ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ಶಂಕಿತನೆಂದು ಗುರುತಿಸಲ್ಪಟ್ಟಿರುವ ಪಿಡಿಪಿ ನಾಯಕ ಅಬ್ದುಲ್ ನಾಸಿರ್ ಮದನಿಯನ್ನು ಬಂಧಿಸಲು ಕಳೆದ ಹಲವು ದಿನಗಳಿಂದ ಕೊಲ್ಲಂನಲ್ಲಿ ಬೀಡು ಬಿಟ್ಟಿರುವ ಪೊಲೀಸರಿಗೆ ಇದುವರೆಗೂ ಆತನನ್ನು ಮುಖಾಮುಖಿಯಾಗುವುದು ಸಾಧ್ಯವಾಗಿಲ್ಲ. ಕೇರಳ ಸರಕಾರ ಆತನ ಬಂಧನಕ್ಕೆ ಅನುಮತಿ ನೀಡದಿರುವುದೇ ಮೇಲ್ನೋಟಕ್ಕೆ ಸಿಗುವ ಕಾರಣ. ಈ ನಡುವೆ ಮದನಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾನೆ.
ಸೋಮವಾರ ಕರ್ನಾಟಕದ ಉನ್ನತ ಪೊಲೀಸ್ ಅಧಿಕಾರಿಗಳು ಕೊಲ್ಲಂಗೆ ಬಂದ ನಂತರ ಮದನಿ ಬಂಧನ ಸನ್ನಿಹಿತ ಎಂದು ಹೇಳಲಾಗಿತ್ತು. ಆದರೆ ಇದುವರೆಗೂ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾಗಿಲ್ಲ.
ಈ ನಡುವೆ ಎರಡೂ ರಾಜ್ಯಗಳ ಸಚಿವರುಗಳು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿದ್ದಾರೆ. ಕೇರಳ ಪೊಲೀಸ್ ಇಲಾಖೆಯು ತಮ್ಮ ನಿರೀಕ್ಷೆಗೆ ತಕ್ಕಂತೆ ಸ್ಪಂದಿಸಿಲ್ಲ ಎಂದು ಕರ್ನಾಟಕ ಆರೋಪಿಸಿದರೆ, ಬಂಧನ ನಿರ್ಧರಿಸಬೇಕಾಗಿರುವುದು ಕರ್ನಾಟಕ ಪೊಲೀಸರು ಎಂದು ಅತ್ತ ಕೇರಳ ಪ್ರತ್ಯಾರೋಪ ಮಾಡಿದೆ.
ಮಲಯಾಳಂ ಟಿವಿ ಚಾನೆಲ್ ಒಂದರ ಜತೆ ಮಾತನಾಡುತ್ತಿದ್ದ ಗೃಹಸಚಿವ ವಿ.ಎಸ್. ಆಚಾರ್ಯ, ನಮಗೆ ಕೇರಳ ಸರಕಾರವು ಪೂರಕ ಸಹಕಾರ ನೀಡುತ್ತಿಲ್ಲ. ನಾವು ಪದೇ ಪದೇ ಮನವಿಯನ್ನು ಮಾಡುತ್ತಾ ಬಂದಿದ್ದೇವೆ. ಆದರೆ ಯಾವುದೂ ಅಂದುಕೊಂಡಂತೆ ಸಾಗುತ್ತಿಲ್ಲ. ಇದೇ ಮುಂದುವರಿದಲ್ಲಿ ನಾವು ಉಳಿದ ಇತರ ಆಯ್ಕೆಗಳತ್ತ ಗಮನ ಹರಿಸಬೇಕಾಗುತ್ತದೆ ಎಂದಿದ್ದಾರೆ.
ಅತ್ತ ಕೇರಳ ಗೃಹಸಚಿವ ಕೊಡಿಯೇರಿ ಬಾಲಕೃಷ್ಣನ್ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಮದನಿಯನ್ನು ಯಾವಾಗ ಬಂಧಿಸಬೇಕು ಎಂಬುದನ್ನು ಕರ್ನಾಟಕವಷ್ಟೇ ನಿರ್ಧರಿಸಬೇಕಿದೆ, ನಾವು ಯಾವುದೇ ರೀತಿಯ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ.
ಅನಾರೋಗ್ಯ ನಾಟಕ... ಇದರ ಜತೆಜತೆಗೆ ಸ್ಫೋಟದ ಶಂಕಿತ ಆರೋಪಿ ಮದನಿ ತನ್ನ ಆರೋಗ್ಯ ದಿನೇ ದಿನೇ ಹದಗೆಡುತ್ತಿದೆ ಎಂಬುದನ್ನು ಬಿಂಬಿಸಲು ಯತ್ನಿಸುತ್ತಿದ್ದಾನೆ. ಇಂದು ಸಹ ಸ್ಥಳೀಯ ಆಸ್ಪತ್ರೆಯಿಂದ ಆರು ಜನ ವೈದ್ಯರು ಆತನನ್ನು ಬಂದು ಪರೀಕ್ಷಿಸಿ ಹೋಗಿದ್ದಾರೆ.
ಆಂಬುಲೆನ್ಸ್‌ನಲ್ಲಿ ಬಂದ ವೈದ್ಯರುಗಳು ರಕ್ತ ಮಾದರಿಯನ್ನು ಸಂಗ್ರಹಿಸಿದ್ದು, ಫಲಿತಾಂಶ ಬಂದ ನಂತರವಷ್ಟೇ ಮದನಿಯನ್ನು ಆಸ್ಪತ್ರೆಗೆ ಸೇರಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ತನ್ನ ಆರೋಗ್ಯ ಸರಿಯಿಲ್ಲ. ಆದರೂ ಶೀಘ್ರದಲ್ಲೇ ನ್ಯಾಯಾಲಯದಲ್ಲಿ ಶರಣಾಗುವುದಾಗಿ ಈ ಹಿಂದೆ ಮದನಿ ಹೇಳಿಕೊಂಡಿದ್ದ. ಈ ನಡುವೆಯೇ ಕರ್ನಾಟಕದ ಬಿಜೆಪಿ ಸರಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ದ.
ಆತನ ಮನೆಯ ಸುತ್ತಲೂ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಜತೆಗೆ ಆತನ ಬೆಂಬಲಿಗರು ಕೂಡ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ವರದಿಗಳು ಹೇಳಿವೆ.
ಈ ನಡುವೆ ಮದನಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಜಾಮೀನು ನೀಡುವಂತೆ ಮನವಿ ಮಾಡಿದ್ದಾನೆ. ಪ್ರಕರಣ ಮಂಗಳವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡಿರುವುದರಿಂದ ಮದನಿ ಬಂಧನ ಭೀತಿ ಎದುರಿಸುತ್ತಿದ್ದಾನೆ.