ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕಲಿ ಎನ್‌ಕೌಂಟರ್‌ಗೆ ಒಲ್ಲೆಯೆಂದ ಕರ್ನಲ್ ವ್ಯಥೆಯಿದು (Ketchup Colonel | Harvinder Kohli | S S Rao | Ravinder Singh)
Bookmark and Share Feedback Print
 
ನಿನ್ನ ವಶದಲ್ಲಿರುವ ಐವರು ಭಯೋತ್ಪಾದಕರನ್ನು ಕೊಂದು ಹಾಕು ಎಂದು ಮೇಲಿನ ಅಧಿಕಾರಿಗಳು ಆದೇಶ ನೀಡುವಾಗ ಹೃದಯ ಮರುಗಿರಬೇಕು, ಕೊಲ್ಲಲು ನಿರಾಕರಿಸಿದ. ಆದರೆ ಮೇಲಿನ ಅಧಿಕಾರಿಗಳನ್ನು ಮೆಚ್ಚಿಸಿ ಉದ್ಯೋಗದಲ್ಲಿ ಬಡ್ತಿ ಪಡೆದುಕೊಳ್ಳಲು ಏನೇನೋ ಕಸರತ್ತು ಮಾಡಿ ರಕ್ತದ ಬಣ್ಣ ಹಚ್ಚಿ ನಕಲಿ ಎನ್‌ಕೌಂಟರ್‌ನ ಫೋಟೋ ತೆಗೆದು ಕೊಟ್ಟಿದ್ದ. ಕೊನೆಗೆ ಅದೇ ಆತನ ಉದ್ಯೋಗಕ್ಕೆ ಮುಳುವಾಗಿತ್ತು.

ಈಗ ಆ ಬಲಿಪಶು ಮತ್ತೆ ಉದ್ಯೋಗಕ್ಕೆ ಮರು ನೇಮಕಗೊಳ್ಳುವ ಭರವಸೆಯಲ್ಲಿದ್ದಾನೆ. ಇದೇ ಜುಲೈ 8ರಂದು ಪ್ರಕರಣ ವಿಚಾರಣೆಗೆ ಬರಲಿದೆ.

ಈತನ ಹೆಸರು ಹರ್ವೀಂದರ್ ಸಿಂಗ್ ಕೋಹ್ಲಿ, ಮಿಲಿಟರಿಯಲ್ಲಿ ಕರ್ನಲ್ ಆಗಿ ಕಾರ್ಯನಿರ್ವಹಿಸಿದ್ದಾತ. 2003ರಲ್ಲಿ ಅಸ್ಸಾಂನ ಸಿಲ್ಚಾರ್ ಸಮೀಪದ ಬಾಡಾ ನಾಗಾಡನ್ ಎಂಬಲ್ಲಿ ನಡೆದಿರುವ ಘಟನೆ. ಪ್ರಕರಣವನ್ನು ಕೋರ್ಟ್ ಮಾರ್ಷಲ್ ವಿಚಾರಣೆಗೊಳಪಡಿಸಿದ ನಂತರ 2004ರಲ್ಲಿ ಕರ್ನಲ್ ಕೋಹ್ಲಿಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.

ಅವರನ್ನು ಮುಗಿಸು ಎಂದಿದ್ದರು...
ದಕ್ಷಿಣ ಅಸ್ಸಾಂನಲ್ಲಿ ಬಂಧನಕ್ಕೊಳಗಾಗಿದ್ದ ಐವರು 'ಅಸ್ಸಾಂ ಕಮಾಂಡೋ ಗ್ರೂಪ್' ಭಯೋತ್ಪಾದಕರನ್ನು ಮುಗಿಸು ಎಂದು ಮೇಲಧಿಕಾರಿಗಳು ಆದೇಶ ನೀಡಿದ್ದರು. ಆದರೆ ಇದಕ್ಕೆ ಕರ್ನಲ್ ಕೋಹ್ಲಿ ನಿರಾಕರಿಸಿದ್ದ. ಅದೊಂದು ಕೆಲಸ ನನ್ನಿಂದಾಗದು ಎಂದು ಕೈತೊಳೆದುಕೊಂಡಿದ್ದ.

ಅಷ್ಟಕ್ಕೆ ಬಿಡದ ಮೇಲಧಿಕಾರಿಗಳು, ನೀನು ಅವರನ್ನು ಕೊಲ್ಲಲೇ ಬೇಕು. ನಕಲಿ ಎನ್‌ಕೌಂಟರ್ ಮಾಡಿಯಾದರೂ ಸರಿ ಎಂದು ಮೇಲಿಂದ ಮೇಲೆ ಒತ್ತಡ ಹೇರತೊಡಗಿದರು. ಉಗ್ರರನ್ನು ಕೊಂದು ಹಾಕಿದ ದಾಖಲೆಗಳನ್ನಾದರೂ ಸೃಷ್ಟಿಸು, ನಮಗೆ ಬಡ್ತಿ ಮುಖ್ಯ ಎಂಬಂತೆ ಅವರು ಮಾತನಾಡಿದ್ದರು.

ಆಗ ಕರ್ನಲ್ ಕೋಹ್ಲಿಗೆ ಹೊಳೆದದ್ದು ಟೊಮ್ಯಾಟೋ ಗೊಜ್ಜಿನ ವಿಧಾನ. ಐವರು ಸ್ಥಳೀಯ ಯುವಕರನ್ನು ಕರೆ ತಂದು ನೆಲದಲ್ಲಿ ಅಡ್ಡಾದಿಡ್ಡಿ ಸತ್ತವರಂತೆ ಮಲಗಿಸಿದ ಕೋಹ್ಲಿ, ಅವರ ದೇಹದ ಮೇಲೆ ಟೊಮ್ಯಾಟೋ ಗೊಜ್ಜನ್ನು ಸವರಿ ಫೋಟೋ ತೆಗೆದ. ಅದನ್ನು ಮೇಲಧಿಕಾರಿಗಳಿಗೆ 'ಎನ್‌ಕೌಂಟರ್' ನಡೆಸಿದ ಚಿತ್ರ ಎಂದು ಕಳುಹಿಸಿಕೊಟ್ಟ.

ದುರದೃಷ್ಟವೆಂದರೆ ಸ್ವಲ್ಪವೇ ಸಮಯದಲ್ಲಿ ಅನಾಮಿಕ ದೂರೊಂದು ಕೋಹ್ಲಿ ವಿರುದ್ಧ ದಾಖಲಾಗಿ ವಿಚಾರಣೆಯೂ ನಡೆಯಿತು. ಪ್ರಕರಣದಲ್ಲಿ ತಪ್ಪಿತಸ್ಥ ಎಂದೂ ಸಾಬೀತಾಯಿತು. ಪರಿಣಾಮ ಕೋಹ್ಲಿಯನ್ನು ಕರ್ನಲ್ ಕೆಲಸದಿಂದ ವಜಾಗೊಳಿಸಿ ಮನೆಗೆ ಕಳುಹಿಸಲಾಯಿತು.

ಮೇಲಧಿಕಾರಿಗಳ ಆದೇಶ ಎಂದಿರಲಿಲ್ಲ...
ಇಷ್ಟಾದರೂ ತಾನು ನಡೆದುಕೊಂಡದ್ದು ಮೇಲಧಿಕಾರಿಗಳ ಆದೇಶದಂತೆ ಎಂದು ಯಾವ ಹೊತ್ತಿನಲ್ಲೂ ಕರ್ನಲ್ ಕೋಹ್ಲಿ ವಿಚಾರಣೆ ಸಂದರ್ಭದಲ್ಲಿ ಹೇಳಿರಲಿಲ್ಲ. ಇದಕ್ಕಿದ್ದ ಕಾರಣ ಬ್ರಿಗೇಡಿಯರ್‌ಗಳು ನೀಡಿದ ಭರವಸೆ. ನೀನು ತಪ್ಪಿತಸ್ಥನೆಂದು ಸಾಬೀತಾದರೂ ಎರಡು ವರ್ಷಗಳ ಹಿರಿತನ ನಷ್ಟ ಹೊರತುಪಡಿಸಿದರೆ ಬೇರೇನೂ ತೊಂದರೆಯಿಲ್ಲ ಎಂದು ಕೋಹ್ಲಿ ಕಿವಿಯೂದಿದ್ದರು.

ಅದನ್ನೇ ನಂಬಿದ್ದ ಕೋಹ್ಲಿಗೆ ಆಘಾತವಾಗಿದ್ದು ವಿಚಾರಣೆ ಮುಕ್ತಾಯಗೊಂಡು ಶಿಕ್ಷೆ ಪ್ರಕಟವಾದಾಗ. ಬಳಿಕ ತನ್ನ ಹಿರಿಯ ಅಧಿಕಾರಿಗಳ ವಿರುದ್ಧ ಕೋಹ್ಲಿ ತಿರುಗಿ ಬಿದ್ದಿದ್ದಾನೆ. ಹಿರಿಯ ಅಧಿಕಾರಿಗಳ ಚಿತಾವಣೆಯಿಂದ ತಾನು ಈ ಕ್ರಮಕ್ಕೆ ಮುಂದಾಗಿರುವುದಾಗಿ ಹೇಳಿದ್ದಾನೆ.

ತಕ್ಷಣವೇ ಆತನ ಬ್ರಿಗೇಡಿಯರ್ ಎಸ್.ಎಸ್. ರಾವ್ ಮತ್ತು ಮೇಜರ್ ಜನರಲ್ ರವೀಂದ್ರ ಸಿಂಗ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಯಿತು. ಆದರೂ ಸಂತಸಪಡುವ ಸರದಿ ಕೋಹ್ಲಿಯದ್ದಾಗಿರಲಿಲ್ಲ. ಯಾಕೆಂದರೆ ಆತನನ್ನು ಸೇವೆಗೆ ಸೇರಿಸಿಕೊಳ್ಳಲಿಲ್ಲ. ಬದಲಿಗೆ ಅಮಾನತುಗೊಂಡ ಇಬ್ಬರು ಮೇಲಧಿಕಾರಿಗಳನ್ನು ವರ್ಷದ ನಂತರ ಮತ್ತೆ ಸೇವೆಗೆ ಸೇರಿಸಿಕೊಳ್ಳಲಾಯಿತು.

ಆದರೆ ಇದೀಗ ಮಿಲಿಟರಿಯು ಕೋಹ್ಲಿಯನ್ನು ಮರು ನೇಮಕ ಮಾಡಿಕೊಳ್ಳುವ ಆಸಕ್ತಿ ತೋರಿಸಿದೆ. ರಕ್ಷಣಾ ಸಚಿವಾಲಯವೂ ಇದೇ ನಿಟ್ಟಿನಲ್ಲಿ ಯೋಚನೆ ಮಾಡುತ್ತಿದೆ. ಪ್ರಕರಣ ವಿಚಾರಣೆಯಲ್ಲಿದ್ದು, ಶೀಘ್ರದಲ್ಲೇ ಕೋಹ್ಲಿ ಹಣೆಬರಹ ನಿರ್ಧಾರವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ