ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಂದ್‌ನಿಂದ ಪೆಟ್ರೋಲ್ ದರ ಕಡಿಮೆಯಾಗದು: ಅಡ್ವಾಣಿ (BJP | Bharat bandh | fuel price hike | Nitin Gadkari)
Bookmark and Share Feedback Print
 
ಪ್ರತಿಪಕ್ಷಗಳು ಭಾರತ ಬಂದ್ ಮಾಡುವುದರಿಂದ ಪೆಟ್ರೋಲಿಯಂ ಉತ್ಪನ್ನಗಳ ದರ ಕಡಿಮೆಯಾಗದು ಎಂದು ಕೇಂದ್ರ ಸರಕಾರ ಜಾಹೀರಾತು ನೀಡಿರುವುದಕ್ಕೆ ಅದೇ ರೀತಿಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ, ನಾವು ಕೂಡ ಬಂದ್‌ನಿಂದ ಬೆಲೆ ಕಡಿಮೆಯಾಗುತ್ತದೆ ಎಂದು ಹೇಳುತ್ತಿಲ್ಲ; ಇಲ್ಲಿ ಪರಿಹಾರವಿರುವುದು ಸರಕಾರದಲ್ಲಿ, ಆದರೆ ಅದು ದರ ಹೆಚ್ಚಳ ಮಾಡಿ ಕೈಕಟ್ಟಿ ಕುಳಿತಿದೆ ಎಂದಿದ್ದಾರೆ.

ಜುಲೈ ಐದರ 'ಭಾರತ ಬಂದ್' ಕುರಿತಂತೆ ಎನ್‌ಡಿಎ ಮೈತ್ರಿಕೂಟ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಸೋಮವಾರದ ಬಂದ್ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈ ಸಭೆ ಸೇರಿತ್ತು.

ಭಾರತ ಬಂದ್‌ನಲ್ಲಿ ದೇಶದ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಭಾಗವಹಿಸುತ್ತಿರುವುದು ಬಹುಶಃ ಇದು ಭಾರತದ ರಾಜಕೀಯ ಇತಿಹಾಸದಲ್ಲಿ ಮೊದಲನೇ ಬಾರಿಯಾಗುತ್ತಿರಬಹುದು ಎಂದು ಎನ್‌ಡಿಎ ಕಾರ್ಯಾಧ್ಯಕ್ಷರಾಗಿರುವ ಅಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.

ಅದೇ ಹೊತ್ತಿಗೆ ಎನ್‌ಡಿಎಯೇತರ ರಾಜಕೀಯ ಪಕ್ಷಗಳನ್ನೂ ಬಂದ್‌ಗೆ ಕೈ ಜೋಡಿಸುವಂತೆ ಮಾಡಿದ ಎನ್‌ಡಿಎ ಸಂಚಾಲಕ ಹಾಗೂ ಜೆಡಿಯು ಅಧ್ಯಕ್ಷ ಶರದ್ ಯಾದವ್ ಅವರಿಗೂ ಇದೇ ಸಂದರ್ಭದಲ್ಲಿ ಅಡ್ವಾಣಿ ಕೃತಜ್ಞತೆ ಅರ್ಪಿಸಿದ್ದಾರೆ. ಈ ಬಂದ್‌ನಲ್ಲಿ ಎಡಪಕ್ಷಗಳು, ಆರ್‌ಜೆಡಿ, ಸಮಾಜವಾದಿ ಪಕ್ಷ, ಎಲ್‌ಜೆಪಿ ಮತ್ತು ಇತರ ಕೆಲವು ಸಣ್ಣ ಪಕ್ಷಗಳು ಕೂಡ ಪಾಲ್ಗೊಳ್ಳಲಿವೆ.

ಈ ಸಂದರ್ಭದಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ನೀಡಿರುವ ಜಾಹೀರಾತೊಂದನ್ನು ಅವರು ಉಲ್ಲೇಖಿಸಿದರು. ಯಾರು ಬಂದ್, ಪ್ರತಿಭಟನೆ ಮಾಡಿದರೂ ಪೆಟ್ರೋಲಿಯಂ ಉತ್ಪನ್ನಗಳ ದರ ಕಡಿಮೆಯಾಗದು ಎಂದು ಸರಕಾರ ತನ್ನ ಪ್ರಕಟಣೆಯಲ್ಲಿ ಹೇಳಿತ್ತು.

ಭಾರತ ಬಂದ್‌ನಿಂದಾಗಿ ಬೆಲೆಗಳು ಇಳಿಕೆಯಾಗುತ್ತವೆ ಎಂದು ನಾವು ಕೂಡ ಅಂದುಕೊಂಡಿಲ್ಲ ಅಥವಾ ಹೇಳುತ್ತಿಲ್ಲ. ಇದಕ್ಕೆ ಪರಿಹಾರ ಇರುವುದು ಸರಕಾರದ ಕೈಗಳಲ್ಲಿ. ದುರದೃಷ್ಟಕರ ವಿಚಾರವೆಂದರೆ ಅಂತಹ ಪರಿಹಾರ ತನ್ನಲ್ಲಿದೆ ಎಂಬುದರ ಯಾವುದೇ ಸಂಕೇತಗಳು ಸರಕಾರದಲ್ಲಿ ಕಾಣಿಸುತ್ತಿಲ್ಲ ಎಂದರು.

ಬಂದ್ ಸಂದರ್ಭದಲ್ಲಿ ಎಲ್ಲರೂ ಶಾಂತಿಯನ್ನು ಕಾಪಾಡುವಂತೆ, ಮೌನ ಪ್ರತಿಭಟನೆ ನಡೆಸುವಂತೆ ಎನ್‌ಡಿಎಯ ಎಲ್ಲಾ ಸದಸ್ಯರಿಗೆ ಅಡ್ವಾಣಿಯವರು ಇದೇ ಹೊತ್ತಿನಲ್ಲಿ ಮನವಿ ಮಾಡಿಕೊಂಡರು.

ಬಿಜೆಪಿಯಿಂದ ರಣತಂತ್ರ...
ಇತ್ತ ಬಿಜೆಪಿ ಪಕ್ಷದ ವತಿಯಿಂದ ಬಂದ್ ಯಶಸ್ವಿಗೊಳಿಸುವ ಕುರಿತು ಪ್ರತ್ಯೇಕ ಸಭೆ ನಡೆದಿದ್ದು, ನಗರಗಳ ಪ್ರತಿಭಟನೆಯಲ್ಲಿ ನಾಯಕರುಗಳು ಒಳಗೊಳ್ಳುವಂತೆ ನೋಡಿಕೊಳ್ಳಲಾಗಿದೆ.

ಅದರಂತೆ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ರಾಜನಾಥ್ ಸಿಂಗ್ ದೆಹಲಿಯಲ್ಲಿ, ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಭೋಪಾಲ್‌ನಲ್ಲಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಮತ್ತು ಮುಕ್ತಾರ್ ಅಬ್ಬಾಸ್ ನಖ್ವಿ ಲಕ್ನೋದಲ್ಲಿ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಉಳಿದಂತೆ ವೆಂಕಯ್ಯ ನಾಯ್ಡು ಹೈದರಾಬಾದ್‌ನಲ್ಲಿ, ಅನಂತ್ ಕುಮಾರ್ ಬೆಂಗಳೂರಿನಲ್ಲಿ, ಗೋಪಿನಾಥ್ ಮುಂಡೆ ಮುಂಬೈಯಲ್ಲಿ ಹಾಗೂ ವಸುಂಧರಾ ರಾಜೆ ಜೈಪುರದಲ್ಲಿ ಪ್ರತಿಭಟನೆಯನ್ನು ಮುನ್ನಡೆಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ