ಕಾಂಗ್ರೆಸ್ 'ಯುವರಾಜ' ರಾಹುಲ್ ಗಾಂಧಿಯವರ ಭಾವಚಿತ್ರವನ್ನು ಎಡಿಟ್ ಮಾಡಿದ ಆಗ್ರಾದ ಎಂಟು ಕಾರ್ಯಕರ್ತರನ್ನು ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷದಿಂದ ಹೊರ ದಬ್ಬಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿಯವರ ಭಾವಚಿತ್ರವನ್ನು ತಿದ್ದುಪಡಿ ಮಾಡಿರುವುದನ್ನು ಅವರು ಒಪ್ಪಿಕೊಂಡಿದ್ದು, ಕ್ಷಮೆ ಯಾಚಿಸಿದ್ದಾರೆ. ಆದರೂ ಅವರನ್ನು ಒಂದು ವರ್ಷಗಳ ಕಾಲ ಅಮಾನತಿನಲ್ಲಿಡಲು ಪಕ್ಷ ನಿರ್ಧರಿಸಿದೆ ಎಂದು ಕಾಂಗ್ರೆಸ್ ತಿಳಿಸಿದೆ.
PR
ತಾವು ರಾಹುಲ್ ಗಾಂಧಿಯವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದೇವೆ ಎಂಬುದನ್ನು ತೋರಿಸಲು ಬೇರೆಯವರ ದೇಹವಿರುವ ಚಿತ್ರಕ್ಕೆ ರಾಹುಲ್ ತಲೆಯ ಚಿತ್ರವನ್ನು ಈ ಕಾರ್ಯಕರ್ತರು ಅಂಟಿಸಿದ್ದರು. ಇದನ್ನೇ ಮುಂದಿಟ್ಟುಕೊಂಡ ಪಕ್ಷವು ಅವರನ್ನು ಅಮಾನತುಗೊಳಿಸುವ ಕಠಿಣ ಕ್ರಮಕ್ಕೆ ಮುಂದಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪಕ್ಷದ ರಾಜ್ಯ ಘಟಕವು, ತನಿಖೆಗೆ ಆದೇಶ ನೀಡಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಎಲ್ಲಾ ಎಂಟು ಮಂದಿ ಕಾರ್ಯಕರ್ತರಿಗೂ ಶೋಕಾಸ್ ನೊಟೀಸ್ ಜಾರಿ ಮಾಡಲಾಗಿತ್ತು.
ಎರಡು ದಿನಗಳ ಹಿಂದಷ್ಟೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಅವರನ್ನು ಟೀಕಿಸಿದ್ದಕ್ಕಾಗಿ ಉತ್ತರ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ರಾಮ್ ಲೋತಾನ್ ನಿಷಾದ್ ಅವರನ್ನು ಪಕ್ಷದಿಂದ ಹೊರ ದಬ್ಬಲಾಗಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ ಇತರ ಎಂಟು ಮಂದಿಯನ್ನು ಹೊರಗೆ ಹಾಕಲಾಗಿದೆ.