯೆ 39,823 ಮಾತ್ರ.

2009ರ ಮಾರ್ಚ್ ತಿಂಗಳಲ್ಲಿ 30,015 ಕೇಂದ್ರಗಳಲ್ಲಿ 43,905 ಶಾಖೆಗಳು ಆರೆಸ್ಸೆಸ್‌ನಿಂದ ನಡೆಸಲ್ಪಡುತ್ತಿದ್ದವು. ಅದು ಇದೇ ವರ್ಷದ ಜನವರಿ ತಿಂಗಳಿಗಾಗುವಾಗ 27,089 ಕೇಂದ್ರಗಳಲ್ಲಿ 39,823ಕ್ಕೆ ಇಳಿಕೆ ಕಂಡಿದೆ.

1925ರಲ್ಲಿ ಡಾ. ಕೆ.ಬಿ. ಹೆಡಗೇವಾರ್ ಅವರಿಂದ ಸ್ಥಾಪನೆಗೊಂಡ ಆರೆಸ್ಸೆಸ್ ಸದಸ್ಯರ ಸಂಖ್ಯೆಯನ್ನು ಅಂಕಿ-ಅಂಶ ದಾಖಲೆಗಳಲ್ಲಿ ಉಳಿಸಿಕೊಂಡಿಲ್ಲ. ಆದರೂ ಅಂದಾಜುಗಳ ಪ್ರಕಾರ ಪ್ರಸಕ್ತ ಆರೆಸ್ಸೆಸ್ ಹೊಂದಿರುವ ಸದಸ್ಯರ ಸಂಖ್ಯೆ 60 ಲಕ್ಷ.

ರಾಷ್ಟ್ರೀಯ ವಿಪತ್ತುಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗುವ ಈ ಸಂಘಟನೆ 'ಸಂಘ'ವೆಂದೇ ಹೆಚ್ಚು ಪ್ರಸಿದ್ಧಿ. ಆರೋಗ್ಯ, ಗ್ರಾಮೀಣಾಭಿವೃದ್ಧಿ, ಬುಡಕಟ್ಟು ಜನರ ಏಳ್ಗೆ, ಶೈಕ್ಷಣಿಕ ಪ್ರಗತಿ ಆರೆಸ್ಸೆಸ್ ಪ್ರಮುಖ ಗುರಿಗಳಾದರೂ, ರಾಷ್ಟ್ರೀಯತೆ ಅದರ ಧ್ಯೇಯವಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ.
PTI

ಆರೆಸ್ಸೆಸ್ ರಾಜಕೀಯ ಕಾರಣ?
ಆರಂಭದಲ್ಲಿ ರಾಜಕೀಯದಿಂದ ದೂರವೇ ಉಳಿದಿದ್ದ ಆರೆಸ್ಸೆಸ್ ಪ್ರತಿಪಾದಿಸುತ್ತಿದ್ದುದು ರಾಷ್ಟ್ರೀಯತೆ ಮತ್ತು ಹಿಂದುತ್ವ ಸಿದ್ಧಾಂತಗಳನ್ನು. ಆದರೆ ಬರಬರುತ್ತಾ ರಾಜಕೀಯ ಹಿಡಿತ ಸಾಧಿಸಲು ಯತ್ನಿಸಿದ್ದೇ ಪ್ರಸಕ್ತ ಅಧೋಗತಿಗೆ ಕಾರಣ ಎಂದೂ ಹೇಳಲಾಗುತ್ತಿದೆ.

ಬಿಜೆಪಿಯ ಆಂತರಿಕ ವಿಚಾರಗಳು ಸಂಪೂರ್ಣವಾಗಿ ಆರೆಸ್ಸೆಸ್‌ನಿಂದ ನಿಯಂತ್ರಿಸಲ್ಪಡುತ್ತಿರುವುದು ರಹಸ್ಯ ವಿಚಾರವೇನಲ್ಲ. ಇಂತಹ ಅನೇಕ ರಾಜಕೀಯ ಕಾರಣಗಳಿಂದಾಗಿ ಹಲವು ಕಾರ್ಯಕರ್ತರು ಆರೆಸ್ಸೆಸ್‌ನಿಂದ ದೂರವಾಗಿದ್ದಾರೆ ಎಂಬುದು ವಾಸ್ತವಾಂಶ.

ಹಿಂದುತ್ವ ತೀವ್ರವಾದದ ಕಿಡಿ...
ಮಹಾತ್ಮ ಗಾಂಧೀಜಿಯವರ ಹತ್ಯೆ ನಡೆದ 1948ರಲ್ಲಿ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲ್ಪಟ್ಟ 1977ರಲ್ಲಿ ಮತ್ತು 1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದಾಗ ಹೀಗೆ ಇತಿಹಾಸದಲ್ಲಿ ಮೂರು ಬಾರಿ ಆರೆಸ್ಸೆಸ್ ಕೇಂದ್ರ ಸರಕಾರದಿಂದ ನಿಷೇಧಕ್ಕೊಳಗಾಗಿದೆ.

ಆರೆಸ್ಸೆಸ್ ಮೇಲೆ ಬಾಂಬ್ ಸ್ಫೋಟದಂತಹ ದುಷ್ಕೃತ್ಯಗಳ ಆರೋಪಗಳೂ ಬಂದಿವೆ. ಇದಕ್ಕೆಲ್ಲ ಹಿಂದುತ್ವದ ತೀವ್ರವಾದಿಗಳೇ ಕಾರಣ. ಪ್ರಖರ ಹಿಂದುತ್ವ ಪ್ರತಿಪಾದಿಸುವ ಸಂಘಟನೆಗಳು ಕೂಡ ಆರೆಸ್ಸೆಸ್ ತೆಕ್ಕೆಯಲ್ಲಿದ್ದು, ಇವುಗಳನ್ನು ನಿಯಂತ್ರಿಸುವಲ್ಲಿ ಸಂಘ ಪರಿವಾರ ವಿಫಲವಾಗಿದೆ ಎಂದೇ ಹೇಳಲಾಗುತ್ತಿದೆ.

ಜಾತಿ ರಾಜಕೀಯದ ಪರಿಣಾಮ...
ಆರೆಸ್ಸೆಸ್ ಅಧಃಪತನಕ್ಕೆ ಜಾತಿ ರಾಜಕೀಯವನ್ನೂ ಉಲ್ಲೇಖಿಸಲಾಗುತ್ತಿದೆ. ಮೊದಲನೆಯದಾಗಿ ಆರೆಸ್ಸೆಸ್ ಬ್ರಾಹ್ಮಣಶಾಹಿ ಕೇಂದ್ರೀಕೃತ ವ್ಯವಸ್ಥೆಯಿಂದ ಸಂಪೂರ್ಣವಾಗಿ ಹೊರ ಬರದೇ ಇರುವುದು. ಎರಡನೇಯದಾಗಿ ಇದೇ ಅಂಶವನ್ನು ಜಾತ್ಯತೀತ ಸೋಗಿನಲ್ಲಿರುವ ಕೋಮುವಾದಿ ಪಕ್ಷಗಳು ಅಸ್ತ್ರವಾಗಿ ಬಳಸಿಕೊಂಡಿರುವುದು.

ಒಂದು ಕಾಲದಲ್ಲಿ ಉತ್ತರ ಪ್ರದೇಶದಲ್ಲಿ ಆರೆಸ್ಸೆಸ್ ಪ್ರಬಲ ಬೇರುಗಳನ್ನು ಹೊಂದಿತ್ತು. ಆದರೆ ಅಲ್ಲಿ ಮಾಯಾವತಿಯವರ ಬಹುಜನ ಸಮಾಜ ಪಕ್ಷ ಮತ್ತು ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷಗಳು ಸಂಘ ಪರಿವಾರಕ್ಕೆ ಪ್ರಮುಖ ಹೊಡೆತಗಳನ್ನು ನೀಡಿದ್ದು ದಲಿತರು ಮತ್ತು ಬ್ರಾಹ್ಮಣರ ಓಲೈಕೆ ಮೂಲಕ. ಪ್ರಸಕ್ತ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯನ್ನು ಹೊಂದಿರುವ ರಾಜ್ಯದಲ್ಲಿ ಆರೆಸ್ಸೆಸ್ ಶಿಥಿಲ ಸ್ಥಿತಿಯಲ್ಲಿದೆ.

ಮಿತಿ ಮೀರಿದ ಯಾತ್ರೆಗಳದ್ದೂ ಪಾತ್ರ...
ಆರೆಸ್ಸೆಸ್ ಪ್ರಚಾರ ವಿಭಾಗದ ಮುಖ್ಯಸ್ಥ ಮನಮೋಹನ್ ವೈದ್ಯ ಅವರ ಅಭಿಪ್ರಾಯವಿದು. ಇತ್ತೀಚಿನ ದಿನಗಳಲ್ಲಿ ಶಾಖೆಗಳಿಗೆ ಸಮಯ ಹೊಂದಿಸಿಕೊಳ್ಳಲು ಬಿಡುವಿಲ್ಲದ ಕಾಲದಲ್ಲಿರುವ ಜನತೆ ಕಷ್ಟಪಡುತ್ತಿದ್ದಾರೆ.

ಗ್ರಾಮೀಣ ಆರ್ಥಿಕತೆ ಮತ್ತು ಗೋ ರಕ್ಷಣೆಯ ಆಶಯ ಹೊತ್ತು ಕಳೆದ ವರ್ಷ ಸಂಘ ಪರಿವಾರ ರಾಷ್ಟ್ರವ್ಯಾಪಿ ನಡೆಸಿದ ವಿಶ್ವ ಮಂಗಲ ಗೋ ಗ್ರಾಮ ಯಾತ್ರೆಯಂತಹ ಚಳವಳಿಗಳು ಶಾಖೆಗಳ ಮೇಲೆ ಪರಿಣಾಮ ಬೀರಿವೆ. ಇಂತಹ ಯಾತ್ರೆಗಳಿಗಾಗಿ ಕಾರ್ಯಕರ್ತರು ತಮ್ಮ ಹೆಚ್ಚಿನ ಸಮಯವನ್ನು ವ್ಯಯಿಸಬೇಕಾಗುತ್ತದೆ. ಈ ಆಧುನಿಕ ಯುಗದಲ್ಲಿ ತಮ್ಮ ದೈನಂದಿನ ಅವಶ್ಯಕತೆಗಳಿಗಾಗಿ ಆರ್ಥಿಕ ಮೂಲಗಳನ್ನು ಅವಲಂಬಿಸಿರಬೇಕಾದ ಅನಿವಾರ್ಯತೆಯಿರುವುದರಿಂದ ಸುದೀರ್ಘ ಕಾಲ ಯಾತ್ರೆಗಳಲ್ಲಿ ಪಾಲ್ಗೊಂಡವರು ಶಾಖೆಗಳಿಗೂ ಹೋಗಲು ಆಸಕ್ತಿ ತೋರಿಸುತ್ತಿಲ್ಲ ಎಂಬ ಸೂಚ್ಯಾರ್ಥವನ್ನು ಹೊರಗೆಡವಿದ್ದಾರೆ ವೈದ್ಯ.

ನಗರೀಕರಣ, ಜೀವನ ಶೈಲಿಯ ಪಾತ್ರ...
ಆರೆಸ್ಸೆಸ್ ಜನಪ್ರಿಯತೆ ಕುಸಿಯಲು ನಗರೀಕರಣದಿಂದಾಗಿ ಬದಲಾದ ಪರಿಸ್ಥಿತಿಯಲ್ಲಿನ ಜೀವನ ಶೈಲಿಯ ಮೇಲೆ ಆರೋಪ ಹೊರಿಸುತ್ತಿರುವವರು ಸಂಘದ ವಾರಪತ್ರಿಕೆ 'ಆರ್ಗನೈಜರ್' ಮಾಜಿ ಸಂಪಾದಕ ಶೇಷಾದ್ರಿ ಚಾರಿ.

ಈ ಹಿಂದಿನ ದಿನಗಳಲ್ಲಿ ತಾನು ಮತ್ತು ತನ್ನ ಸಹಚರರು ಎಲ್ಲಿ ಬೇಕಾದರೂ ಶಾಖೆಗಳನ್ನು ಸ್ಥಾಪಿಸಬಹುದಿತ್ತು. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ಬದಲಾದ ಜೀವನ ಶೈಲಿಯನ್ನು ಶಾಖೆಗೆ ಹೊಂದಿಸಿಕೊಳ್ಳಲು ಕಷ್ಟವಾಗುತ್ತಿದೆ ಎನ್ನುತ್ತಾರೆ ಅವರು.

ನಿಯಮಗಳು ಸಡಿಲವಾಗದೇ ಇರುವುದು...
ಆರೆಸ್ಸೆಸ್‌ನಲ್ಲಿನ ಶಿಸ್ತಿನ ನಿಯಮಗಳಲ್ಲಿ ಯಾವುದೇ ಬದಲಾವಣೆಯಾಗದೇ ಇರುವುದು ಕೂಡ ಶಾಖೆಗಳ ಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಶಾಖೆಯ ಭಾಗವಾಗಲು ಐಟಿಸಿ, ಒಟಿಸಿ ಮುಂತಾದ ತರಬೇತಿ ಕಾರ್ಯಾಗಾರಗಳನ್ನು ಆರೆಸ್ಸೆಸ್ ನಡೆಸುತ್ತಿದೆ. ಇಲ್ಲಿ ಕಲಿಸಲಾಗುವ ಪ್ರಮುಖ ಪಾಠವೇ ಶಿಸ್ತು. ನಂತರ ರಾಷ್ಟ್ರೀಯತೆಯ ಅರಿವು, ಆತ್ಮರಕ್ಷಣೆ ಸೇರಿದಂತೆ ಇತರ ಕೌಶಲ್ಯಗಳು ಕೂಡ ಶಿಕ್ಷಕ ವರ್ಗದಿಂದ ನೀಡಲ್ಪಡುತ್ತದೆ. ಸಾಮಾನ್ಯವಾಗಿ ಇದನ್ನು ಶಾಲಾ ರಜಾದಿನಗಳಿಗೆ ಹೊಂದಿಕೊಳ್ಳುವಂತೆ ನಗರಗಳಲ್ಲಿ ಏರ್ಪಡಿಸಲಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ