ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭೋಪಾಲ್ ದುರಂತ ಸಂತ್ರಸ್ತರಿಗೆ 1,500 ಕೋಟಿ ಪರಿಹಾರ (Bhopal gas disaster | P Chidambaram | Manmohan Singh | Warren Anderson)
Bookmark and Share Feedback Print
 
ಭೋಪಾಲ್ ಅನಿಲ ದುರಂತ ಪ್ರಕರಣದ ಸಂಬಂಧ ಗೃಹ ಸಚಿವ ಪಿ. ಚಿದಂಬರಂ ನೇತೃತ್ವದ ಸಚಿವರುಗಳ ಸಮಿತಿಯು ತನ್ನ ವರದಿಯನ್ನು ಅಂತಿಮಗೊಳಿಸಿದ್ದು, ಸಂತ್ರಸ್ತರ ಪರಿಹಾರವನ್ನು 1,500 ಕೋಟಿ ರೂಪಾಯಿಗಳಿಗೆ ಹೆಚ್ಚಳ ಮಾಡುವಂತೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಶಿಫಾರಸು ಮಾಡಿದೆ.

ಅದರ ಪ್ರಕಾರ ದುರಂತದಿಂದ ಗಂಭೀರವಾಗಿ ಗಾಯಗೊಂಡವರು ಮತ್ತು ಅವರನ್ನು ಕಳೆದುಕೊಂಡವರ ಮನೆಯವರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಈ ಹಿಂದೆ ಮೂರು ಲಕ್ಷ ಪರಿಹಾರ ಪಡೆದುಕೊಂಡಿದ್ದವರಿಗೆ ಏಳು ಲಕ್ಷ ರೂಪಾಯಿ ಹೆಚ್ಚುವರಿ ಪರಿಹಾರ ನೀಡಲಾಗುತ್ತದೆ. ಈ ಪರಿಹಾರದ ಮೊತ್ತವನ್ನು ಕೇಂದ್ರ ಸರಕಾರವೇ ಭರಿಸುತ್ತದೆ.

ಶಾಶ್ವತವಾಗಿ ಅಂಗಹೀನಗೊಂಡಿರುವವರು ಅಥವಾ ಗಂಭೀರ ಪರಿಣಾಮಗಳನ್ನು ಎದುರಿಸುತ್ತಿರುವವರಿಗೆ ಐದು ಲಕ್ಷ ಹಾಗೂ ಭಾಗಶಃ ತೊಂದರೆಗಳನ್ನು ಅನುಭವಿಸಿದವರಿಗೆ ಮೂರು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಈ ಸಮಿತಿ ಶಿಫಾರಸು ಮಾಡಿದೆ.

1984ರ ಡಿಸೆಂಬರ್ 3ರ ರಾತ್ರಿ ಅಂದರೆ 26 ವರ್ಷಗಳ ಹಿಂದೆ ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಂಪನಿಯಲ್ಲಿ ನಡೆದಿದ್ದ ಕೇಳರಿಯದ ಅನಿಲ ದುರಂತದಲ್ಲಿ ಸಾವನ್ನಪ್ಪಿದ್ದ ಸಾವಿರಾರು ಮಂದಿಯ ಕುಟುಂಬಸ್ಥರಿಗೆ ಹಾಗೂ ಹಾನಿಗೊಳಗಾದವರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಸಂಬಂಧ ನಿರ್ಣಯಕ್ಕೆ ಬರಲು ಚಿದಂಬರಂ ನೇತೃತ್ವದ ಸಚಿವರ ಸಮಿತಿಯನ್ನು ರಚಿಸಲಾಗಿತ್ತು.

ವರದಿಯನ್ನು ಇಂದು ಅಪರಾಹ್ನ ಪ್ರಧಾನಿ ಸಿಂಗ್ ಅವರಿಗೆ ಸಲ್ಲಿಸಲಾಗಿದ್ದು, ಇದನ್ನು ಶುಕ್ರವಾರ ನಡೆಯುವ ಕೇಂದ್ರ ವಿಶೇಷ ಸಂಪುಟ ಸಭೆಯಲ್ಲಿ ಪರಿಗಣಿಸಲಾಗುತ್ತದೆ ಎಂದು ವರದಿಗಳು ಹೇಳಿವೆ.

ಆಂಡರ್ಸನ್ ಗಡೀಪಾರಿಗೆ ಯತ್ನ...
ದುರಂತದ ಸಂದರ್ಭದಲ್ಲಿ ಯೂನಿಯನ್ ಕಾರ್ಬೈಡ್ ಕಂಪನಿ ಮುಖ್ಯಸ್ಥನಾಗಿದ್ದ ಪ್ರಸಕ್ತ ಅಮೆರಿಕಾದಲ್ಲಿರುವ ವಾರೆನ್ ಆಂಡರ್ಸನ್ ವಶಕ್ಕೆ ಯತ್ನ ಮುಂದುವರಿಸುವ ನಿರ್ಧಾರವನ್ನು ಸಚಿವರು ತೆಗೆದುಕೊಂಡಿದ್ದು, ಇದನ್ನು ಪ್ರಧಾನ ಮಂತ್ರಿಯವರಿಗೆ ಶಿಫಾರಸು ಮಾಡಲಾಗಿದೆ.

ಆತನ ವಿರುದ್ಧದ ಆರೋಪಗಳನ್ನು ಕೈ ಬಿಟ್ಟಿರುವುದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ನಿರ್ಣಯಕ್ಕೂ ಬರಲಾಗಿದೆ. ಆತನನ್ನು ವಶಕ್ಕೆ ಪಡೆಯಲು ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನೂ ಮಾಡಬೇಕು ಎಂದು ಸಮಿತಿ ಸಲಹೆ ನೀಡಿದೆ.

ವರದಿಗಳ ಪ್ರಕಾರ 5,295 ಮಂದಿ ಘಟನೆ ನಡೆದ ತಕ್ಷಣವೇ ಸಾವನ್ನಪ್ಪಿದ್ದರು. ನಂತರದ ದಿನಗಳಲ್ಲಿ ದುರಂತದ ಛಾಯೆಯಿಂದಾಗಿ 10,047 ಮಂದಿ ಬಲಿಯಾಗಿದ್ದರು. ಒಟ್ಟಾರೆ 5,60,000 ಮಂದಿ ದುರಂತದಿಂದ ಬಾಧೆಗೊಳಗಾಗಿದ್ದಾರೆ. ಅವರಲ್ಲಿ 37,000 ಮಂದಿ ಶಾಶ್ವತ ಅಂಗ ಊನತೆಗೆ ಒಳಗಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ