ಹೈದರಾಬಾದ್, ಗುರುವಾರ, 9 ಸೆಪ್ಟೆಂಬರ್ 2010( 17:14 IST )
ಅಲಹಾಬಾದ್ ಹೈಕೋರ್ಟ್ ಸೆಪ್ಟೆಂಬರ್ 24ರಂದು ನೀಡಲಿರುವ ತೀರ್ಪಿಗಾಗಿ ನಾವು ಕಾಯುತ್ತಿದ್ದೇವೆ. ಮುಸ್ಲಿಂ ಸಮುದಾಯವು ಈ ಸಂದರ್ಭದಲ್ಲಿ ಶಾಂತಿಯನ್ನು ಕಾಪಾಡಬೇಕು ಎಂದು ಮನವಿ ಮಾಡಿರುವ ಹೈದರಾಬಾದ್ ಸಂಸದ ಅಸಾದುದ್ದೀನ್ ಒವಾಯಿಸಿ, ಅಯೋಧ್ಯೆಯಲ್ಲಿ ರಾಮ ಮಂದಿರ ಇರಲೇ ಇಲ್ಲ. ಹಾಗೊಂದು ವೇಳೆ ನಮ್ಮ ವಿರುದ್ಧ ತೀರ್ಪು ಬಂದಲ್ಲಿ ಸುಪ್ರೀಂ ಕೋರ್ಟಿಗೆ ಹೋಗುವುದಾಗಿ ತಿಳಿಸಿದ್ದಾರೆ.
ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್ (ಎಂಐಎಂ) ಪಕ್ಷದ ಅಧ್ಯಕ್ಷರೂ ಆಗಿರುವ ಇವರು, ಲಕ್ನೋ ಪೀಠವು ನೀಡಲಿರುವ ತೀರ್ಪು ಮುಸ್ಲಿಮರ ಪರವಾಗಿರುತ್ತದೆ ಎಂಬ ಭರವಸೆ ನನ್ನಲ್ಲಿದೆ ಎಂದು ಹೇಳಿದ್ದಾರೆ.
ನಮ್ಮ ಪರವಾಗಿ ತೀರ್ಪು ಬರದೇ ಇದ್ದರೆ ನಾವು ಸುಪ್ರೀಂ ಕೋರ್ಟಿಗೆ ಹೋಗುತ್ತೇವೆ. ತೀರ್ಪು ನಮ್ಮ ಪರವಾಗಿಯೇ ಬರುವ ಬಗ್ಗೆ ನಮಗೆ ಸರ್ವಶಕ್ತ ಅಲ್ಲಾಹುವಿನ ಮೇಲೆ ಸಂಪೂರ್ಣ ಭರವಸೆಯಿದೆ ಎಂದು ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರನ್ನುದ್ದೇಶಿಸಿ ಅವರು ತಿಳಿಸಿದರು.
PR
ನ್ಯಾಯಾಲಯ ತೀರ್ಪು ನೀಡಿದ ಕೂಡಲೇ ನಾವು ಸಂಭ್ರಮಿಸುವುದು ಅಥವಾ ನರ್ತಿಸುವ ಅಗತ್ಯವಿಲ್ಲ. ನಾವು ನಮ್ಮ ಮಸೀದಿಗಳನ್ನು ರಕ್ಷಿಸಲು ಸಾಕಷ್ಟು ಯತ್ನಗಳನ್ನು ಮಾಡುತ್ತಿವೆಯೋ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಅಲ್ಲಿ ಯಾವತ್ತೂ ಮಂದಿರ ಇರಲಿಲ್ಲ. ಅಲ್ಲಿದ್ದದ್ದು ಮಸೀದಿ. ಸಂಘ ಪರಿವಾರವು ಸಾರ್ವಜನಿಕರಿಗೆ ಕಾಣುವಂತೆಯೇ ಅಲ್ಲಿದ್ದ ಮಸೀದಿಯನ್ನು ಧ್ವಂಸಗೊಳಿಸಿತ್ತು ಎಂದು ಅಸಾದುದ್ದೀನ್ ಅಭಿಪ್ರಾಯಪಟ್ಟರು.
ಈ ದೇಶದ ಬಹುದೊಡ್ಡ ಭಯೋತ್ಪಾದನಾ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಎಂದು ಬಣ್ಣಿಸಿರುವ ಹೈದರಾಬಾದ್ ಸಂಸದ, ಮೊದಲ ಭಯೋತ್ಪಾದಕ ಮಹಾತ್ಮಾ ಗಾಂಧೀಜಿಯವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ. ಆರೆಸ್ಸೆಸ್ ಭಯೋತ್ಪಾದನೆ ಮಾಡುತ್ತಿದೆ ಎನ್ನುವುದಕ್ಕೆ ಬಾಬ್ರಿ ಮಸೀದಿ ಧ್ವಂಸವೇ ಸಾಕ್ಷ್ಯ ಎಂದರು.
ಗೃಹಸಚಿವ ಪಿ. ಚಿದಂಬರಂ ಅವರು 'ಕೇಸರಿ ಭಯೋತ್ಪಾದನೆ' ಎಂಬ ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಸಚಿವರು ಬಹಿರಂಗವಾಗಿ 'ಹಿಂದೂ ಭಯೋತ್ಪಾದನೆ' ಎಂದು ಕರೆಯಬೇಕಿತ್ತು ಎಂದರು.
ಇಲ್ಲಿ ಜಿಹಾದಿ, ಮುಸ್ಲಿಂ ಮತ್ತು ಇಸ್ಲಾಮಿಕ್ ಭಯೋತ್ಪಾದಕರು ಇರುವಾಗ, ಹಿಂದೂ ಭಯೋತ್ಪಾದಕರು ಯಾಕೆ ಇರಬಾರದು? ಭಯೋತ್ಪಾದನೆಗೆ ಧರ್ಮವಿಲ್ಲ ಎಂದು ಈಗ ಹೇಳುತ್ತಿದ್ದೀರಿ. ಆದರೆ ನೀವು ಕಳೆದ 15 ವರ್ಷಗಳಿಂದ ನಮ್ಮನ್ನು ಅದೇ ರೀತಿಯಾಗಿ ಹಿಂಸಿಸಿದ್ದನ್ನು ಮರೆತು ಬಿಟ್ಟಿರಾ ಎಂದು ಪ್ರಶ್ನಿಸಿದರು.
ತೀರ್ಪು ಸರ್ವಸಮ್ಮತವಾಗಿರಬೇಕು: ಕಾರಟ್ ಅಲಹಾಬಾದ್ ಉಚ್ಚ ನ್ಯಾಯಾಲಯವು ನೀಡಲಿರುವ ಅಯೋಧ್ಯೆ ಕುರಿತ ತೀರ್ಪನ್ನು ಈ ದೇಶದ ಪ್ರತಿಯೊಬ್ಬರೂ ಸ್ವೀಕರಿಸಬೇಕು ಮತ್ತು ಗೌರವಿಸಬೇಕು ಎಂದು ಭಾರತೀಯ ಕಮ್ಯೂನಿಸ್ಟ್ (ಮಾರ್ಕಿಸ್ಟ್) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಕರೆ ನೀಡಿದ್ದಾರೆ.
ನ್ಯಾಯಾಲಯದ ತೀರ್ಪು ಪ್ರತಿಯೊಬ್ಬರಿಗೂ ಅನ್ವಯವಾಗುವಂತಿರಬೇಕು ಎಂಬುದು ನಮ್ಮ ನಿಲುವು ಎಂದು ಪಾಟ್ನಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಕಾರಟ್ ಅಭಿಪ್ರಾಯಪಟ್ಟರು.
ಪಕ್ಷದ ಕಾರ್ಯಕ್ರಮಕ್ಕಾಗಿ ಬಿಹಾರದಲ್ಲಿರುವ ಅವರು, ಅಯ್ಯೋಧ್ಯೆಯ ಒಡೆತನದ ಕುರಿತು ನ್ಯಾಯಾಲಯ ನೀಡಲಿರುವ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ನಮ್ಮ ಪಕ್ಷವೂ ಅಂತಿಮ ತೀರ್ಪಿಗಾಗಿ ಕಾಯುತ್ತಿದೆ. ಯಾವುದಾದರೂ ಪಕ್ಷಕ್ಕೆ ತೀರ್ಪು ಸಮಾಧಾನ ತರದೇ ಇದ್ದಲ್ಲಿ, ಅದರ ವಿರುದ್ಧ ಮೇಲಿನ ನ್ಯಾಯಾಲಯಕ್ಕೆ ಹೋಗಬಹುದಾಗಿದೆ ಎಂದರು.
125 ವರ್ಷಗಳ ಇತಿಹಾಸ ಹೊಂದಿರುವ ವಿವಾದಿತ ರಾಮಜನ್ಮಭೂಮಿ - ಬಾಬ್ರಿ ಮಸೀದಿ ಪ್ರಕರಣದ ವಿಚಾರಣೆ ಮುಗಿಸಿರುವ ಅಲಹಾಬಾದ್ ಹೈಕೋರ್ಟ್ ವಿಶೇಷ ಪೀಠವು ಸೆಪ್ಟೆಂಬರ್ 24ರಂದು ತೀರ್ಪು ನೀಡಲಿದೆ ಎಂದು ನಿನ್ನೆಯಷ್ಟೇ ಹೈಕೋರ್ಟ್ ರಿಜಿಸ್ಟ್ರಾರ್ ಪ್ರಕಟಿಸಿದ್ದಾರೆ.