ಜಾರ್ಖಂಡ್ ರಾಜಕೀಯ ಬಿಕ್ಕಟ್ಟು ಕೊನೆಗೊಳ್ಳುವುದು ಖಚಿತವಾಗಿದೆ. ಸೆಪ್ಟೆಂಬರ್ 11ರ ಶನಿವಾರದಂದು ಮುಖ್ಯಮಂತ್ರಿಯಾಗಿ ಬಿಜೆಪಿಯ ಅರ್ಜುನ್ ಮುಂಡಾ ಹಾಗೂ ಉಪ ಮುಖ್ಯಮಂತ್ರಿಗಳಾಗಿ ಸುದೇಶ್ ಮಹತೋ ಮತ್ತು ಹೇಮಂತ್ ಸೊರೆನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಹೊಸದಾಗಿ ನಡೆಸಲಾದ ಮಾತುಕತೆಯಂತೆ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಪದವಿ ಬಿಜೆಪಿ ಪಾಲಾದರೆ, ಸರಕಾರಕ್ಕೆ ಬೆಂಬಲ ನೀಡುತ್ತಿರುವ ಎರಡು ಪಕ್ಷಗಳಿಗೆ ಉಪಮುಖ್ಯಮಂತ್ರಿ ಸ್ಥಾನಗಳನ್ನು ಹಂಚಲು ನಿರ್ಧರಿಸಲಾಗಿದೆ. ಸ್ಪೀಕರ್ ಸ್ಥಾನವನ್ನು ಬಿಜೆಪಿ ತಾನೇ ಉಳಿಸಿಕೊಳ್ಳಲು ತೀರ್ಮಾನಿಸಿದೆ.
ಸೆಪ್ಟೆಂಬರ್ 14ರಂದು ಮುಂಡಾ ಜಾರ್ಖಂಡ್ ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸಲಿದ್ದಾರೆ.
ಶಿಬು ಸೊರೆನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಜತೆಗಿನ ಅಧಿಕಾರ ಹಂಚಿಕೆ ಕುರಿತು ಮತ್ತೊಮ್ಮೆ ಮಾತುಕತೆ ನಡೆಸಬೇಕು ಎಂಬ ಬಿಜೆಪಿ ಹಿರಿಯ ನಾಯಕರ ಮಾತನ್ನು ಬದಿಗೆ ತಳ್ಳಿರುವ ರಾಜ್ಯ ಬಿಜೆಪಿ, ರಾಜಕೀಯ ಅಸ್ಥಿರತೆಯನ್ನು ನಿವಾರಿಸಲು ಯತ್ನಿಸಿದೆ.
ಬಿಜೆಪಿಯ 18, ಜೆಎಂಎಂನ 18, ಎಜೆಎಸ್‌ಯುನ ಐದು, ಜೆಡಿಯುವಿನ ಇಬ್ಬರು ಮತ್ತು ಇಬ್ಬರು ಪಕ್ಷೇತರರು ಸೇರಿದಂತೆ ಒಟ್ಟು 43 ಶಾಸಕರ ಬೆಂಬಲ ತನಗಿದೆ ಎಂದು ಹೇಳಿಕೊಂಡಿರುವ ಮುಂಡಾ, ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಲಿರುವ ಭರವಸೆ ವ್ಯಕ್ತಪಡಿಸಿದ್ದಾರೆ.
ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಮುಂಡಾ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ರಘುವರ ದಾಸ್ ಅವರು ಈ ಸ್ಥಾನವನ್ನು ತೊರೆದ ನಂತರ ಮುಂಡಾರನ್ನು ಆರಿಸಲಾಗಿತ್ತು.
ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿ ಮತ್ತು ಎಡಪಕ್ಷಗಳು ಲೋಕಸಭೆಯಲ್ಲಿ ಮಂಡಿಸಿದ್ದ ಖಂಡನಾ ನಿರ್ಣಯದಲ್ಲಿ ಜೆಎಂಎಂ ವರಿಷ್ಠ ಶಿಬು ಸೊರೆನ್ ಅವರು ಸರಕಾರದ ಪರ ಮತ ಚಲಾಯಿಸಿದ ನಂತರ ಜಾರ್ಖಂಡ್‌ನಲ್ಲಿನ ಜೆಎಂಎಂ ಮತ್ತು ಬಿಜೆಪಿ ಮೈತ್ರಿ ಸರಕಾರ ಉರುಳಿ ಬಿದ್ದಿತ್ತು. ಬಳಿಕ ಜಾರ್ಖಂಡ್‌ನಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು.