ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್‌ನಲ್ಲಿ ಪೆಟ್ರೋಲ್‌ಗೆ 26 ರೂ., ನಮ್ಮಲ್ಲಿ 53 ಯಾಕೆ? (Bharat Bandh | Nitin Gadkari | BJP | Congress)
Bookmark and Share Feedback Print
 
ಭಾರತ ಬಂದ್ ಸಂಪೂರ್ಣ ಯಶಸ್ವಿಯಾಗಿದೆ ಎಂದು ಹೇಳಿಕೊಂಡಿರುವ ಬಿಜೆಪಿ, ಎಡರಂಗ ಮತ್ತು ಇತರ ಪ್ರತಿಪಕ್ಷಗಳು ಪ್ರತಿಭಟನೆಗೆ ಸಹಕರಿಸಿದ ಜನತೆಗೆ ಅಭಿನಂದನೆ ಸಲ್ಲಿಸಿರುವ ಜತೆಗೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಇಳಿಸಬೇಕು ಮತ್ತು ಅಗತ್ಯ ವಸ್ತುಗಳ ದರಯೇರಿಕೆಯನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿವೆ.

ಅಲ್ಲದೆ ಪಕ್ಕದ ರಾಷ್ಟ್ರಗಳಲ್ಲಿ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್‌ಗಳನ್ನು ನೀಡುವುದು ಸಾಧ್ಯವಾಗುವುದಾದರೆ, ನಮ್ಮ ದೇಶದಲ್ಲಿ ಯಾಕೆ ಸಾಧ್ಯವಿಲ್ಲ ಎಂದೂ ಬಿಜೆಪಿ ಪ್ರಶ್ನಿಸಿದೆ.

ಈ ಕುರಿತು ವಿವರಣೆ ನೀಡುತ್ತಾ ಸರಕಾರದ ಮೇಲೆ ಹರಿಹಾಯ್ದಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ರವಿಶಂಕರ್ ಪ್ರಸಾದ್, ಕಾಂಗ್ರೆಸ್ ಮಧ್ಯವರ್ತಿಗಳು ಮತ್ತು ದಲ್ಲಾಳಿಗಳ ಹಿತಾಸಕ್ತಿಗಳಿಗೆ ಶರಣಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನು ಪಕ್ಕದ ರಾಷ್ಟ್ರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬಹಿರಂಗಪಡಿಸುತ್ತವೆ. ಈಗ ಪಾಕಿಸ್ತಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 26 ರೂಪಾಯಿ. ಬಾಂಗ್ಲಾದೇಶದಲ್ಲಿ 22 ರೂ, ನೇಪಾಳದಲ್ಲಿ 34 ರೂ. ತೀರಾ ಸಂಕಷ್ಟದಲ್ಲಿರುವ ಅಫಘಾನಿಸ್ತಾನದಲ್ಲೇ ಕೇವಲ 33 ರೂಪಾಯಿ. ಆದರೆ ಯುಪಿಎ ಸರಕಾರದ ಆಡಳಿತವಿರುವ ಭಾರತದಲ್ಲಿ 53 ರೂಪಾಯಿ. ಭಾರತಕ್ಕೆ ಯಾಕೆ ಕಡಿಮೆ ದರದಲ್ಲಿ ಪೆಟ್ರೋಲ್ ಮಾರಲು ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ತೈಲ ಕಂಪನಿಗಳು ನಷ್ಟದಲ್ಲಿವೆ ಎಂದು ಸರಕಾರ ಬೆಲೆಯೇರಿಕೆಗೆ ಸಮರ್ಥನೆ ನೀಡುತ್ತಿದೆ. ವಾಸ್ತವದಲ್ಲಿ 2009-10ರ ಆರ್ಥಿಕ ವರ್ಷದಲ್ಲಿ ಇಂಡಿಯನ್ ಆಯಿಲ್ ಕಂಪನಿ 4,663 ಕೋಟಿ, ಭಾರತ್ ಪೆಟ್ರೋಲಿಯಂ 834 ಕೋಟಿ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಯು 544 ಕೋಟಿ ರೂಪಾಯಿಗಳ ಲಾಭ ಗಳಿಸಿದೆ. ಹಾಗಾದರೆ ನಿಜವಾಗಿಯೂ ನಷ್ಟವಾಗುತ್ತಿರುವುದು ಯಾರಿಗೆ ಎಂದು ಮತ್ತೊಂದು ಮಹತ್ವದ ಪ್ರಶ್ನೆಯನ್ನು ಕಾಂಗ್ರೆಸ್‌ನತ್ತ ಪ್ರಸಾದ್ ಎಸೆದಿದ್ದಾರೆ.

ಬಂದ್ ಯಶಸ್ವಿಯಾಗಿದೆ, ಅಭಿನಂದನೆ...
ಭಾರತ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಇದಕ್ಕೆ ಸಹಕರಿಸಿದ ಜನತೆ ಮತ್ತು ಮಾಧ್ಯಮಗಳಿಗೆ ಅಭಿನಂದನೆ ಹೇಳಲು ಬಯಸುತ್ತಿದ್ದೇವೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ನವದೆಹಲಿ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ಕೇರಳ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಬೆಲೆಯೇರಿಕೆ ವಿರುದ್ಧ ನಡೆದ ಬಂದ್‌ಗೆ ವ್ಯಾಪಕ ಪ್ರತಿಕ್ರಿಯೆ ಸಿಕ್ಕಿದೆ. ಕೇಂದ್ರ ಸರಕಾರದ ವಿರುದ್ಧ ಜನತೆ ಆಕ್ರೋಶಗೊಂಡಿದ್ದಾರೆ ಎನ್ನುವುದಕ್ಕೆ ಇನ್ನೇನು ಸಾಕ್ಷಿ ಬೇಕಾಗಿದೆ ಎಂದೂ ಅವರು ಪ್ರಶ್ನಿಸಿದ್ದಾರೆ.

ಬಂದ್‌ನಿಂದ ಜನತೆಗೆ ತೊಂದರೆಯಾಗುತ್ತಿದೆ ಎಂಬುದನ್ನು ಮತ್ತೊಬ್ಬ ನಾಯಕ ಅರುಣ್ ಜೇಟ್ಲಿ ಒಪ್ಪಿಕೊಂಡಿದ್ದಾರೆ. ಆದರೆ ಬಡಜನರ, ಸಾಮಾನ್ಯ ಜನರ ಕಷ್ಟಗಳನ್ನು, ಅವರು ಅನುಭವಿಸುತ್ತಿರುವ ಸಂಕಷ್ಟವನ್ನು ಅರಿಯದ ಸರಕಾರಕ್ಕೆ ಪ್ರಯೋಗಿಸಿದ ಕೊನೆಯ ಅಸ್ತ್ರ ಇದಾಗಿತ್ತು. ಆದರೂ ಸರಕಾರ ಕಣ್ಣು ತೆರೆಯುತ್ತಿಲ್ಲ ಎಂದು ಅವರು ಬಂದ್ ಸಮರ್ಥಿಸಿಕೊಂಡಿದ್ದಾರೆ.

ಬೆಲೆಯೇರಿಕೆಗೆ ಯುಪಿಎ ಕಾರಣ...
ಪೆಟ್ರೋಲಿಯಂ ದರಯೇರಿಕೆಯನ್ನು ಮರು ಪರಿಶೀಲನೆ ನಡೆಸಬೇಕೆಂದು ಆಗ್ರಹಿಸಿರುವ ಸಿಪಿಐಎಂ, ಅಗತ್ಯ ವಸ್ತುಗಳು ಮತ್ತು ಆಹಾರ ವಸ್ತುಗಳ ಬೆಲೆಯೇರಿಕೆಗೆ ನೇರವಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕಾರಣ ಎಂದಿದೆ.

ಈಗ ಆಗಿರುವ ಎಲ್ಲಾ ಆವಾಂತರಗಳಿಗೂ ಯುಪಿಎ ಸರಕಾರವೇ ಕಾರಣ. ತೈಲ ಬೆಲೆಯನ್ನು ಮುಕ್ತವಾಗಿಡುವುದು ಎಂಬುದರ ಅರ್ಥವೇ ತೈಲ ಕಂಪನಿಗಳಿಗೆ ಸಹಕಾರ ನೀಡುವುದು ಮತ್ತು ಜನತೆಯನ್ನು ಮಾರುಕಟ್ಟೆಯ ಕರಾಳತೆಗೆ ತಳ್ಳುವುದು ಎಂದು ಸಿಪಿಐಎಂ ಪಾಲಿಟ್ ಬ್ಯೂರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭಾರತ ಬಂದ್ ಜನ ವಿರೋಧಿ...
ಬಿಜೆಪಿ ಮತ್ತು ಇತರ ಪಕ್ಷಗಳು ನಡೆಸಿರುವ ಬಂದ್ ಜನ ವಿರೋಧಿ ಮತ್ತು ಅಸಂವಿಧಾನಿಕ ಎಂದು ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಬಂದ್ ಜನ ವಿರೋಧಿ ಮತ್ತು ಬಿಜೆಪಿ ಇದರಿಂದ ಏನನ್ನೂ ಸಾಧಿಸಿದಂತಾಗಿಲ್ಲ. ಬಿಜೆಪಿಯು ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ವರ್ತಿಸುತ್ತಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಆರೋಪಿಸಿದ್ದಾರೆ.

ಬಂದ್‌ನಿಂದ 10,000 ಕೋಟಿ ನಷ್ಟ...
ವಿರೋಧ ಪಕ್ಷಗಳು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆ ಖಂಡಿಸಿ ನಡೆಸಿದ ಬಂದ್‌ನಿಂದಾಗಿ ದೇಶದ ಅರ್ಥ ವ್ಯವಸ್ಥೆಗೆ 10,000 ಕೋಟಿ ರೂಪಾಯಿಗಳ ನಷ್ಟವಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ ತಿಳಿಸಿದೆ.

ಬಂದ್ ಯಾವುದೇ ರೀತಿಯಿಂದಲೂ ಸಮರ್ಥನೀಯವಲ್ಲ. ರಾಜಕೀಯ ಪಕ್ಷಗಳು ದೈನಂದಿನ ಚಟುವಟಿಕೆಗಳಿಗೆ ಅಡ್ಡ ಬರುವುದು ಮತ್ತು ತೊಂದರೆ ಕೊಡುವುದು ಸೂಕ್ತವಲ್ಲ ಎಂದು ಗೋದ್ರೆಜ್ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಪಟ್ಟ ಸುದ್ದಿಗಳು:
** ಭಾರತ ಬಂದ್‌ಗೆ ವ್ಯಾಪಕ ಬೆಂಬಲ; ಜನಜೀವನ ಅಸ್ತವ್ಯಸ್ತ
** ಪ್ರತಿಪಕ್ಷಗಳ ಭಾರತ ಬಂದ್ ಅಸಮರ್ಥನೀಯ: ಕೇಂದ್ರ
** ಜನಜೀವನ ಅಸ್ತವ್ಯಸ್ತ, ಕಲ್ಲುತೂರಾಟ: ರಾಜ್ಯದಲ್ಲಿ ಬಂದ್ ಯಶಸ್ವಿ
ಸಂಬಂಧಿತ ಮಾಹಿತಿ ಹುಡುಕಿ