ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಮತಾ ಮತ್ತು ನಕ್ಸಲರಿಗೆ ಕೇಂದ್ರದ ಅನುಗ್ರಹ: ಕಾರಟ್ (UPA govt | Mamata Banerjee | Maoists | Prakash Karat)
Bookmark and Share Feedback Print
 
2011ರ ಪಶ್ಚಿಮ ಬಂಗಾಲ ಚುನಾವಣೆಯಲ್ಲಿ ಎಡರಂಗದ ಸರಕಾರವನ್ನು ಧೂಳೀಪಟ ಮಾಡಬೇಕೆಂಬ ಉದ್ದೇಶವನ್ನಿಟ್ಟುಕೊಂಡಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಮಾವೋವಾದಿಗಳನ್ನು ಪೋಷಿಸುತ್ತಿದೆ ಎಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಆರೋಪಿಸಿದ್ದಾರೆ.

ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಎಡಪಕ್ಷದ ಸರಕಾರವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೆಳಗಿಳಿಸುವ ಸಲುವಾಗಿ ಕೇಂದ್ರವು ತೃಣಮೂಲ ಕಾಂಗ್ರೆಸ್ ಮತ್ತು ನಕ್ಸಲರನ್ನು ಬೆಂಬಲಿಸುತ್ತಿದೆ ಎಂದರು.

ಅಲ್ಲದೆ ಪಶ್ಚಿಮ ಮಿಡ್ನಾಪುರ, ಬಂಕಾರಾ ಮತ್ತು ಪುರುಲಿಯಾಗಳಲ್ಲಿ 170ಕ್ಕೂ ಹೆಚ್ಚು ಸಿಪಿಐಎಂ ಕಾರ್ಯಕರ್ತರನ್ನು ಮಾವೋವಾದಿಗಳ ಮೂಲಕ ಹತ್ಯೆಗೈಯಲು ಬ್ಯಾನರ್ಜಿಯವರಿಗೆ ಯುಪಿಎ ಸರಕಾರವು ಪ್ರಚೋದನೆ ನೀಡಿತ್ತು ಎಂಬ ಗಂಭೀರ ಆರೋಪವನ್ನೂ ಕಾರಟ್ ಮಾಡಿದರು.

ವಿಧಾನಸಭಾ ಚುನಾವಣೆಗಳಲ್ಲಿ ತೃಣಮೂಲ ಕಾಂಗ್ರೆಸ್ ಜಯಗಳಿಸಬೇಕೆಂಬ ಉದ್ದೇಶದಿಂದ ಸಾವಿರಾರು ಸಿಪಿಐಎಂ ಕಾರ್ಯಕರ್ತರನ್ನು ತಮ್ಮ ಮನೆಗಳಿಂದ ಬಲವಂತವಾಗಿ ಹೊರಗಟ್ಟಲಾಗಿದೆ. ಅವರೀಗ ನಿರಾಶ್ರಿತರಾಗಿ ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ ಎಂದಿರುವ ಅವರು, ಕೇಂದ್ರದ ನೀತಿಗಳನ್ನು ಪ್ರಶ್ನಿಸಿದ್ದಾರೆ.

ಲಾಲಗಢ ‌ರ‌್ಯಾಲಿಯಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಸೇರಿದಂತೆ ಕೇಂದ್ರದ ಹಲವು ಸಚಿವರು ಪಾಲ್ಗೊಂಡಿರುವುದನ್ನು ಉಲ್ಲೇಖಿಸಿರುವ ಕಾರಟ್, ಕೇಂದ್ರವು ಮಾವೋವಾದಿ ಸಮಸ್ಯೆಯನ್ನು ಬಗೆಹರಿಸಲು ಅನುಸರಿಸುತ್ತಿರುವ ವಿಧಾನವನ್ನು ಟೀಕಿಸಿದರು.

ಆದರೂ ತಮ್ಮ ಕಾರ್ಯಕರ್ತರು ಸುಮ್ಮನೆ ಕುಳಿತಿಲ್ಲ. ನಕ್ಸಲ್ ಬಾಧಿತ ಜಾರ್ಖಂಡ್ ಗಡಿ ಪ್ರದೇಶದ ಮೂರು ಜಿಲ್ಲೆಗಳಲ್ಲಿ ನೆಲೆ ಕಂಡುಕೊಳ್ಳಲು ಎಡಪಕ್ಷದ ಸದಸ್ಯರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಅಯೋಧ್ಯೆ ಪರಿಣಾಮಗಳು ರಾಜ್ಯದಲ್ಲಿ ಕಾಣಿಸಿಕೊಳ್ಳಬಹುದೇ ಎಂಬ ಪ್ರಶ್ನೆಗೆ ಕಾರಟ್, 1984ರ ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲೂ ಪಶ್ಚಿಮ ಬಂಗಾಲದಲ್ಲಿ ಯಾವುದೇ ಹಿಂಸಾಚಾರಗಳು ನಡೆದಿರಲಿಲ್ಲ. ನಂತರದ 1992ರ ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸದ ನಂತರವೂ ಶಾಂತಿಯಿತ್ತು. ಹಾಗಾಗಿ ರಾಜ್ಯದಲ್ಲಿ ಯಾವುದೇ ವಿದ್ವಂಸಕ ಕೃತ್ಯಗಳಿಗೆ ಅವಕಾಶವಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ