ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರವಾದಿ ಪ್ರಶ್ನೆ ಕೇಳಿದ್ದಕ್ಕೆ ಕೈ ಕತ್ತರಿಸಿದ ಮತಾಂಧರು (Popular Front of India | T.J. Joseph | Kerala | Prophet remarks)
Bookmark and Share Feedback Print
 
ಪ್ರವಾದಿ ಮಹಮ್ಮದ್ ಕುರಿತು ಪ್ರಶ್ನೆಪತ್ರಿಕೆ ತಯಾರಿಸಿದ್ದನ್ನೇ ಮುಂದಿಟ್ಟುಕೊಂಡ ಮತಾಂಧರು ಕಾಲೇಜೊಂದರ ಉಪನ್ಯಾಸಕನ ಕೈಯನ್ನೇ ಕತ್ತರಿಸಿ ಹಾಕಿದ ಹೇಯ ಘಟನೆ ಪಕ್ಕದ ಕೇರಳದಲ್ಲಿ ನಡೆದಿದೆ. ಘಟನೆ ಸಂಬಂಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಇಬ್ಬರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ನಡೆದಿರುವುದು ಎರ್ನಾಕುಲಂ ಜಿಲ್ಲೆಯ ಮುವಾತ್ತುಪುಳ ಎಂಬಲ್ಲಿ. ಇಲ್ಲಿನ ತೊಡುಪುಳ ಎಂಬಲ್ಲಿನ ನ್ಯೂಮ್ಯಾನ್ ಕಾಲೇಜ್‌ನಲ್ಲಿನ ಮಲಯಾಳಂ ಪ್ರೊಫೆಸರ್ ಟಿ.ಜೆ. ಜೋಸೆಫ್ ಎಂಬವರೇ ತನ್ನ ಬಲ ಅಂಗೈ ಕಳೆದುಕೊಂಡವರು.

ಘಟನೆ ನಡೆಯುತ್ತಿದ್ದಂತೆ ಮೇಕಲಾಡಿ ಸಮೀಪದ ಮುಂಡೇತ್ ಎಂಬಲ್ಲಿನ ಅಶ್ರಫ್ (37) ಮತ್ತು ಕೋಡಮಂಗಲಂ ಎಂಬಲ್ಲಿನ ಇರಾಮಲೂರ್‌ನ ಜಾಫರ್ (28) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಮುವಾತ್ತುಪುಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇವರ ಜತೆ ಇನ್ನೂ 12 ಮಂದಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇವರೆಲ್ಲರೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಕ್ಕೆ ಸೇರಿದವರು ಎಂದು ಪೊಲೀಸ್ ಮೂಲಗಳು ಹೇಳಿವೆ.

ನ್ಯೂಮ್ಯಾನ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ಜೋಸೆಫ್ ಕೋಮು ಸೌಹಾರ್ದ ಕೆಡಿಸಿದ್ದ ಆರೋಪದ ಮೇಲೆ ಬಂಧನಕ್ಕೊಳಗಾದ ನಂತರ ಅವರ ಅಂಗೈಯನ್ನು ಕತ್ತರಿಸಿ ಹಾಕಲಾಗಿದೆ. ಕುಟುಂಬದೊಂದಿಗೆ ಚರ್ಚ್‌ನಿಂದ ಮರಳುತ್ತಿದ್ದ ವೇಳೆ ದುಷ್ಕರ್ಮಿಗಳು ಅವರನ್ನು ಕಾರಿನಿಂದ ಎಳೆದು ಹಾಕಿಬಲ ಮುಂಗೈಯನ್ನು ಕತ್ತರಿಸಿ ಹಾಕಿದ್ದಾರೆ.

ಕೋಮು ಸೌಹಾರ್ದತೆ ಕೆಡಿಸಿದ ಆರೋಪ...
ಬಿ.ಕಾಂ. ಎರಡನೇ ವರ್ಷದ ಪದವಿ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದ ಜೋಸೆಫ್, ದೇವರು ಮತ್ತು ಮಹಮ್ಮದ್ ನಡುವಿನ ಕಾಲ್ಪನಿಕ ಮಾತುಕತೆಯ ಭಾಗವೊಂದನ್ನು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸುವಂತೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಕೇಳಲಾಗಿತ್ತು.

ಇಲ್ಲಿ ಉಲ್ಲೇಖಿಸಿದ ಮಹಮ್ಮದ್ ಎಂಬುವುದನ್ನು ಪ್ರವಾದಿ ಮಹಮ್ಮದ್ ಎಂದೇ ಪರಿಗಣಿಸಿದ ಕೆಲವು ನಿರ್ದಿಷ್ಟ ಮುಸ್ಲಿಂ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿ, ಪ್ರೊಫೆಸರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದವು. ಕ್ರೈಸ್ತ ಚರ್ಚ್ ವತಿಯಿಂದ ನಡೆಸಲ್ಪಡುವ ಈ ಕಾಲೇಜಿನ ಮೇಲೂ ಕಲ್ಲು ತೂರಾಟ ನಡೆಸಲಾಗಿತ್ತು.

ನಂತರ ಕಾಲೇಜು ಆಡಳಿತ ಮಂಡಳಿಯು ಕ್ಷಮೆ ಯಾಚಿಸಿತ್ತು. ಸರಕಾರದ ಸೂಚನೆಯಂತೆ ಆರೋಪಿ ಪ್ರೊಫೆಸರ್ ಜೋಸೆಫ್ ಅವರನ್ನು ಒಂದು ವರ್ಷ ಅಮಾನತು ಮಾಡಿತ್ತು.

ನಂತರ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಂತೆ ಜೋಸೆಫ್ ಕಣ್ಮರೆಯಾಗಿದ್ದರು. ಆದರೆ ಒಂದೆರಡು ವಾರಗಳ ನಂತರ ಕೋಮು ಸೌಹಾರ್ದತೆಗೆ ಧಕ್ಕೆ ತಂದ ಆರೋಪದ ಮೇಲೆ ಬಂಧಿಸಿದ್ದರು. ಕೆಲವೇ ದಿನಗಳಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಘಟನೆಗೆ ಭಾರೀ ಖಂಡನೆ...
ಮತಾಂಧ ಶಕ್ತಿಗಳ ಕೃತ್ಯವನ್ನು ಕೇರಳ ಸೇರಿದಂತೆ ದೇಶದಾದ್ಯಂತ ಹಲವರು ಖಂಡಿಸಿದ್ದಾರೆ. ಇಂಡಿಯನ್ ಮುಸ್ಲಿಂ ಲೀಗ್, ಕೇರಳ ಕಾಂಗ್ರೆಸ್ (ಮಣಿ), ಆಡಳಿತಾರೂಢ ಸಿಪಿಐಎಂ ಸೇರಿದಂತೆ ಕೇರಳದ ಬಹುತೇಕ ರಾಜಕೀಯ ಪಕ್ಷಗಳು ಮತ್ತು ಮುಖಂಡರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇದು ಅಮಾನವೀಯ ಕೃತ್ಯವಾಗಿದ್ದು, ಪಕ್ಷಭೇದ ಮರೆತು ಎಲ್ಲರೂ ಪ್ರತಿಭಟಿಸಬೇಕು. ಪ್ರೊಫೆಸರ್ ಮುಂಗೈ ಕತ್ತರಿಸುವ ಹೇಯ ಕೃತ್ಯಕ್ಕೆ ಮುಂದಾಗಿರುವ ಮತಾಂಧರ ವಿರುದ್ಧ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕೇರಳ ಗೃಹ ಸಚಿವ ಕೊಡೆಯೇರಿ ಬಾಲಕೃಷ್ಣನ್ ಇತರ ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಂಗೈ ಮರುಜೋಡಣೆ...
ಕೊಚ್ಚಿಯ ಆಸ್ಪತ್ರೆಗೆ ದಾಖಲಾಗಿರುವ ಉಪನ್ಯಾಸಕ ಜೋಸೆಫ್ ಈಗಾಗಲೇ ಎರಡು ಸುದೀರ್ಘ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ. ಅವರ ಅಂಗೈಯನ್ನು ಯಶಸ್ವಿಯಾಗಿ ಮರು ಜೋಡಣೆ ಮಾಡಲಾಗಿದೆ. ಜೋಸೆಫ್ ಆರೋಗ್ಯ ಸ್ಥಿರವಾಗಿದೆ ಮತ್ತು ಅವರು ಪ್ರಜ್ಞಾವಸ್ಥೆಯಲ್ಲಿದ್ದಾರೆ. ಆದರೂ ತುರ್ತು ನಿಗಾ ಘಟಕದಲ್ಲೇ ಅವರು ಮುಂದುವರಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ