ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೂಸನ್ನು ಮಹಡಿಯಿಂದ ಹೊರಗೆಸೆದು ಕೊಂದವಳೂ ತಾಯಿ! (Mother throws newborn | Pune | Laxmi Bharat Ingle | Hinjewadi police)
Bookmark and Share Feedback Print
 
ತಾನೇ ಜನ್ಮ ನೀಡಿದ ಮಗುವನ್ನು ಲಾಲಿಸಿ, ಪಾಲಿಸಿ ಮುದ್ದಿಸುವುದನ್ನು ಮರೆತ ಅಕಾಲಿಕ ಮಾತೆಯೊಬ್ಬಳು ಮೃಗೀಯವಾಗಿ ವರ್ತಿಸಿದ್ದು, ಎರಡನೇ ಮಹಡಿಯಿಂದ ಹೊರಕ್ಕೆಸೆದು ಕೊಂದೇ ಬಿಟ್ಟಿದ್ದಾಳೆ.

ಇದು ನಡೆದಿರುವುದು ಪುಣೆಯಲ್ಲಿ. ಶನಿವಾರ ರಾತ್ರಿ 19ರ ಹರೆಯದ ತಾಯಿ ತನ್ನ ಮಗುವನ್ನು ಈ ರೀತಿಯಾಗಿ ಮುಗಿಸಿದ್ದಾಳೆ. ಮೂಲಗಳ ಪ್ರಕಾರ ಕೆಲವೇ ದಿನಗಳ ಹಿಂದಷ್ಟೇ ಆಕೆಯ ಪ್ರಿಯಕರ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅವನಿಂದಾದ ಪಿಂಡ ತನಗೆ ಬೇಡವೆಂದು ಯುವತಿ ಅಕ್ರಮ ಸಂಬಂಧದ ಫಲವನ್ನು ಹೀಗೆ ಅಮಾನವೀಯವಾಗಿ ಚಿವುಟಿದ್ದಾಳೆ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.

ಇಲ್ಲಿನ ಪಿಂಪ್ರಿ ಕಾಲೇಜಿನಲ್ಲಿ ಡಿಎಡ್ ಕೋರ್ಸ್ ಮಾಡುತ್ತಿರುವ ಲಕ್ಷ್ಮಿಯ ಪ್ರಿಯಕರ ಮಗುವಿನ ತಂದೆ ಎಂದು ಹೇಳಲಾಗಿದೆ. ಆತ ಇತ್ತೀಚೆಗಷ್ಟೇ ನಡೆದಿದ್ದ ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದ.

ಲಾತೂರ್‌ನಲ್ಲಿನ ಲಕ್ಷ್ಮಿ ಭರತ್ ಇಂಗ್ಲೆ ಎಂಬಾಕೆಯ ಮೇಲೆ ಇದೀಗ ಹಿಂಜೇವಾಡಿ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿದ್ದಾರೆ. ಇದೇ ಪರಿಸರದ ಸೋಮನಾಥ ಮಾಂಡಲಿಕ್ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.

ಇಲ್ಲಿನ ಎರಡು ಮಹಡಿಯ ಫ್ಲಾಟ್ ಒಂದರಲ್ಲಿ ಬಾಡಿಗೆ ನಿವಾಸಿಯಾಗಿ ವಾಸಿಸುತ್ತಿದ್ದ ಏಳು ತಿಂಗಳ ಅವಿವಾಹಿತ ಗರ್ಭಿಣಿ ಲಕ್ಷ್ಮಿ ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ನಂತರ ಆಕೆ ಆಗಷ್ಟೇ ಹುಟ್ಟಿದ ಹಸುಳೆಯನ್ನು ಎರಡನೇ ಮಹಡಿಯಿಂದ ಕೆಳಕ್ಕೆ ಎಸೆದಿದ್ದಳು. ಅದು ಮಾಂಡಲಿಕ್ ನಿಂತಿದ್ದ ಮನೆಯ ಪಕ್ಕದ ಬಾತ್‌ರೂಂನ ಛಾವಣಿ ಮೇಲೆ ಬಿದ್ದಿತ್ತು.

ಲಕ್ಷ್ಮಿ ಮಗುವನ್ನು ಎಸೆಯುವುದನ್ನು ಸ್ವತಃ ಮಾಂಡಲಿಕ್ ನೋಡಿದ್ದರು. ನಂತರ ಸ್ಥಳದಲ್ಲಿ ಸಾಕಷ್ಟು ಜನ ಜಮಾಯಿಸಿದ್ದರು. ಅದೇ ಹೊತ್ತಿಗೆ ಲಕ್ಷ್ಮಿಯ ಸಹೋದರ ಆಕೆಗೆ ಹಣ ನೀಡಲೆಂದು ಅಲ್ಲಿಗೆ ಬಂದಿದ್ದ. ಆತನನ್ನು ಆಕೆಯ ಬಾಯ್‌ಫ್ರೆಂಡ್ ಇರಬಹುದು ಎಂದು ತಪ್ಪಾಗಿ ಅರ್ಥೈಸಿಕೊಂಡ ಸ್ಥಳೀಯರು ಚೆನ್ನಾಗಿ ಥಳಿಸಿದ್ದರು.

ನಂತರ ಪ್ರಕರಣದ ಸತ್ಯಾಸತ್ಯತೆ ಬಯಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಕ್ಷ್ಮಿಯನ್ನು ಬಂಧಿಸಿದ್ದಾರೆ. ಅಷ್ಟಾಗುವಾಗ ತನಗೆ ಮೈ ಹುಷಾರಿಲ್ಲ ಎಂಬ ಕಾರಣ ಮುಂದಿಟ್ಟ ಆರೋಪಿ ಆಸ್ಪತ್ರೆಗೆ ಚಿಕಿತ್ಸೆ ನೆಪದಲ್ಲಿ ದಾಖಲಾಗಿದ್ದಾಳೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ